ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಹೆಸರಿಗೆ ಕೊಕ್: ಷಡ್ಯಂತ್ರದಿಂದ ನಾಯಕರಾಗಲ್ಲವೆಂದ ವಿಜಯೇಂದ್ರ

ಕಳೆದ ಕೆಲವು ದಿನಗಳಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿದೆ. ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ವಿಚಾರ ಚರ್ಚೆಯಲ್ಲಿರುವ ಬೆನ್ನಲ್ಲೇ ಇದೀಗ ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆ ವಿಚಾರ ಕೂಡ ವಿವಾದಕ್ಕೀಡಾಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿವರ ಇಲ್ಲಿದೆ.

ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಕುಮಾರಸ್ವಾಮಿ ಹೆಸರಿಗೆ ಕೊಕ್: ಷಡ್ಯಂತ್ರದಿಂದ ನಾಯಕರಾಗಲ್ಲವೆಂದ ವಿಜಯೇಂದ್ರ
ಬಿವೈ ವಿಜಯೇಂದ್ರ
Updated By: Ganapathi Sharma

Updated on: Jun 26, 2024 | 12:11 PM

ನವದೆಹಲಿ, ಜೂನ್ 26: ಕುತಂತ್ರ ಹಾಗೂ ಷಡ್ಯಂತ್ರ ಮಾಡಿದರೆ ನಾಯಕರಾಗಿ ಹೊರ ಹೊಮ್ಮಲ್ಲ. ಸಮುದಾಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಾಂಗ್ರೆಸ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು. ಕೆಂಪೇಗೌಡ ಜಯಂತಿ (Kempegowda Jayanti) ಆಹ್ವಾನ ಪತ್ರಿಕೆಯಿಂದ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೆಸರು ಕೈಬಿಡುವ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಬಗ್ಗೆ ನಮಗೆ ಅನುಕಂಪ ಇಲ್ಲ. ಆದರೆ ರಾಜ್ಯದ ಜನರ ಬಗ್ಗೆ ಅನುಕಂಪ ಇದೆ ಎಂದರು.

‘ಡಿಕೆಶಿ ಸೊಕ್ಕು ಮುರಿಯಲು ಹೆಚ್ಚುವರಿ ಡಿಸಿಎಂ ಬೇಡಿಕೆ’

ಕಾಂಗ್ರೆಸ್​ನಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಸೃಷ್ಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್​ ಸೊಕ್ಕು ಮುರಿಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅವರನ್ನು ಕಟ್ಟಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಒತ್ತಡ ಹಾಕುತ್ತಿದ್ದಾರೆ. ನನಗೆ ಭರವಸೆಯಿದೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗುತ್ತಾರೆ. ಹೈಕಮಾಂಡ್ ಮನವೊಲಿಸಿ ಡಿಸಿಎಂ ಹುದ್ದೆ ಸೃಷ್ಟಿ ಮಾಡುತ್ತಾರೆ ಎಂದರು.

ಕರ್ನಾಟಕದಲ್ಲಿ ಬೆಲೆ ಏರಿಕೆ ಪರ್ವ: ವಿಜಯೇಂದ್ರ ಕಿಡಿ

ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ರಾಜ್ಯದ ಜನರಿಗೆ ಬರೆ ಎಳೆಯುವ ಕೆಲಸ ಆಗುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಕಳೆದ ವಾರ ಸಿಎಂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ನಾವು ಪ್ರಶ್ನೆ ಮಾಡಿದರೆ ಉದ್ಧಟತನದ ಉತ್ತರ ಹೇಳುತ್ತಾರೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸಿಎಂ ಸಿದ್ದರಾಮಯ್ಯ ಯಾಕಿಷ್ಟು ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ವೇತನಕ್ಕಾಗಿ ಮುಂದುವರಿದ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಹೋರಾಟ; ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ

ಕಾಂಗ್ರೆಸ್ಸಿಗರು ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ನೋಡಿದರೆ ಅಯ್ಯೋ ಎನ್ನಿಸುತ್ತಿದೆ. ಆಡಳಿತ ಪಕ್ಷದ ಶಾಸಕರು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಅಭಿವೃದ್ಧಿಗೆ ಹಣ ಕೊಡಿ ಎಂದು ಸಿಎಂ ಮೇಲೆ ಒತ್ತಡ ಹಾಕ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ