AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ ಗ್ರೂಪ್​ ನೌಕರರ ಅಳಲು: ಸರ್ಕಾರ ಕೊಟ್ಟ ಪ್ರೋತ್ಸಾಹಧನವನ್ನು ಸಿಬ್ಬಂದಿಗೆ ನೀಡಲು ಉತ್ಸಾಹ ತೋರದ ‘ಜಿಮ್ಸ್’​ ಆಸ್ಪತ್ರೆ

ಪಿಪಿಇ ಕಿಟ್ ಧರಿಸಿ ಕೊವಿಡ್ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಸೂಚಿಸಿದೆ. ಆದರೆ, ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 150 ಡಿ ಗ್ರೂಪ್ ಸಿಬ್ಬಂದಿ, ನರ್ಸ್​ಗಳಿಗೆ ಇಲ್ಲಿಯವರಗೆ ನಯಾಪೈಸೆ ಕೂಡ ಬಂದಿಲ್ಲ.

ಡಿ ಗ್ರೂಪ್​ ನೌಕರರ ಅಳಲು: ಸರ್ಕಾರ ಕೊಟ್ಟ ಪ್ರೋತ್ಸಾಹಧನವನ್ನು ಸಿಬ್ಬಂದಿಗೆ ನೀಡಲು ಉತ್ಸಾಹ ತೋರದ ‘ಜಿಮ್ಸ್’​ ಆಸ್ಪತ್ರೆ
ಪ್ರೋತ್ಸಾಹಧನಕ್ಕಾಗಿ ಪರದಾಡುತ್ತಿರುವ ಸಿಬ್ಬಂದಿ
Skanda
| Edited By: |

Updated on: Dec 22, 2020 | 6:42 AM

Share

ಕಲಬುರಗಿ: ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ವೈದ್ಯರೊಟ್ಟಿಗೆ ಹಗಲಿರುಳೆನ್ನದೆ ಕೆಲಸ ನಿರ್ವಹಿಸಿದ ಜಿಮ್ಸ್​ (ಗುಲಬರ್ಗಾ ಇನ್​​ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯ ಡಿ ಗ್ರೂಪ್​ ನೌಕರರನ್ನು ಸಂಪುರ್ಣ ಕಡೆಗಣಿಸಲಾಗಿದೆ.

ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿಗೆ ಉತ್ತೇಜನವಾಗಿ ಮಾಸಿಕ ಹತ್ತು ಸಾವಿರ ರೂಪಾಯಿ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದ ಬೇರೆಲ್ಲಾ ಆಸ್ಪತ್ರೆ ನೌಕರರಿಗೆ ಹಣ ಪಾವತಿಯಾದರೂ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಗೆ ಮಾತ್ರ ಉತ್ತೇಜನಾ ಹಣ ಸಿಕ್ಕಿಲ್ಲ.

ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಹಣ ಕೈ ಸೇರದೇ ಇರುವುದರಿಂದ ಜಿಮ್ಸ್​ ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗಾಗಿದೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಅನೇಕ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಡಿ ಗ್ರೂಪ್ ಸಿಬ್ಬಂದಿ, ನರ್ಸ್​ಗಳು ಹೆಚ್ಚಿನ ಸೇವೆಯನ್ನು ಮಾಡಿದ್ದಾರೆ. ಹೀಗಾಗಿಯೇ ಸರ್ಕಾರ ಅವರ ಕೆಲಸವನ್ನು ಮೆಚ್ಚಿ ಪ್ರೋತ್ಸಾಹಧನವನ್ನು ನೀಡಿದೆ. ಆದರೆ, ಜಿಮ್ಸ್​ ಸಿಬ್ಬಂದಿಗೆ ಮಾತ್ರ ಈ ಹಣ ತಲುಪದೇ ಇರುವುದು ಅಲ್ಲಿನ ಡಿ ಗ್ರೂಪ್ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಬರುವ ಕೊವಿಡ್ ಹೆಲ್ತ್ ಸೆಂಟರ್, ಕೇರ್ ಸೆಂಟರ್, ಕೊವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಡಿ ಗ್ರೂಪ್ ನೌಕರರಿಗೆ ಉತ್ತೇಜನ ನೀಡುವ ಸಲುವಾಗಿ ಕೊವಿಡ್ ರಿಸ್ಕ್ ಪ್ರೋತ್ಸಾಹ ಧನವನ್ನು 6 ತಿಂಗಳ ಕಾಲ ಮಾಸಿಕ ಹತ್ತು ಸಾವಿರ ರೂಪಾಯಿಯಂತೆ ನೀಡಲು ಜುಲೈ ತಿಂಗಳಿನಲ್ಲಿಯೇ ಆದೇಶ ಬಂದಿದೆ.

ಪಿಪಿಇ ಕಿಟ್ ಧರಿಸಿ ಕೊವಿಡ್ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಧನ ನೀಡಲು ಸೂಚಿಸಲಾಗಿದೆ. ಆದರೆ, ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 150 ಡಿ ಗ್ರೂಪ್ ಸಿಬ್ಬಂದಿ, ನರ್ಸ್​ಗಳಿಗೆ ಇಲ್ಲಿಯವರಗೆ ನಯಾಪೈಸೆ ಕೂಡ ಬಂದಿಲ್ಲ.

ಸರ್ಕಾರ ಬಿಡುಗಡೆ ಮಾಡಿದ ಹಣ ಎಲ್ಲಿಗೆ ಹೋಯ್ತು? ಸರ್ಕಾರ ಆದೇಶ ಹೊರಡಿಸಿ 5 ತಿಂಗಳಾದ್ರು ಹಣ ಬಿಡುಗಡೆಯಾಗದ ಕಾರಣ ಅಲ್ಲಿಯ ಸಿಬ್ಬಂದಿ ಜಿಮ್ಸ್ ವೈದ್ಯಕೀಯ ಅಧಿಕ್ಷಕರನ್ನು ಹತ್ತಾರು ಬಾರಿ ಭೇಟಿ ಮಾಡಿ ಪ್ರೋತ್ಸಾಹಧನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ವೈದ್ಯಕೀಯ ಅಧಿಕ್ಷಕರು ಮಾತ್ರ ಒಂದಿಲ್ಲೊಂದು ಕಾರಣಗಳನ್ನು ಹೇಳಿ ಕಳುಹಿಸುತ್ತಿದ್ದಾರೆಯೇ ವಿನಃ ಪ್ರೋತ್ಸಾಹ ಧನ ಮಂಜೂರು ಮಾಡಿಲ್ಲ.

ಕೊರೊನಾದ ಸಂದರ್ಭದಲ್ಲಿ ತಾವು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದೇವೆ. ಮಾನವೀಯತೆ ದೃಷ್ಟಿಯಲ್ಲಿ ನಾವು ಕೇಳುವ ಮೊದಲೇ ಹಣ ಕೊಡಬೇಕಿತ್ತು. ಆದ್ರೆ ಇಲ್ಲಿ ಮಾತ್ರ ಬಾಯಿಬಿಟ್ಟು ಕೇಳಿದರೂ ಕೊಡ್ತಾ ಇಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿರುವ ಹಣ ಕಲಬುರಗಿ ಜಿಮ್ಸ್​ ಆಸ್ಪತ್ರೆ ನೌಕರರಿಗೆ ಮಾತ್ರ ಸಿಗದಿರಲು ಕಾರಣವೇನು ಎಂಬುದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕಿದೆ. ಸಂಕಷ್ಟದ ಕಾಲದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರ ಮನವಿಗೆ ಈ ಕೂಡಲೇ ಸ್ಪಂದಿಸಬೇಕಿದೆ.

ಸುಟ್ಟ ಗಾಯದಿಂದ ತಾಯಿ, ಮಗು ಚೀರಾಟ: ತುರ್ತು ಚಿಕಿತ್ಸೆಗೆ ಸತಾಯಿಸಿದ ಜಿಮ್ಸ್ ವಿರುದ್ಧ ಸಂಬಂಧಿಕರ ಆಕ್ರೋಶ