ಕೊಡಗಿನಲ್ಲಿ ಮತ್ತೆ ತಾರಕಕ್ಕೇರಿದ ಕೊಡವ, ಗೌಡ ಸಮುದಾಯಗಳ ಸಂಘರ್ಷ: ಅರ್ಚಕನ ಮೇಲೆ ದಾಳಿ
ಕಳೆದ ತಿಂಗಳಷ್ಟೇ ಕೊಡಗು ಜಿಲ್ಲೆಯಲ್ಲಿ ಜನಾಂಗೀಯ ಸಂಘರ್ಷ ತೀವ್ರಗೊಂಡಿತ್ತು. ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಇದೀಗ ಮತ್ತೆ ಸಂಘರ್ಷ ತಾರಕಕ್ಕೇರಿದ್ದು, ಕೊಡವ, ಗೌಡ ಸಮುದಾಯಗಳು ಪರಸ್ಪರ ಕಚ್ಚಾಡಿದ್ದಲ್ಲದೆ ಮಧ್ಯ ಪ್ರವೇಶಿಸಿದ ಬ್ರಾಹ್ಮಣ ಸಮುದಾಯದ ಅರ್ಚಕನ ಮೇಲೂ ಹಲ್ಲೆ ನಡೆದಿದೆ. ಘಟನೆಯ ವಿವರ ಇಲ್ಲಿದೆ.
![ಕೊಡಗಿನಲ್ಲಿ ಮತ್ತೆ ತಾರಕಕ್ಕೇರಿದ ಕೊಡವ, ಗೌಡ ಸಮುದಾಯಗಳ ಸಂಘರ್ಷ: ಅರ್ಚಕನ ಮೇಲೆ ದಾಳಿ](https://images.tv9kannada.com/wp-content/uploads/2025/01/kodagu-kattemadu.jpg?w=1280)
ಮಡಿಕೇರಿ, ಜನವರಿ 29: ಅದು ವೈವಿಧ್ಯಮಯ ಜನಾಂಗಗಳ ಶಾಂತಿಯ ತೋಟ. ಅಲ್ಲಿ ಕಾಣಸಿಗುವಷ್ಟು ಸಾಂಸ್ಕೃತಿಕ ವೈವಿಧ್ಯತೆ ಇನ್ನೆಲ್ಲೂ ಸಿಗಲ್ಲ. ಆದರೆ ಅದೇ ಶಾಂತಿಯ ತೋಟ ಇಂದು ಅಶಾಂತಿಯ ಬೀಡಾಗಿದೆ. ಈವರೆಗೆ ಕೊಡವ, ಗೌಡ ಸಮುದಾಯಗಳು ಪರಸ್ಪರ ಕಚ್ಚಾಡುತ್ತಿದ್ದವು. ಈ ವೈರತ್ವಕ್ಕೆ ಈಗ ಬ್ರಾಹ್ಮಣ ಸಮುದಾಯವೂ ಎಂಟ್ರಿಯಾಗಿದೆ. ಪರಿಣಾಮವಾಗಿ ಕೊಡಗಿನ ಕಟ್ಟೆಮಾಡು ದೇವಾಲಯದ ಅರ್ಚಕನ ಮೇಲೆ ಹಲ್ಲೆ ನಡೆದಿದ್ದು, ಮೂಗಿನಿಂದ ರಕ್ತ ಒಸರಿಕೊಂಡು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ.
ಏನಿದು ವಿವಾದ?
ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದ ಮಹಾ ಮೃತ್ಯುಂಜಯ ದೇಗುಲದ ವಸ್ತ್ರ ವಿವಾದ ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಕೊಡವ ಸಾಂಪ್ರದಾಯಿಕ ವಸ್ತ್ರ ತೊಡಲು ವಿರೋಧಿಸಿದ್ದಕ್ಕೆ ಶುರುವಾದ ಕೊಡವ ಮತ್ತು ಗೌಡ ಸಮುದಾಯದ ಸಂಘರ್ಷ, ಈಗ ಅರ್ಚಕನ ಮೇಲೂ ತಿರುಗಿದೆ. ಅರ್ಚಕ ವಿಘ್ನೇಶ್ ಮನೆಗೆ ನುಗ್ಗಿದ ಇಬ್ಬರು ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಇದರಿಂದ ಬ್ರಾಹ್ಮಣ ಸಮುದಾಯವೂ ಸಂಘರ್ಷಕ್ಕೆ ಎಂಟ್ರಿ ಕೊಟ್ಟಿದೆ. ಹಲ್ಲೆಯನ್ನು ತೀವ್ರವಾಗಿ ಖಂಡಿಸಿದೆ.
ಈ ಘಟನೆಯನ್ನು ಕಟ್ಟೆಮಾಡು ದೇವಾಲಯ ಸಮಿತಿ ಸದಸ್ಯರು ಖಂಡಿಸಿದ್ದು, ಇದು ಪೂರ್ವನಿಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ. ಹೊರಗಿನವರು ಬಂದು ಥಳಿಸಿದ್ದಾರೆ ಎಂದು ದೂರಿದ್ದಾರೆ.
![Kodagu Kattemadu Temple](https://images.tv9kannada.com/wp-content/uploads/2025/01/kodagu-kattemadu-temple.jpg)
ಕಟ್ಟೆಮಾಡು ಗ್ರಾಮದ ಮಹಾ ಮೃತ್ಯುಂಜಯ ದೇಗುಲ
ವಲಯ ಕಾಂಗ್ರೆಸ್ ಅಧ್ಯಕ್ಷ ಮಂಡೇಟಿರ ಅನಿಲ್ ಮತ್ತು ಆತನ ಸಹಚರರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಅನಿಲ್ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಲ್ಲೆ ನಡೆಸಿದ ಅನಿಲ್, ಕೊಡವ ಸಮುದಾಯಕ್ಕೆ ಸೇರಿರುವುದು ಪೊಲೀಸರಿಗೆ ಬಿಸಿ ತುಪ್ಪವಾಗಿದೆ.
ವಿವಾದ ಶುರುವಾಗಿದ್ದು ಹೇಗೆ?
ಕಟ್ಟೆಮಾಡು ಗ್ರಾಮದಲ್ಲಿ ಪಾಳು ಬಿದ್ದಿದ್ದ ಪುರಾತನ ಮೃತ್ಯುಂಜಯ ದೇವಸ್ಥಾನವನ್ನು ಕೋಟ್ಯಂತರ ರೂ. ಖರ್ಚು ಮಾಡಿ ಜೀರ್ಣೋದ್ಧಾರ ಮಾಡಲಾಗಿತ್ತು. ಕಳೆದ ವರ್ಷದಿಂದ ವಾರ್ಷಿಕ ಉತ್ಸವವನ್ನೂ ಆಚರಿಸಿಕೊಂಡು ಬರಲಾಗುತ್ತಿದೆ. ಊರಿನಲ್ಲಿ ಕೊಡವ, ಗೌಡ ಜನಾಂಗ ಸೇರಿದಂತೆ ಹತ್ತು ಹಲವು ಜನಾಂಗಗಳಿರುವುದರಿಂದ ಯಾವುದೇ ಒಂದು ಜನಾಂಗದ ಧಾರ್ಮಿಕ ಉಡುಪು ತೊಟ್ಟು ಬರುವುದನ್ನು ನಿಷೇಧಿಸಿ ಬೈಲಾ ರಚನೆ ಮಾಡಲಾಗಿತ್ತು. ಇದುವೇ ವಿವಾದಕ್ಕೆ ಕಾರಣವಾಗಿದೆ. ಒಂದು ಜನಾಂಗದ ಸಾಂಪ್ರದಾಯಿಕ ಉಡುಪು ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಸಂಘರ್ಷ ಸೃಷ್ಟಿಯಾಗಿದೆ.
ಇದನ್ನೂ ಓದಿ: ಧಾರ್ಮಿಕ ಉಡುಪು ವಿಚಾರಕ್ಕೆ ಕೊಡಗಿನಲ್ಲಿ ತಾರಕಕ್ಕೇರಿದ ಜನಾಂಗೀಯ ಸಂಘರ್ಷ: ನಿಷೇಧಾಜ್ಞೆ ಜಾರಿ
ಒಟ್ಟಿನಲ್ಲಿ, ಕೊಡಗಿನಲ್ಲಿ ದೇಗುಲದ ವಿಚಾರಕ್ಕೆ ಶುರುವಾಗಿರುವ ಜನಾಂಗೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ