ಹುತಾತ್ಮನಾದ ಕೊಡಗಿನ ಯೋಧನಿಗೆ ಭಾವಾಪೂರ್ಣ ಬೀಳ್ಕೊಡುಗೆ: ಕುಟುಂಬಸ್ಥರ ಕಣ್ಣೀರು, ಮುಗಿಲುಮುಟ್ಟಿದ ರೋಧನೆ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ಯೋಧ ದಿವಿನ್ ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹುತಾತ್ಮ ಯೋಧನಿಗೆ ಫೆಬ್ರವರಿ 23ಕ್ಕೆ ವಿವಾಹ ನಿಶ್ಚಯವಾಗಿತ್ತು.
ಕೊಡಗು, ಜನವರಿ 01: ದೇಶ ಸೇವೆಯಲ್ಲಿ ಹುತಾತ್ಮನಾದ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ಯೋಧನಿಗೆ (Soldier) ಇಂದು ಭಾವಾಪೂರ್ಣ ಬೀಳ್ಕೊಡುಗೆ ನಿಡಲಾಯಿಗಿದೆ. ಕುಟುಂಬಸ್ಥರು, ಊರಿನವರು, ದೇಶಾಭಿಮಾನಿಗಳ ಸಮ್ಮುಖದಲ್ಲಿ ದಿವಿನ್ಗೆ ಅಂತಿಮ ನಮನ ಸಲ್ಲಿಸಲಾಗಿದೆ. ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.
ಐದು ದಿನ ಜೀವನ್ಮರಣ ಹೋರಾಟ
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯೋಧ ದಿವಿನ್ರನ್ನ ಉಧಂಪುರ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾಕ್ಕೆ ಜಾರಿದ್ದ ದಿವಿನ್ ಐದು ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದ್ದರು. ವೈದ್ಯರ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಊರಿನಿಂದ ತಾಯಿ ಜಯಲಕ್ಷ್ಮಿ ಅವರನ್ನ ಆಸ್ಪತ್ರೆಗೆ ಕರೆಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮಗನನ್ನು ಮದುಮಗನಾಗಿ ನೋಡುವ ತವಕದಲ್ಲಿದ್ದ ತಾಯಿಗೆ ದಿವಿನ್ ಸಿಕ್ಕಿದ್ದು ಶವವಾಗಿ!
ತಾಯಿಯ ಧ್ವನಿ ಕೇಳಿ ದಿವಿನ್ ತಮ್ಮ ಬೆರಳನ್ನ ಸ್ವಲ್ಪ ಅಲ್ಲಾಡಿಸಿದ್ದರಂತೆ. ಹಾಗಾಗಿ ತಾಯಿ ಎರಡು ದಿನಗಳ ಕಾಲ ಅಲ್ಲೇ ಉಳಿದಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ದಿವಿನ್ ಕೊನೆಯುಸಿರೆಳೆದಿದ್ದರು. ದಿವಿನ್ ಪಾರ್ಥಿವ ಶರೀರವನ್ನ ನಿನ್ನೆ ಬೆಂಗಳೂರಿಗೆ ತಂದು ಇಂದು ಕೊಡಗಿಗೆ ತರಲಾಯಿತು. ಮೊದಲು ಕುಶಾಲನಗರದ ಪ್ರಾಥಮಿಕ ಶಾಲಾ ಮೈದಾನಲ್ಲಿ ಸಾವರ್ಜನಿಕರ ದರ್ಶನಕ್ಕೆ ಇಡಲಾಯಿತು. ಬಳಿಕ ಮೆರವಣಿಗೆಯಲ್ಲಿ ಆಲೂರು ಸಿದ್ದಾಪುರಕ್ಕೆ ಕೊಂಡೊಯ್ದು ಪ್ರೌಢಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಈ ಸಂದರ್ಭ ಸಾವಿರಾರು ಮಂದಿ ಆಗಮಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
11ನೇ ಮರಾಟಾ ಲಘು ಪದಾತಿ ದಳದಲ್ಲಿ ಸೈನಿಕನಾಗಿದ್ದ ಯೋಧ 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇದೇ ಫೆಬ್ರವರಿ 23ಕ್ಕೆ ವಿವಾಹ ಕೂಡ ನಿಶ್ಚಯವಾಗಿತ್ತು. ಆಮಂತ್ರಣ ಪತ್ರಿಯನ್ನೂ ಹಂಚಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕರ್ತವ್ಯದಲ್ಲಿದ್ದ ದಿವಿನ್ ದೇವರ ಕರೆಗೆ ಓ ಗೊಟ್ಟಿದ್ದರು. ವರ್ಷದ ಹಿಂದೆಯಷ್ಟೇ ತಂದೆಯನ್ನ ದಿವಿನ್ ಕಳೆದುಕೊಂಡಿದ್ದರು. ತಂದೆ-ತಾಯಿಗೆ ಇವರು ಒಬ್ಬನೇ ಮಗನಾಗಿದ್ದರು. ವರ್ಷದ ಹಿಂದೆ ಪತಿ, ಇದೀಗ ಮಗನನ್ನ ಕಳೆದುಕೊಂಡು ತಾಯಿ ಜಯಲಕ್ಷ್ಮಿ ಅಕ್ಷರಶಃ ಅನಾಥರಾಗಿದ್ದಾರೆ. ದೇಶಕ್ಕಾಗಿ ಮಗ ಪ್ರಾಣ ತೆತ್ತಿದಕ್ಕಾಗಿ ಹೆಮ್ಮೆ ಇದೆ ಎನ್ನುತ್ತಾರೆ ತಾಯಿ ಜಲಜಾಕ್ಷಿ.
ಹುಲ್ಲಿನ ಗೊಂಬೆ ಜೊತೆ ಯೋಧನ ವಿವಾಹ
ಸಂಜೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸ್ವಗ್ರಾಮದ ಆಲೂರು ಸಿದ್ದಾಪುರ ಸಮೀಪದ ಮಾಲಂಬಿಗೆ ಕೊಂಡೊಯ್ದು ಗೌಡ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರ ಮಾಡಲಾಯಿತು. ಯೋಧ ಅವಿವಾಹಿತರಾಗಿದ್ದ ಹಿನ್ನೆಲೆಯಲ್ಲಿ ಪದ್ಧತಿಯಂತೆ ಹುಲ್ಲಿನ ಗೊಂಬೆ ಜೊತೆ ಯೋಧನ ಪಾರ್ಥಿವ ಶರೀರಕ್ಕೆ ವಿವಾಹ ಮಾಡಿಸಲಾಯಿತು. ಬಳಿಕ ಸೇನೆಯ ಎಎಸ್ಸಿ ಯೋಧರು 21 ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಯೋಧನಿಗೆ ಗೌರವ ಸಲ್ಲಿಸಿದರು. ಬಳಿಕ ಯೋಧನ ಚಿಕ್ಕಪ್ಪನ ಪುತ್ರ ಚಿರಾಗ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದರೊಂದಿಗೆ ವೀರ ಯೋಧ ಪಂಚಭೂತಗಳಲ್ಲಿ ಲೀನವಾದವರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.