AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಟ್ವರ್ಕ್ ಆಯ್ತು ಈಗ ಜಾತಿ ಗಣತಿದಾರರಿಗೆ ಕಾಡು ಪ್ರಾಣಿಗಳ ಕಾಟ? ಶಿಕ್ಷಕರು ಕಂಡುಕೊಂಡ ಪರಿಹಾರವೇನು ಗೊತ್ತಾ?

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡ ಮೊದಲ ದಿನದಿಂದಲೇ ಹಲವು ಸಮಸ್ಯೆಗಳ ಗುಡಾಗಿತ್ತು. ಕೆಲವೆಡೆ ಇನ್ನು ನೆಟ್ವರ್ಕ್ ಸಮಸ್ಯೆವಿರುವುದು ಕಂಡುಬರುತ್ತಿದೆ. ಈ ಮಧ್ಯೆ ಕೊಡಗು ಜಿಲ್ಲೆಯಲ್ಲಿ ಸಮೀಕ್ಷೆಗೆ ತೆರಳುವ ಶಿಕ್ಷಕರಿಗೆ ಪ್ರಾಣಿಗಳ ಕಾಟ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಗೆ ಶಿಕ್ಷಕರು ಕಂಡುಕೊಂಡ ಪರಿಹಾರವೇನು ಗೊತ್ತಾ?

ನೆಟ್ವರ್ಕ್ ಆಯ್ತು ಈಗ ಜಾತಿ ಗಣತಿದಾರರಿಗೆ ಕಾಡು ಪ್ರಾಣಿಗಳ ಕಾಟ? ಶಿಕ್ಷಕರು ಕಂಡುಕೊಂಡ ಪರಿಹಾರವೇನು ಗೊತ್ತಾ?
ಸಮೀಕ್ಷೆ ಮಾಡುತ್ತಿರುವುದು
Gopal AS
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 14, 2025 | 4:08 PM

Share

ಕೊಡಗು, ಅಕ್ಟೋಬರ್​ 14: ಜಾತಿ ಸಮೀಕ್ಷೆಗೆ (caste survey) ತೆರಳುವ ಸಮೀಕ್ಷಾದಾರರಿಗೆ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಲಿವೆ. ಇತ್ತ ಕೊಡಗು (Kodagu) ಜಿಲ್ಲೆಯಲ್ಲಿ ಸಮೀಕ್ಷಾದಾರರ ಸಮಸ್ಯೆಗಳು ಒಂದೆರಡಲ್ಲ. ಗುಡ್ಡಗಾಡು ಪ್ರದೇಶ ಒಂದು ಕಡೆಯಾದರೆ, ನೆಟ್ವರ್ಕ್​ ಇಶ್ಯೂ ಜೊತೆಗೆ ಕಾಡು ಪ್ರಾಣಿಗಳ ಕಾಟ. ಹಾಗಾಗಿ ಕೆಲವೊಂದು ಗ್ರಾಮಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಜೊತೆ ಸೇರಿ ಗ್ರಾಮಗಳ ಜನರನ್ನ ಒಂದೆಡೆ ಕರೆತಂದು ಸರ್ವೆ ಮಾಡಲಾಗುತ್ತಿದೆ.

ಜೀವ ಕೈಯಲ್ಲಿ ಹಿಡಿದೇ ಗಣತಿ ಮಾಡುತ್ತಿರುವ ಶಿಕ್ಷಕರು

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಇನ್ನಿಲ್ಲದ ಆನೆ ಕಾಟವಿದೆ. ಸಿದ್ದಾಪುರ, ಅವರೆಗುಂದ, ಬಸವನಹಳ್ಳಿ, ಚೆನ್ನಯ್ಯನಕೋಟೆ, ಕರಡಿಗೋಡು ಗುಹ್ಯ ಹೀಗೆ ಹತ್ತು ಹಲವು ಗ್ರಾಮಗಳಲ್ಲಿ ನಿರಂತರವಾಗಿ ಆನೆ ಕಾಟವಿದೆ. ಇಂತಹ ಗ್ರಾಮಗಳಲ್ಲಿ ಶಿಕ್ಷಕರು ಜೀವ ಕೈಯಲ್ಲಿ ಹಿಡಿದೇ ಗಣತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗೈರಾದವರಿಗೆ ಜಿಬಿಎ ಶಾಕ್!

ಅದರಲ್ಲೂ ಕಳೆದ ವಾರ ಚೆನ್ನಯ್ಯನ ಕೋಟೆ ಗ್ರಾಮದಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕರೊಬ್ಬರನ್ನು ಕಾಡಾನೆ ಅಟ್ಟಾಡಿಸಿತ್ತು. ಸದ್ಯ ಗಾಯಗೊಂಡಿರುವ ಶಿಕ್ಷಕ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಗಣತಿ ಶಿಕ್ಷಕರ ಬವಣೆ ಒಂದೆರಡಲ್ಲ. ಗಣತಿಗೆ ತೆರಳುವ ಶಿಕ್ಷಕರ ಜೊತೆ ಯಾರೂ ಇರುವುದಿಲ್ಲವಾದರಿಂದ ಯಾವ ಭದ್ರತೆಯೂ ಇಲ್ಲ.

ಗಣತಿದಾರರು ಕಂಡುಕೊಂಡ ಪರಿಹಾರವೇನು?

ಈ ಎಲ್ಲಾ ಕಾರಣಗಳಿಂದಾಗಿ ಕೊಡಗಿನ ಕೆಲವೆಡೆ ಇದೀಗ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸೇರಿ ಪರಿಹಾರವೊಂದನ್ನ ಕಂಡುಕೊಂಡಿದ್ದಾರೆ. ಕಾಡಾನೆಗಳ ಕಾಟವಿರುವ ಸ್ಥಳಗಳಲ್ಲಿ ಆ ಪ್ರದೇಶದ ಜನರನ್ನ ಒಂದೆಡೆ ಬರಲು ಹೇಳಿ ಅಲ್ಲಿಗೆ ಶಿಕ್ಷಕರು ತೆರಳಿ ಗಣತಿ ಮಾಡುತ್ತಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಅವರೆಗುಂದ ಹಾಗೂ ಬಸವನಹಳ್ಳಿ ಗ್ರಾಮಗಳಲ್ಲಿ ಈ ಪ್ರಯೋಗ ಮಾಡಲಾಗಿದ್ದು, ಯಶಸ್ವಿಯಾಗಿದೆ. ಈ ಪ್ರದೇಶದಲ್ಲಿ ಬಹುತೇಕ ಹಾಡಿ ಜನರೇ ಇದ್ದು ಎಲ್ಲರೂ ಬೆಳಗ್ಗೆಯೇ ಕೆಸಲಕ್ಕೆ ತೆರಳುತ್ತಾರೆ. ರಜಾ ದಿನಗಳಲ್ಲಿ ಅಲ್ಲಿಗೆ ಹೋದರೂ ಅಲ್ಲಿ ನೆಟ್ವರ್ಕ್ ಇರುವುದಿಲ್ಲ. ಹಾಗಾಗಿ ಹಾಡಿ ಜನರೆಲ್ಲರನ್ನ ಸಮೀಪದ ಸಮುದಾಯ ಕೇಂದ್ರಗಳಿಗೆ ಬರಲು ಹೇಳಿ ಅಲ್ಲಿಯೇ ಗಣತಿ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಕಾಡು ಪ್ರಾಣಿಗಳ ಕಾಟವೂ ಇರುವುದಿಲ್ಲ ಜೊತೆಗೆ ಗಣತಿಯೂ ಸಲೀಸಾಗಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಜಾತಿ ಸಮೀಕ್ಷೆಗೆಂದು ಹೋದ ಶಿಕ್ಷಕಿಗೆ ಹೃದಯಾಘಾತ; ಶಿಕ್ಷಕರಿಗೆ ಗಣತಿಯ ಹೆಸರಿನಲ್ಲಿ ಒತ್ತಡದ ಶಿಕ್ಷೆ

ಸದ್ಯ ಗಣತಿ ಮುಗಿಸಲು ಇನ್ನು ಮೂರು ದಿನಗಳು ಮಾತ್ರ ಬಾಕಿ ಇದೆ. ಜಿಲ್ಲೆಯಲ್ಲಿ ಶೇಕಡಾ 90 ರಷ್ಟು ಗಣತಿ ಮುಗಿದಿದೆ. ಉಳಿದ ದಿನಗಳಲ್ಲಿ ಶೇಕಡಾ 100 ರಷ್ಟು ಗಣತಿ ಮುಗಿಸುವ ನಿರೀಕ್ಷೆ ಇದೆ. ಸದ್ಯ ವಿಪರೀತ ಆನೆ ಕಾಟಗಳಿರುವ ಸ್ಥಳಗಳಲ್ಲಿ ಯಾವುದೇ ಅನಾಹುತಗಳಾಗದ ರೀತಿ ಗಣತಿ ನಡೆಯುತ್ತಿರುವುದು ಸಮಾಧಾನದ ಸಂಗತಿ ಅಂತ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.