ದೇಶದಲ್ಲೇ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯ ಕರ್ನಾಟಕ: ಸಿಎಂ ಸಿದ್ದರಾಮಯ್ಯ

|

Updated on: Nov 22, 2024 | 8:06 AM

ಗುಜರಾತ್‌ನ ನಂತರ ಕರ್ನಾಟಕವು ಭಾರತದಲ್ಲಿ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕದ ಹಾಲು ಉತ್ಪಾದನೆಗೆ ಸಂಬಂಧಿಸಿದ ಅಂಕಿಅಂಶಗಳು, ಮಾಹಿತಿಯನ್ನು ನೀಡಿದರು. ವಿವರ ಇಲ್ಲಿದೆ.

ದೇಶದಲ್ಲೇ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯ ಕರ್ನಾಟಕ: ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಬೆಂಗಳೂರು, ನವೆಂಬರ್ 22: ಕರ್ನಾಟಕವು ಭಾರತದಲ್ಲಿ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೊದಲ ಸ್ಥಾನದಲ್ಲಿ ಗುಜರಾತ್‌ ಇದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಬಿಡುಗಡೆ ಮಾಡಿ ಗುರುವಾರ ಮಾತನಾಡಿದ ಅವರು, ರಾಜ್ಯದ 16 ಹಾಲು ಒಕ್ಕೂಟಗಳು ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲನ್ನು ಉತ್ಪಾದಿಸುತ್ತವೆ. ಕರ್ನಾಟಕವು ನವದೆಹಲಿಗೆ ಪ್ರತಿದಿನ 2.5 ಲಕ್ಷ ಲೀಟರ್ ಹಾಲನ್ನು ಪೂರೈಸಲು ಪ್ರಾರಂಭಿಸಿದ್ದು, ಆರು ತಿಂಗಳಲ್ಲಿ ಇದನ್ನು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಯೋಜನೆ ಹೊಂದಿದೆ ಎಂದಿದ್ದಾರೆ.

ಹಾಲಿನ ಉತ್ಪನ್ನಗಳಿಗೆ ಪ್ರಬಲ ಮಾರುಕಟ್ಟೆಯನ್ನು ಸೃಷ್ಟಿಸುವುದು ಡೇರಿ ಉದ್ಯಮದ ಬೆಳವಣಿಗೆ ಮತ್ತು ರೈತರ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಹೈನುಗಾರಿಕೆ ಕ್ಷೇತ್ರಕ್ಕೆ ನೀಡಿದ ಬಲವಾದ ಬೆಂಬಲವೇ ರಾಜ್ಯದ ಯಶಸ್ಸಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ 2.5 ಲಕ್ಷ ಲೀಟರ್

ರೈತರಿಗೆ ನ್ಯಾಯಯುತ ಬೆಲೆ ಮತ್ತು ಅವರ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಲು ನಾವು ಹಾಲು ಉತ್ಪಾದಕರ ಸಂಘಗಳನ್ನು ರಚಿಸಿದ್ದೇವೆ. ರಾಜ್ಯವು ಪ್ರತಿನಿತ್ಯ 92-93 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು, ಅದರಲ್ಲಿ 2.5 ಲಕ್ಷ ಲೀಟರ್ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷೀರಧಾರೆ ಯೋಜನೆಯ ಮೂಲಕ ಪ್ರತಿ ಲೀಟರ್ ಹಾಲನ್ನು 32 ರೂ.ಗೆ ಖರೀದಿಸಲಾಗುತ್ತಿದ್ದು, ಸರಕಾರದಿಂದ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ 5 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾದಾಗ, ನಾನು ಈ ಪ್ರೋತ್ಸಾಹಧನವನ್ನು ಲೀಟರ್‌ಗೆ 5 ರೂ.ಗೆ ಹೆಚ್ಚಿಸಿದ್ದೇನೆ. ಈ ಪ್ರೋತ್ಸಾಹಧನಕ್ಕಾಗಿ ರಾಜ್ಯವು ಪ್ರತಿದಿನ 5 ಕೋಟಿ ರೂ. ವ್ಯಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲೂ ನಂದಿನಿ ಉತ್ಪನ್ನಗಳ ಮಾರಾಟ, ಸಿಎಂ ಸಿದ್ದರಾಮಯ್ಯ ಚಾಲನೆ

ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿರುವುದಾಗಿ ಕೆಎಂಎಫ್ ಕೂಡ ಹೇಳಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ