
ಕೊಡಗು, ಜೂನ್ 14: ಕೌಟುಂಬಿಕ ಕಲಹದ ಹಿನ್ನೆಲೆ ನನ್ನ ಪತಿಯೇ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿಯೊಬ್ಬಳು ಕಣ್ಣೀರಿಡುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕೊಡಗು (Kodagu) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಹಿಳೆ ತನ್ನ ಮಗುವಿನೊಂದಿಗೆ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ವೇಳೆ ಆಕೆಯ ಮನೆಗೆ ಬಂದ ಪತಿ, ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಎಂಬಾಕೆಗೆ ಆರು ವರ್ಷಗಳ ಹಿಂದೆ ತಿಮ್ಮಯ್ಯ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಗಂಡು ಮಗನಿದ್ದಾನೆ. ಆದರೆ, ಕಳೆದ ಒಂದೆರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ತೀವ್ರ ಜಗಳ ನಡೆಯುತ್ತಿತ್ತು. ಪತಿ ತಿಮ್ಮಯ್ಯ ಗಾಂಜಾ ಮತ್ತು ಮದ್ಯದ ವ್ಯಸನಿಯಾಗಿದ್ದು, ಕೆಲಸಕ್ಕೂ ಹೋಗದೆ, ನಿತ್ಯ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಪತಿಯ ಕಾಟ ತಡೆಯಲಾರದೆ ಭವ್ಯ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು.
ಜೂನ್ 10 ರಂದು ಭವ್ಯ ಅವರ ತಾಯಿ ಮನೆ ಸಮೀಪ ಬಂದ ಪತಿ ತಿಮ್ಮಯ್ಯ, ಬಲವಂತವಾಗಿ 5 ವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಭವ್ಯ ಗಂಡನ ಮನೆಗೆ ಹೋಗಿ ನೋಡಿದಾಗ ಅಲ್ಲಿ ಪತಿಯಾಗಲಿ, ಮಗನಾಗಲಿ ಇರಲಿಲ್ಲ. ಪತಿ ಗಾಂಜಾ ವ್ಯಸನಿಯಾಗಿದ್ದರಿಂದ ಮಗುವಿಗೆ ಏನಾದರೂ ಹೆಚ್ಚು ಕಡಿಮೆ ಮಾಡಬಹುದು ಎಂಬ ಭೀತಿಯಲ್ಲಿ ತಾಯಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ತಿಮ್ಮಯ್ಯ ಮಚ್ಚು, ಲಾಂಗು ಹಿಡಿದು ಹಲ್ಲೆಗೆ ಮುಂದಾಗಿದ್ದರಿಂದ ಮಗುವಿಗೆ ಏನಾಗಿದೆಯೋ ಎಂಬ ಭಯದಿಂದಲೇ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಗುವಿನ ಪತ್ತೆಗಾಗಿ ಭವ್ಯ ಸದ್ಯ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಎಸ್‌ಪಿ ಅವರು ತನಿಖೆಗೆ ಆದೇಶಿಸಿದ್ದು, ಪೊಲೀಸರು ಮಗುವಿನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.