
ಕೊಡಗು, ಜನವರಿ 27: ಜಿಲ್ಲೆಯಲ್ಲಿ ಲವ್ ಜಿಹಾದ್ (Love Jihad) ನಡೆಯುತ್ತಿದೆಯಾ? ಎಂಬ ಗಂಭೀರ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಲವ್ ಜಿಹಾದ್ ವಿರುದ್ಧ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ (protest) ಕೂಡ ನಡೆದಿದೆ. ಪ್ರತಿಭಟನಾಕಾರರ ಪ್ರಕಾರ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 10ಕ್ಕೂ ಹೆಚ್ಚು ಹಿಂದೂ ಯುವತಿಯರು ಅನ್ಯಧರ್ಮೀಯರನ್ನ ವಿವಾಹ ಆಗಿದ್ದಾರಂತೆ. ಹೀಗಾಗಿ ಇದನ್ನು ಖಂಡಿಸಿ ಹಿಂದೂ ಸುರಕ್ಷಾ ಸಮಿತಿಯಿಂದ ಇಂದು ಪ್ರತಿಭಟನೆ ಮಾಡಲಾಗಿದೆ.
ಮತೀಯ ಸೂಕ್ಷ್ಮ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಲವ್ ಜಿಹಾದ್ ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಜಿಲ್ಲೆಯ ಹೆಣ್ಣು ಮಕ್ಕಳ ಬಾಳು ಹಾಳಾಗುತ್ತಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಅರಿವು ಮೂಡಿಸಲು ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 6ಕ್ಕೂ ಅಧಿಕ ಲವ್ ಜಿಹಾದ್ ಪ್ರಕರಣಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ: ಕಾರಣ ಇಲ್ಲಿದೆ
ಹಿಂದಿನ ಪ್ರಕರಣಗಳನ್ನ ಸೇರಿಸಿದರೆ ಈ ಭಾಗದಲ್ಲಿ 18ಕ್ಕೂ ಅಧಿಕ ಹಿಂದೂ ಹೆಣ್ಣು ಮಕ್ಕಳು ಅನ್ಯ ಧರ್ಮೀಯರನ್ನ ಪ್ರೀತಿ-ಪ್ರೇಮದ ಹೆಸರಲ್ಲಿ ವರಿಸಿದ್ದಾರಂತೆ. ಹಾಗಾಗಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಇಂದು ನಾನಾ ಹಿಂದೂ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದವು.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪಟ್ಟಣದಲ್ಲಿ ಹಿಂದೂ ಸಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿ ನಡೆಸಿ ಸಮಾವೇಶ ಮಾಡಿದರು. ಈ ವೇಳೆ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ಗಣರಾಜ್, ಜಿಹಾದಿ ಶಕ್ತಿಗಳು ಭಾರತವನ್ನ ಹಂತ ಹಂತವಾಗಿ ಇಸ್ಲಾಮೀಕರಣ ಮಾಡಲು ಹೊರಟಿವೆ ಎಂದು ಆರೋಪಿಸಿದರು.
ಗೋಣಿಕೊಪ್ಪ ಮೂಲದ ಕಾಲೇಜು ಯುವತಿಯೊಬ್ಬಳು ಸಿದ್ದಾಪುರದ ಅನ್ಯಕೋಮಿನ ಯುವಕನೊಬ್ಬನ ಜೊತೆ ಪರಾರಿಯಾಗಿದ್ದಳು. ಬಳಿಕ ವಿವಾಹವಾಗುವುದಾಗಿ ಹಠ ಹಿಡಿದಿದ್ದಳು. ಎಳೆ ವಯಸ್ಸಿನ ಹುಡುಗಿಯರ ತಲೆ ಕೆಡಿಸಿ ಈ ರೀತಿ ಮಾಡುತ್ತಿರುವುದು ಲವ್ ಜಿಹಾದ್ ಆಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎಂದು ಹಿಂದೂ ಮುಖಂಡರುಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳನ್ನ ಹೂವಿನಂತೆ ಸಾಕಿ ಇದೀಗ ಕಡುಕರ ಕೈಗೆ ಕೊಟ್ಟಂತಾಗಿದೆ ಎಂದು ವಿಷಾದಿಸಿದರು. ಈ ಬಗ್ಗೆ ಕಾನೂನಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಬದಲಿಗೆ ಪೋಷಕರೇ ಎಚ್ಚೆತ್ತುಕೊಂಡು ತಮ್ಮ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವಂತೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಚೆಂದುಳ್ಳಿ ಚೆಲುವೆಯ ಮಾತಿಗೆ ಮರುಳಾಗಿ ಹೋಗಿದ್ದವ ರಸ್ತೆಯಲ್ಲಿ ಬೆತ್ತಲಾಗಿ ನಿಂತ: ಆಗಿದ್ದೇನು?
ಸಿದ್ದಾಪುರ ಸೇರಿದಂತೆ ಕೊಡಗಿನ ಹಲವೆಡೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಅನ್ಯಧರ್ಮೀಯರ ವಿವಾಹ ಸಂಪ್ರದಾಯವಾದಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ವಿವಾಹವಾಗಿ ಹೋದ ಯುವತಿಯರು ಮಾತೃಧರ್ಮ ತ್ಯಜಿಸಿ ಮತ್ತೊಂದು ಧರ್ಮವನ್ನ ಸ್ವೀಕರಿಸಿ ಪರದೆಯ ಹಿಂದೆ ಸರಿಯುತ್ತಿರುವುದು ಜಿಲ್ಲೆಯಲ್ಲಿ ನಿಜಕ್ಕೂ ಚಿಂತೆಗೀಡು ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.