ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್​​: ಮಗನಿಂದಲೇ ತಂದೆಯ ಹತ್ಯೆ!

ಮಡಿಕೇರಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕನ ಸಾವಿನ ಪ್ರಕರಣಕ್ಕೆ ಸಿನಿಮೀಯ ತಿರುವು ಸಿಕ್ಕಿದೆ. ಆರಂಭದಲ್ಲಿ ಅಸಹಜ ಸಾವು ಎಂದು ಬಿಂಬಿಸಿಲಾಗಿತ್ತಾದರೂ, ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ಬಯಲಾಗಿದೆ. ಎಸ್ಟೇಟ್ ಮಾಲೀಕನೊಂದಿಗೆ ಸೇರಿ ಶವಸಂಸ್ಕಾರ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಹಿನ್ನೆಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್​​: ಮಗನಿಂದಲೇ ತಂದೆಯ ಹತ್ಯೆ!
ಆರೋಪಿ ಪ್ರಶಾಂತ್​​
Edited By:

Updated on: Jan 15, 2026 | 5:15 PM

ಮಡಿಕೇರಿ, ಜನವರಿ 15: ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಭಾನುವಾರ ಅಸಹಜ ಸಾವಿನ ಪ್ರಕರಣವೊಂದು ನಡೆದಿತ್ತು. ಅಸ್ಸಾಂ ಮೂಲದ ಕಾರ್ಮಿಕ ಬೂನೋ ಎಂಬಾತ ಮೃತಪಟ್ಟಿದ್ದು, ಬಿದ್ದು ಗಾಯಗೊಂಡ ಕಾರಣ ಆತ ಇಹಲೋಕ ತ್ಯಜಿಸಿರೋದಾಗಿ ಹೇಳಲಾಗಿತ್ತು. ಹೀಗಾಗಿ ಆತನ ಅಂತ್ಯ ಸಂಸ್ಕಾರವನ್ನೂ ಮಕ್ಕಳು ಮತ್ತು ಆತ ಕೆಲಸಕ್ಕಿದ್ದ ಎಸ್ಟೇಟ್ ಮಾಲೀಕ ಸೇರಿ ನಡೆಸಿದ್ದರು. ಆದರೆ ಕಾರ್ಮಿಕನ ಸಾವಿನ ಬಗ್ಗೆ ಊರಿನವರಿಗೆ ಮೂಡಿದ್ದ ಅನುಮಾನವೀಗ ಇಡೀ ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಬೂನೋದು ಅಸಹಜ ಸಾವಲ್ಲ ಬದಲಾಗಿ ಮರ್ಡರ್​​ ಎಂಬ ಸತ್ಯ ಬಯಲಾಗಿದೆ.

ಬೂನೋ ಪುತ್ರ ಪ್ರಶಾಂತ್ ಎಂಬಾತನೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ತಂದೆಯನ್ನು ಕೊಂದಿದ್ದ ಆತ ಘಟನೆಯನ್ನು ಅಸಹಜ ಸಾವು ಎಂಬಂತೆ ಬಿಂಬಿಸಿ ಎಲ್ಲರನ್ನು ನಂಬಿಸಿದ್ದ. ಎಸ್ಟೇಟ್ ಮಾಲೀಕರ ಜೊತೆ ಸೇರಿ ಮಡಿಕೇರಿ ನಗರದ ಹಿಂದೂ ರುದ್ರ ಭೂಮಿಯಲ್ಲಿ ತಂದೆಯ ಅಂತ್ಯ ಸಂಸ್ಕಾರವನ್ನೂ ನಡೆಸಿದ್ದ. ಇದಕ್ಕೆ ಆತನ ಸಹೋದರ ಕೂಡ ನೆರವಾಗಿದ್ದ ಎನ್ನಲಾಗಿದೆ. ಆದ್ರೆ ಬೂನೋ ಸಾವಿನ ಸುತ್ತ ಹಲವು ಅನುಮಾನಗಳಿದ್ದವು. ಹೀಗಾಗಿ ಈ ಕುರಿತು ಊರಿನ ಕೆಲವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕುಡಿದ ಮತ್ತಿನಲ್ಲಿ ತಾನೇ ತಂದೆಯನ್ನು ಕೊಲೆ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಸೀನಿಯರ್​​ನನ್ನೇ ಕೊಂದ ಜೂನಿಯರ್; ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿ ಹತ್ಯೆಗೆ ಕಾರಣವೇನು?

ಜನವರಿ 11ರ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತೋಟದ ಮನೆಯಲ್ಲಿ ತಂದೆ ಮತ್ತು ಮಗನ ಮಧ್ಯೆ ಗಲಾಟೆಯಾಗಿದೆ. ಈ ಸಂದರ್ಭ ಗಲಾಟೆ ತಾರಕಕ್ಕೇರಿ ಮಗ ಪ್ರಶಾಂತ್​​ ದೊಣ್ಣೆಯಿಂದ ತಂದೆ ಬೂನೋನ ತಲೆಗೆ ಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೂನೋ ಅಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣವೇ ಉಳಿದ ಕಾರ್ಮಿಕರು ವಿಷಯವನ್ನು ಎಸ್ಟೇಟ್ ಮಾಲೀಕ ದೇವಯ್ಯನಿಗೆ ತಿಳಿಸಿದ್ದು, ಬಳಿಕ ದೇಹವನ್ನು ಹಿಂದೂ ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಸುಟ್ಟು ಆರೋಪಿಗಳು ಸಾಕ್ಷ್ಯ ನಾಶ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪಿ ಪ್ರಶಾಂತ್, ಎಸ್ಟೇಟ್ ಮಾಲಿಕ ದೇವಯ್ಯನನ್ನ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:13 pm, Thu, 15 January 26