AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ನಕಲಿ ವೈದ್ಯರ ಹಾವಳಿ, ಪಿಯುಸಿ ಕಲಿತು ಆಸ್ಪತ್ರೆ ನಡೆಸುತ್ತಿದ್ದ ರಿಯಾಜ್​ ಮುಲ್ಲಾ ಜೈಲು, 3 ಆಸ್ಪತ್ರೆ ಸೀಜ್​

ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಇತ್ತೀಚಿಗಷ್ಟೆ ಕಿತ್ತೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಈ ಜಾಲದ ಕಿಂಗ್​ಪಿನ್​ ಕಿತ್ತೂರಿನಲ್ಲೇ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಬೆನ್ನಲ್ಲೆ ಎಚ್ಚತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ.

ಬೆಳಗಾವಿ: ನಕಲಿ ವೈದ್ಯರ ಹಾವಳಿ, ಪಿಯುಸಿ ಕಲಿತು ಆಸ್ಪತ್ರೆ ನಡೆಸುತ್ತಿದ್ದ ರಿಯಾಜ್​ ಮುಲ್ಲಾ ಜೈಲು, 3 ಆಸ್ಪತ್ರೆ ಸೀಜ್​
ನಕಲಿ ವೈದ್ಯ ರಿಯಾಜ್​ ಮುಲ್ಲಾ
Sahadev Mane
| Updated By: ವಿವೇಕ ಬಿರಾದಾರ|

Updated on:Jun 26, 2024 | 10:33 AM

Share

ಬೆಳಗಾವಿ, ಜೂನ್​ 26: ಇತ್ತೀಚಿಗಷ್ಟೆ ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರಿನಲ್ಲಿ (Kittur) ನಕಲಿ ವೈದ್ಯನ ಭ್ರೂಣ ಹತ್ಯೆ (Feticide) ಮತ್ತು ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಲರ್ಟ್​ ಆದ ಆರೋಗ್ಯ ಇಲಾಖೆ ಅಧಿಕಾರಿಗಳು, ಬೆಳಗಾವಿ ನಗರದಲ್ಲಿರುವ ಕ್ಲಿನಿಕ್, ಆಸ್ಪತ್ರೆ ಮೇಲೆ ಧಿಡೀರನೆ ದಾಳಿ ನಡೆಸಿ, ತಪಾಸಣೆ ನಡೆಸುತ್ತಿದ್ದಾರೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಅನೇಕ ನಕಲಿ ಆಸ್ಪತ್ರೆ ಮತ್ತು ವೈದ್ಯರು ಪತ್ತೆಯಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿದ್ದ ಮುಲ್ಲಾ ಆಸ್ಪತ್ರೆ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಹೇಶ್ ಕೋಣಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಯ್ ಡುಮ್ಮಗೋಳ, ಆರೋಗ್ಯ ಇಲಾಖೆ ಉಪ ವಿಭಾಗಾಧಿಕಾರಿ, ತಹಶಿಲ್ದಾರ ನೇತೃತ್ವದ ತಂಡ ಸೋಮಾವರ (ಜೂ.25) ದಾಳಿ ಮಾಡಿದೆ. ತಪಾಸಣೆ ವೇಳೆ ಆಸ್ಪತ್ರೆ ನಡೆಸುತ್ತಿದ್ದ ರಿಯಾಜ್ ಮುಲ್ಲಾ ನಕಲಿ ವೈದ್ಯ ಎಂದು ತಿಳಿದು ಬಂದಿದೆ. ಈ ವೈದ್ಯಕೀಯ ಶಿಕ್ಷಣ ಪಡೆಯದೇ ಕೇವಲ ಪಿಯುಸಿವರೆಗೆ ಮಾತ್ರ ಕಲಿತು ಆಸ್ಪತ್ರೆ‌ ನಡೆಸುತ್ತಿದ್ದನು.

ಪರಿಶೀಲನೆಗೆ ಹೋದಾಗ ನಕಲಿ ವೈದ್ಯ ರಿಯಾಜ್ ಮುಲ್ಲಾನ ಅಸಲಿ ಮುಖ ಬಯಲಾಗಿದೆ. ನಕಲಿ ವೈದ್ಯ ಎಂದು ಮನಗಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ನಕಲಿ ವೈದ್ಯ ರಿಯಾಜ್ ಮುಲ್ಲಾಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಒಂದು ವಾರ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಕ್ಕಳ ಮಾರಾಟ ಜಾಲದಿಂದ ರಕ್ಷಿಸಲಾಗಿದ್ದ ಮಗು ಸಾವು

ಬೆಳಗಾವಿ ನಗರದ ಬಡಕಲ್ ಗಲ್ಲಿಯಲ್ಲಿರುವ ಶಿವಾ ಹೆಸರಿನ ಆಸ್ಪತ್ರೆಯಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದು, ವೈದ್ಯ ಎಸ್ ದೇವನಗಾಂವಿ ಎಮ್​ಬಿಬಿಎಸ್ ಅಂತ ಬೋರ್ಡ್ ಹಾಕಿಕೊಂಡು, ಆಯುರ್ವೇದ ಔಷಧಿ ಕೊಡುತ್ತಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಆಯುರ್ವೇದ ಔಷಧಿಗಳು ಪತ್ತೆಯಾಗಿವೆ. ಬಳಿಕ ಅಧಿಕಾರಿಗಳು ನಕಲಿ ವೈದ್ಯನಿಗೆ ನೋಟಿಸ್ ನೀಡಿ ಆಸ್ಪತ್ರೆ ಸೀಜ್ ಮಾಡಿದ್ದಾರೆ.

ಬೆಳಗಾವಿ ನಗರದ ಚವಾಟ ಗಲ್ಲಿಯಲ್ಲಿರುವ ಗುರು ಕೃಪಾ ಆಸ್ಪತ್ರೆ ಮೇಲೆಯೂ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿರುವುದು ತಿಳಿದು ಬಂದಿದೆ. ಎಕ್ಸರೆ ಸೇರಿದಂತೆ ವಿವಿಧ ರೀತಿಯ ಮಷಿನ್​ಗಳು ಆಸ್ಪತ್ರೆಯಲ್ಲಿ ಪತ್ತೆ‌ಯಾಗಿದೆ. ಆಸ್ಪತ್ರೆ ಮಾಲೀಕ ಉಮೇಶ್ ಆಚಾರ್ಯಗೆ ಅಧಿಕಾರಿಗಳು ನೋಟೀಸ್ ನೀಡಿದ್ದು, ಒಂದು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ. ಡಾ.ನಾವಿದ್ ಶೇಖ್ ಎಂಬುವವರು ಈ ಆಸ್ಪತ್ರೆ ನಡೆಸುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:32 am, Wed, 26 June 24