
ಬೆಂಗಳೂರು, ಜುಲೈ 23: ಬಾಲಿವುಡ್ ನಟರಾದ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್ರಿಂದ ಖರೀದಿಸಿದ್ದ ಐಷಾರಾಮಿ ಕಾರುಗಳಿಗೆ ಕೆಜಿಎಫ್ ಬಾಬು (KGF Babu) ಕೊನೆಗೂ ತೆರಿಗೆ (tax) ಕಟ್ಟಿದ್ದಾರೆ. ಬಚನ್ ಬಳಿ ಖರೀದಿಸಿದ ಕಾರಿಗೆ 18 ಲಕ್ಷದ 53 ಸಾವಿರ ರೂ ಮತ್ತು ಆಮೀರ್ ಖಾನ್ ಬಳಿ ಖರೀದಿಸಿದ ಕಾರಿಗೆ 19.73 ಲಕ್ಷ ರೂ. ಹಣವನ್ನು ಆರ್ಟಿಒ ಅಧಿಕಾರಿಗಳಿಗೆ ಡಿಡಿ ಮೂಲಕ ಟ್ಯಾಕ್ಸ್ ಪಾವತಿಸಿದ್ದಾರೆ.
ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನಲೆ ಬುಧವಾರ ಬೆಳಿಗ್ಗೆ ವಸಂತನಗರದಲ್ಲಿರುವ ಕೆಜಿಎಫ್ ಬಾಬು ರುಕ್ಸಾನಾ ಪ್ಯಾಲೇಸ್ ನಿವಾಸದ ಮೇಲೆ ಆರ್ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ನಟರು ಬಳಸಿದ್ದ ರೋಲ್ಸ್ ರಾಯ್ಸ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಬಾಬು ಹೊಂದಿದ್ದರು.
ಸೆಲೆಬ್ರಿಟಿಗಳು ಬಳಸುವ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದ ಕೆಜಿಎಫ್ ಬಾಬು, ಅಮಿತಾಭ್ ಬಚ್ಚನ್ರಿಂದ MH 11 AX 1 ರೋಲ್ಸ್ ರಾಯ್ ಮತ್ತು ಆಮಿರ್ ಖಾನ್ ಒಂದು ವರ್ಷ ಬಳಸಿದ್ದ MH 02 BB 2 ರೋಲ್ಸ್ ರಾಯ್ ಕಾರು ಕೂಡ ಖರೀದಿಸಿದ್ದರು. ಅಷ್ಟೇ ಅಲ್ಲದೆ ಮಗಳ ಮಗುವಿಗಾಗಿ ಅಂದರೆ ಮೊಮ್ಮಗಳಿಗಾಗಿ ವೇಲ್ಫೇರ್ ಕಾರ್ ಖರೀದಿ ಮಾಡಿದ್ದರು. ಹೀಗೆ ಒಂದೊಂದು ಕಾರಿನ ಹಿಂದಿದೆ ಒಂದೊಂದು ಕತೆ ಇದೆ.
ಈ ಬಗ್ಗೆ ಕೆಜಿಎಫ್ ಬಾಬು ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ರಿಜಿಸ್ಟ್ರೇಷನ್ನ ಎರಡು ರೋಲ್ಸ್ ರಾಯ್ ಕಾರುಗಳಿದ್ದವು. ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್ ಅವರ ಎರಡು ಕಾರು ಖರೀದಿ ಮಾಡಿದ್ದೆ. ಮಹಾರಾಷ್ಟ್ರದಲ್ಲಿ ಲೈಫ್ ಟೈಕ್ಸ್ ಕಟ್ಟಿದ್ದೆ. ಆದರೆ ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂದರು. ನನಗೆ ಈ ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೆ ನಾನು ತಪ್ಪು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್ ಬಳಿ ಖರೀದಿಸಿದ ಐಷಾರಾಮಿ ಕಾರುಗಳು
ಆರ್ಟಿಓ ಅಧಿಕಾರಿಗಳು ನನಗೆ ಮನವರಿಕೆ ಮಾಡಿದರು. ಹಾಗಾಗಿ ಆಮೀರ್ ಖಾನ್ ಅವರಿಂದ ಖರೀದಿಸಿದ ಕಾರಿಗೆ 19 ಲಕ್ಷದ 73 ರೂ. ಟ್ಯಾಕ್ಸ್ ಕಟ್ಟಲಾಗಿದೆ. ಅಮಿತಾಭ್ ಬಚ್ಚನ್ರಿಂದ ಖರೀದಿಸಿದ ಕಾರಿಗೆ 18 ಲಕ್ಷ 53 ಸಾವಿರ ರೂ ಟ್ಯಾಕ್ಸ್ ಕಟ್ಟಲಾಗಿದೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.