ವೇತನಕ್ಕಾಗಿ ಮುಂದುವರಿದ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಹೋರಾಟ; ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ
ವೇತನ ದೊರೆಯದೆ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಪಡಿಪಾಟಲು ಜೋರಾಗಿದೆ. ಈಗಾಗಲೇ ವೇತನಕ್ಕಾಗಿ ಹೋರಾಟ ನಡೆಸುತ್ತಿರುವ ಅವರು, ಇದೀಗ ಮತ್ತೆ ಸಂಬಳ ಬಿಡುಗಡೆಗೆ ಆಗ್ರಹಿಸಿ ಗಡುವು ನೀಡಿದ್ದಾರೆ. ಅಷ್ಟರೊಳಗೆ ವೇತನ ಬಿಡುಗಡೆ ಮಾಡದಿದ್ದರೆ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ‘108 ಆಂಬ್ಯುಲೆನ್ಸ್’ ಸಿಬ್ಬಂದಿ, ಸರ್ಕಾರದ ನಡುವಣ ಸಂಘರ್ಷದ ಕುರಿತ ವರದಿ ಇಲ್ಲಿದೆ.
ಬೆಂಗಳೂರು, ಜೂನ್ 26: ಬಾಕಿ ಇರುವ ವೇತನ ಪಾವತಿಸುವಂತೆ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಹೋರಾಟ (108 ambulance staff) ಮುಂದುವರಿಸಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ಕಳೆದ ಆರು ತಿಂಗಳಿನಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಜಿವಿಕೆ (GVK) ಸಂಸ್ಥೆ ನಡುವಿನ ಕಿತ್ತಾಟದಿಂದ ಆಂಬ್ಯುಲೆನ್ಸ್ ಸಿಬ್ಬಂದಿ ಬೀದಿಗೆ ಬೀಳುವಂತಾಗಿದೆ.
ಕಳೆದ ಆರು ತಿಂಗಳಿನಿಂದ 3 ಸಾವಿರಕ್ಕೂ ಅಧಿಕ ನೌಕರರಿಗೆ ಸಂಬಳ ನೀಡಲಾಗಿಲ್ಲ. ಇದೀಗ ಆಂಬ್ಯುಲೆನ್ಸ್ ಸಿಬ್ಬಂದಿ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರತಿ ಸಿಬ್ಬಂದಿಗೆ ಜಿವಿಕೆ ಸಂಸ್ಥೆ ಈವರೆಗೆ 2.16 ಲಕ್ಷ ರೂ. ಸಂಬಳ ಬಾಕಿ ಉಳಿಸಿಕೊಂಡಿದೆ. ಇದೀಗ ಜಿವಿಕೆಗೆ ಆಂಬ್ಯುಲೆನ್ಸ್ ನೌಕರರ ಸಂಘ ಹೊಸ ಡೆಡ್ ಲೈನ್ ಕೊಟ್ಟಿದೆ. ಗುರುವಾರ ಸಂಜೆಯೊಳಗೆ ಸಂಬಳ ನೀಡದಿದ್ದರೆ ಮತ್ತೆ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಿದೆ.
ಮಕ್ಕಳ ಶಾಲೆ ಫೀಜ್, ರೇಷನ್, ಇತರೆ ಖರ್ಚಿಗೆ ಸಾಲ ಮಾಡುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಕುಟುಂಬ ಸಮೇತ ಬೀದಿಗಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೇ ಮೊದಲ ವಾರದಿಂದಲೇ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ವೇತನಕ್ಕಾಗಿ ಹೋರಾಟ, ಮುಷ್ಕರ ಆರಂಭಿಸಿದ್ದರು. ಆದರೆ, ಮಸ್ಯೆ ಬಗೆಹರಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತರು ಭರವಸೆ ನೀಡಿದ ನಂತರ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದಿದ್ದರು.
ಏನು ಹೇಳಿದ್ದರು ಆರೋಗ್ಯ ಸಚಿವ?
ಸರ್ಕಾರದ ಕಡೆಯಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ವೇತನ ಬಾಕಿ ಉಳಿಸಿಕೊಂಡಿಲ್ಲ. ನ್ಯಾಯಯುತವಾಗಿ ಕೊಡಬೇಕಾದ ಸಂಬಳ ಕೊಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಕಳೆದ ತಿಂಗಳು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಇಂದಿನಿಂದ ಆಂಬ್ಯುಲೆನ್ಸ್ ಸೇವೆ ಬಂದ್? ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಕುಮಾರಸ್ವಾಮಿ
2023-24ನೇ ಆರ್ಥಿಕ ವರ್ಷದಲ್ಲಿ 108 ಆಂಬ್ಯುಲೆನ್ಸ್ ಸೇವೆಗಾಗಿ 210.33 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 162.40 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದ ಆರೋಗ್ಯ ಸಚಿವರು, 108 ಆಂಬ್ಯುಲೆನ್ಸ್ ಸಿಬ್ಬಂದಿ ಕಾನೂನುಬಾಹಿರವಾಗಿ ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 am, Wed, 26 June 24