ನಾವು ನರಸಿಂಹಸ್ವಾಮಿ ಭಕ್ತರು, ಯಾವ ವಾಮಚಾರವೂ ತಾಕಲ್ಲ: ಹೀಗಂತ ರಾಜಣ್ಣ ಟಾಂಗ್ ಕೊಟ್ಟಿದ್ಯಾರಿಗೆ?

| Updated By: ಗಂಗಾಧರ​ ಬ. ಸಾಬೋಜಿ

Updated on: Feb 25, 2024 | 4:00 PM

ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ನನಗೂ ಹಾಸನ ಜಿಲ್ಲೆಗೂ ಏನು ಸಂಬಂಧವೋ ಗೊತ್ತಿಲ್ಲ. ನನಗೆ ಹಾಸನ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದಾರೆ. ಹಾಸನಕ್ಕೆ ಹೋಗಬೇಡಿ ಅಲ್ಲಿ ವಾಮಾಚಾರ ಮಾಡುತ್ತಾರೆ ಎಂದು ಅಭಿಮಾನಿಗಳು ಹೆದರಿದ್ದರು ಎಂದು ಹೇಳಿದ್ದಾರೆ.

ನಾವು ನರಸಿಂಹಸ್ವಾಮಿ ಭಕ್ತರು, ಯಾವ ವಾಮಚಾರವೂ ತಾಕಲ್ಲ: ಹೀಗಂತ ರಾಜಣ್ಣ ಟಾಂಗ್ ಕೊಟ್ಟಿದ್ಯಾರಿಗೆ?
ಸಚಿವ ಕೆ.ಎನ್.ರಾಜಣ್ಣ
Follow us on

ತುಮಕೂರು, ಫೆಬ್ರವರಿ 25: ಹಾಸನಕ್ಕೆ ಹೋಗಬೇಡಿ ಅಲ್ಲಿ ವಾಮಾಚಾರ ಮಾಡುತ್ತಾರೆ ಎಂದು ಅಭಿಮಾನಿಗಳು ಹೆದರಿದ್ದರು. ನಾನೇ ಕುಳಿತುಕೊಳ್ಳುತ್ತೇನೆ. ನನ್ನ ಮೇಲೆ ವಾಮಾಚಾರ ಮಾಡಿ ಎಂದು ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ. ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೂ ಹಾಸನ ಜಿಲ್ಲೆಗೂ ಏನು ಸಂಬಂಧವೋ ಗೊತ್ತಿಲ್ಲ. ನನಗೆ ಹಾಸನ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದಾರೆ. ನಾವು ನರಸಿಂಹಸ್ವಾಮಿ ಭಕ್ತರು, ಯಾವ ವಾಮಚಾರವೂ ತಾಕಲ್ಲ. ಹಾಗಂತ ವಾಮಾಚರ ತಗುಲುವುದಿಲ್ಲ ಎಂದು ಅಂದುಕೊಳ್ಳಬೇಡ ಎಂದು ಹೇಳಿದ್ದಾರೆ.

ನಾನು ಹಾಸನಕ್ಕೆ ಹೋಗುತ್ತಿದ್ದಾಗ ಪಟಾಕಿ ಸಿಡಿದು ಕಣ್ಣಿಗೆ ಪೆಟ್ಟಾಗಿತ್ತು. ವೈದ್ಯರು ಕಣ್ಣು ಟೆಸ್ಟ್ ಮಾಡಿ ಹಾಸನಕ್ಕೆ ಹೋಗಬೇಡಿ ಎಂದಿದ್ದರು. 2 ಕಣ್ಣು ಹೋದರೂ ಪರವಾಗಿಲ್ಲ ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ಬರುತ್ತೆ ಎಂದು ಧೈರ್ಯದಿಂದ ಹೋದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಲ್ಲಿ ನಾನೂ ಒಬ್ಬ ಅಷ್ಟೇ

ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಪಕ್ಷಕ್ಕೆ ಸೇರಿಸಿಕೊಂಡವರು ಟಿಕೆಟ್ ಕೊಡಿಸುವ​ ಪ್ರಯತ್ನ ಮಾಡುತ್ತಾರೆ. ಎಲ್ಲಾ ಮುಖಂಡರು ಸೇರಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡರಲ್ಲಿ ನಾನೂ ಒಬ್ಬ ಅಷ್ಟೇ. ಮುಂಚೂಣಿ, ಹಿಂಚೂಣಿ ಅನ್ನೋದು ಯಾವುದೂ ಇಲ್ಲ. ಪಕ್ಷದಲ್ಲಿ ಎಲ್ಲಾ ಸರಿಸಮಾನವಾಗಿಯೇ ಇರೋದು ಎಂದಿದ್ದಾರೆ.

ಇದನ್ನೂ ಓದಿ: ನಿಮ್ಮ ಗ್ಯಾರೆಂಟಿ ಅಲ್ಲಾಡಿಸೋಕೆ ಯಾರಿಂದಲೂ ಸಾಧ್ಯ ಇಲ್ಲ: ಜನರಿಗೆ ಡಿಕೆ ಸುರೇಶ್ ಗ್ಯಾರಂಟಿ

ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗಿದ್ದಾರೆ. ಎಲ್ಲರೂ ಟಿಕೆಟ್ ಕೇಳುತ್ತಾರೆ, ಕೇಳುವುದರಲ್ಲಿ ತಪ್ಪೇನಿಲ್ಲ. ಟಿಕೆಟ್​ ವಿಚಾರದಲ್ಲಿ ಹೈಕಮಾಂಡ್​​ ತೀರ್ಮಾನ ಅಂತಿಮ ಎಂದರು.

ಟಿಕೆಟ್ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​ ನಡುವೆ ಪ್ರತಿಷ್ಠೆಯ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಯಾರಿಗೆ ಕೇಳಿದ್ದಾರೆ, ಡಿಕೆ ಶಿವಕುಮಾರ್ ಅವರು ಯಾರಿಗೆ ಕೇಳಿದ್ದಾರೆ ಗೊತ್ತಿಲ್ಲ. ಗೌರಿಶಂಕರ್ ಇರಬಹುದು, ಮತ್ತೊಬ್ಬರು ಇರಬಹುದು. ಯಾರು ಬೇಕಾದರೂ ಟಿಕೆಟ್ ಕೇಳಬಹುದು.

ಇದನ್ನೂ ಓದಿ: ಗಡುವು ಮುಗಿಯುವುದರೊಳಿಗೆ ಅಂಗಡಿ ಬೋರ್ಡ್​ ಬದಲಾಗದಿದ್ದರೆ ಕರ್ನಾಟಕ ಬಂದ್​: ವಾಟಾಳ್ ಎಚ್ಚರಿಕೆ

ಎಲ್ಲರೂ ಟಿಕೆಟ್ ಕೇಳುತ್ತಾರೆ, ಕೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವವರು ಹೈ ಕಮಾಂಡ್​​ನವರು. ಹೈ ಕಮಾಂಡ್​​ನವರು, ಡಿಕೆ ಶಿವಕುಮಾರ್​​, ಸಿದ್ದರಾಮಯ್ಯನವರು ಎಲ್ಲರ ಅಭಿಪ್ರಾಯ ಪಡೆದು ಟಿಕೆಟ್ ಕೊಡುತ್ತಾರೆ ಎಂದಿದ್ದಾರೆ.

ಮಾರ್ಚ್ 10ರ ಒಳಗೆ ಟಿಕೆಟ್ ಅನೌನ್ಸ್ ಸಾಧ್ಯತೆ ಎಂದ ರಾಜಣ್ಣ 

ಬಿಜೆಪಿಯಿಂದ ಸೋಮಣ್ಣ ಟಿಕೆಟ್ ಸಿಗಬಹುದು ಅನ್ನೋ ವಿಚಾರಕ್ಕೆ ಮಾತನಾಡಿದ್ದು, ಆಕಾಶ ನೋಡೋದಕ್ಕೆ ನೂಕು ನುಗ್ಗಲಾ, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಸೋಮಣ್ಣ ಅವರು ಸ್ಪರ್ಧೆ ಮಾಡಲಿ, ಸೋಮಣ್ಣ ನಮ್ಮ ಸ್ನೇಹಿತರು. ರಾಜಕಾರಣವೇ ಬೇರೆ, ವಿಶ್ವಾಸವೇ ಬೇರೆ. ಟಿಕೆಟ್ ಯಾವಾಗ ಅನೌನ್ಸ್ ಆಗುತ್ತೆ ಎನ್ನುವ ಪ್ರಶ್ನೆಗೆ ರಾಜಣ್ಣ ಉತ್ತರ ನೀಡಿದ್ದು, ಹೆಚ್ಚಾಗಿ ಮಾರ್ಚ್ 10ರ ಒಳಗೆ ಅನೌನ್ಸ್ ಆಗಬಹುದು ಅನ್ಕೊಂಡಿದ್ದೀನಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.