ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅಪ್ರಾಪ್ತರು ಗರ್ಭಿಣಿಯಾರಾಗುತ್ತಿರುವ ಸಂಖ್ಯೆ: 9 ತಿಂಗಳಲ್ಲಿ 59 ಪೋಕ್ಸೋ ಕೇಸ್

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮವಾಗಿ ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ 30 ಮಂದಿ ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದು, ಒಟ್ಟಾರೆ 59 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾಡಳಿತದ ನಿದ್ದೆಗಡಿಸಿದೆ. ಸದ್ಯ, ಇಂಥ ಪ್ರಕರಣಗಳ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅಪ್ರಾಪ್ತರು ಗರ್ಭಿಣಿಯಾರಾಗುತ್ತಿರುವ ಸಂಖ್ಯೆ: 9 ತಿಂಗಳಲ್ಲಿ 59 ಪೋಕ್ಸೋ ಕೇಸ್
ಸಾಂದರ್ಭಿಕ ಚಿತ್ರ
Edited By:

Updated on: Feb 20, 2025 | 10:24 AM

ಮಡಿಕೇರಿ, ಫೆಬ್ರವರಿ 20: ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನವರು ಗರ್ಭಿಣಿಯರಾಗುತ್ತಿರುವ ಸಂಖ್ಯೆ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ 9 ತಿಂಗಳುಗಳಲ್ಲಿ 30 ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 59 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಅಪ್ರಾಪ್ತರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ಬರುವಂತೆ ಮಾಡಿದೆ.

30 ಅಪ್ರಾಪ್ತೆಯರ ಪೈಕಿ ಈಗಾಗಲೇ 14 ಬಾಲಕಿಯರಿಗೆ ಹೆರಿಗೆ ಆಗಿದೆ. ಮತ್ತೊಬ್ಬಳು ಬಾಲಕಿಗೆ ಗರ್ಭಪಾತ ಆಗಿರುವುದು ಗೊತ್ತಾಗಿದೆ.

ಯಾವೆಲ್ಲ ಊರುಗಳಲ್ಲಿ ಹೆಚ್ಚು?

ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲೇ 43 ಸಂತ್ರಸ್ತೆಯರು ಪತ್ತೆಯಾಗಿದ್ದಾರೆ. ಈ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ.

ಲೈಂಗಿಕ ದೌರ್ಜನ್ಯ: ತೋಟದ ಮನೆಗಳಲ್ಲೇ ಹೆಚ್ಚು

ತೋಟದ ಮನೆಗಳಲ್ಲೇ ಬಾಲಕಿಯರ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಬಾಲ್ಯ ವಿವಾಹ ಪ್ರಕರಣಗಳು ಕೂಡ ಹೆಚ್ಚಾಗುತ್ತಿರುವುದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಐದು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣದಿಂದ ಜಿಲ್ಲೆಯಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ಇಂತಹ ಪ್ರಕರಣ ತಡೆಗಟ್ಟಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದೆ.

ಇದನ್ನೂ ಓದಿ: ಕೊಡಗು: ಸಮಾರಂಭಗಳಿಗೆ ಮದ್ಯ ಪೂರೈಕೆಗೆ ಅನುಮತಿ ಕಡ್ಡಾಯಗೊಳಿಸಿದ ಅಬಕಾರಿ ಇಲಾಖೆ

ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವೇನು? ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಮಾಡಬೇಕು? ಲೈಂಗಿಕ ದೌರ್ಜನ್ಯದಂತಹ ಅನ್ಯಾಯಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಪ್ರಾಪ್ತ ಬಾಲಕಿಯರನ್ನು ಹಾಗೂ ಇತರ ಸಮುದಾಯಗಳ ಬಾಲಕಿಯರ ರಕ್ಷಣೆಗೆ ಏನು ಮಾಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸಮಲೋಚನೆ ನಡೆಸುತ್ತಿದೆ. ಆ ಮೂಲಕ ಜಿಲ್ಲೆಯ ಪಿಡುಗನ್ನು ತೊಡೆದು ಹಾಕಲು ಕ್ರಮ ಕೈಗೊಳ್ಳಲು ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ