ರಶ್ಮಿಕಾ ಮಂದಣ್ಣ ವಿರುದ್ಧ ಟೀಕೆ: ಶಾಸಕ ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ವಿಷಯದಲ್ಲಿ ಶಾಸಕ ರವಿ ಗಣಿಗಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಗಣಿಗ ವಿರುದ್ಧ ಸಿಎನ್ಸಿ ಮುಖಂಡ ನಾಚಪ್ಪ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ರಶ್ಮಿಕಾ ವಿಷಯಕ್ಕೆ ಬಂದರೆ ಸುಮ್ಮನೆ ಇರಲ್ಲ ಅಂತ ಕಿಡಿ ಕಾರಿದ್ದಾರೆ.

ಕೊಡಗು, ಮಾರ್ಚ್ 13: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ವಿಚಾರದಲ್ಲಿ ಶಾಸಕ ರವಿ ಗಣಿಗ (Ravi Ganiga) ಹೊತ್ತಿಸಿದ್ದ ಕಿಡಿ ಇದೀಗ ಮತ್ತಷ್ಟು ದೊಡ್ಡದಾಗುತ್ತಿದೆ. ರವಿ ಗಣಿಗ ಹೇಳಿಕೆ ಖಂಡಿಸಿ ರಶ್ಮಿಕಾ ಪರ ನಿಂತಿದ್ದ ಕೊಡವ ನ್ಯಾಷನಲ್ ಸಂಘಟನೆ ವಾರದ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೆ ಹಾಗೂ ರಾಜ್ಯ ಗೃಹಸಚಿವರಿಗೆ ದೂರು ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರವಿ ಗಣಿಗ, ರಶ್ಮಿಕಾ ವಿವಾದ ಮಾಡಿ ಸಿಎನ್ಸಿ ಸಂಘಟನೆ ಅಧ್ಯಕ್ಷ ನಾಚಪ್ಪ ಪ್ರಚಾರ ಪಡ್ಕೊತ್ತಿದ್ದಾರೆ ಅಂತ ಕುಹಕವಾಡಿದ್ದರು. ಇದರಿಂದ ಕೆರಳಿದ ಸಿಎನ್ಸಿ ಮುಖಂಡ ನಾಚಪ್ಪ ಇದೀಗ ರವಿ ಗಣಿಗ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅತಿ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದಿಂದ ಬಂದವರು. ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಲು ಅವರ ಸ್ವಂತ ಪರಿಶ್ರಮವೇ ಕಾರಣ. ಹೀಗಿರುವಾಗ ರವಿ ಗಣಿಗರಂತವರು ರಶ್ಮಿಕಾ ವಿಚಾರ ಪ್ರಸ್ತಾಪಿಸಿ ಅನಗತ್ಯ ವಿವಾದ ಮಾಡ್ತಾ ಇದ್ದಾರೆ, ಮಾತ್ರವಲ್ಲ ರಶ್ಮಿಕಾರನ್ನ ಬೆದರಿಸುವ ಮೂಲಕ ಸಂವಿಧಾನ ವಿರೋಧಿ ಕೃತ್ಯ ಮಾಡ್ತಾ ಇದ್ದಾರೆ ಎಂದು ನಾಚಪ್ಪ ದೂರಿನಲ್ಲಿ ಹೇಳಿದ್ದಾರೆ. ಈ ರವಿ ಗಣಿಗ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಡವಾಮೆ ಬಾಳೋ ಪಾದಯಾತ್ರೆ: ನಾಳೆ ಮದ್ಯ ಮಾರಾಟ ನಿಷೇಧ, ಪಾರ್ಕಿಂಗ್ ನಿರ್ಬಂಧ
ರಶ್ಮಿಕಾ ಮಂದಣ್ಣ ಅವರನ್ನ ಟೀಕಿಸುವ ಮೊದಲು ರವಿ ಗಣಿಗ ಯಾರೆಂಬುದೇ ಜನರಿಗೆ ಗೊತ್ತಿರಲಿಲ್ಲ. ಇದೀಗ ರಶ್ಮಿಕಾ ಮಂದಣ್ಣ ಅವರನ್ನ ಟೀಕಿಸಿ ರವಿ ಗಣಿಗ ಪ್ರಚಾರ ಪಡೆದುಕೊಮಡಿದ್ದಾರೆ ಎಂದು ನಾಚಪ್ಪ ಟೀಕಿಸಿದ್ದಾರೆ. ಒಂದು ಹೆಣ್ಣು ಮಗಳ ಮೇಲೆ ದೌರ್ಜನ್ಯ ಮಾಡುವುದಲ್ಲದೇ ತಮ್ಮ ಅಕ್ರಮಗಳನ್ನ ಮುಚ್ಚಿಕೊಳ್ಳಲು ರಶ್ಮಿಕಾರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇವೆಲ್ಲವನ್ನು ನಿಲ್ಲಿಸಲೆಂದೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿರುವುದಾಗಿ ನಾಚಪ್ಪ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರದ ಭದ್ರತೆಗೆ ಕೊಡಗು ಜಿಲ್ಲೆಯ ಬಹಳ ದೊಡ್ಡ ಕೊಡಗು ಕೊಟ್ಟಿದೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟೀಕಿಸಿದ್ದಾರೆ. ರವಿಗಣಿಗೆ ಮೂಗಿನ ನೇರಕ್ಕೆ ರಶ್ಮಿಕಾ ವರ್ತಿಸಲು, ರವಿ ಗಣಿಗ ಚಕ್ರಾಧಿತಿ ಅಲ್ಲ ಎಂದು ಕುಟುಕಿದ್ದಾರೆ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಾತ್ರವಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಖುಷ್ಬು ಅವರಿಗೂ ಈ ಕುರಿತು ಸಂದೇಶ ರವಾನಿಸಿದ್ದಾರೆ. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗ ಈ ವಿಚಾರವನ್ನ ಕೈಗೆತ್ತಿಕೊಂಡು ರವಿ ಗಣಿಗ ಅವರಿಂದ ಸ್ಪಷ್ಟನೆ ಕೇಳಬಹುದು ಎನ್ನಲಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ತಾರಕಕ್ಕೇರಿದ ಕೊಡವ, ಗೌಡ ಸಮುದಾಯಗಳ ಸಂಘರ್ಷ: ಅರ್ಚಕನ ಮೇಲೆ ದಾಳಿ
ಸದ್ಯ ರಶ್ಮಿಕಾ ಮಂದಣ್ಣ ವಿವಾದದ ಬೆಂಕಿಗೆ ಸಿಎನ್ಸಿ ಸಂಘಟನೆ ಮತ್ತು ರವಿ ಗಣಿಗ ಮತ್ತಷ್ಟು ತುಪ್ಪ ಸುರಿದಿದೆ. ಇದು ಮತ್ತಷ್ಟು ದೊಡ್ಡ ವಿವಾದವಾಗುವ ಎಲ್ಲಾ ಸಾಧ್ಯತೆಗಳಿವೆ ಅನ್ನೋ ಮಾತುಗಳು ಜನವಲಯದಲ್ಲಿ ಕೇಳಿ ಬರುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.