4 ಮಕ್ಕಳು ಹೆತ್ತರೆ 1 ಲಕ್ಷ ರೂ ಬಹುಮಾನ: ಕೊಡವ ಜನಾಂಗಕ್ಕೆ ಕೊಡವ ಸಮಾಜದ ವಿಶಿಷ್ಟ ಆಫರ್
ಕೊಡಗಿನ ಕೊಡವ ಸಮಾಜವು ತಮ್ಮ ಸಂಸ್ಕೃತಿಯನ್ನು ಉಳಿಸಲು ವಿಶೇಷ ಕ್ರಮ ಕೈಗೊಂಡಿದೆ. ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ 25,000 ರಿಂದ 1,00,000 ರೂಪಾಯಿಗಳವರೆಗೆ ನಗದು ಬಹುಮಾನ ನೀಡಲಾಗುತ್ತಿದೆ. ಈ ವಿಶಿಷ್ಟ ಪ್ರಯತ್ನದಿಂದ ಕೊಡವ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
ಮಡಿಕೇರಿ, ಅಕ್ಟೋಬರ್ 30: ಮೊದಲು ಮಕ್ಕಳಿರಲವ್ವ ಮನೆ ತುಂಬಾ ಎನ್ನುವ ಕಾಲವಿತ್ತು. ಆಮೇಲೆ ಆರತಿಗೊಂದು ಕೀರುತಿಗೊಂದು ಎನ್ನುವ ಕಾಲ ಬಂತು. ಈಗ ಒಂದೇ ಮಗು ಸಾಕಪ್ಪ ಅನ್ನೋ ಕಾಲಬಂದಿದೆ. ಆದರೆ ಕೊಡಗಿನಲ್ಲಿ ಕೊಡವ (Kodava) ಕುಟಂಬ ಉಳಿಸಲು ವಿಶಿಷ್ಟ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದೆ. ಮನೆ ತುಂಬಾ ಮಕ್ಕಳು ಮಾಡುವ ಪೋಷಕರಿಗೆ 25 ಸಾವಿರ ರೂ.ದಿಂದ ಒಂದು ಲಕ್ಷ ರೂ. ದವರೆಗೆ ಬಹುಮಾನ ನೀಡಲಾಗುತ್ತಿದೆ.
ತಮ್ಮ ಜನಾಂಗಕ್ಕೆ ಹೆಚ್ಚು ಮಕ್ಕಳನ್ನ ಮಾಡಿಕೊಳ್ಳುವಂತೆ ಆಫರ್ ನೀಡಿದ ಕೊಡವ ಸಮಾಜಗಳು
ಕೊಡಗು ಜಿಲ್ಲೆ ಅತಿ ವಿಶಿಷ್ಟ ಸಂಸ್ಕೃತಿ ಪದ್ಧತಿ ಪರಂಪರೆಗೆ ಹೆಸರಾದ ಜಿಲ್ಲೆ. ಇಲ್ಲಿನ ಕೊಡವ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿಯೇ ಸಾಂಸ್ಕೃತಿಕವಾಗಿ ಕೊಡಗು ಜಿಲ್ಲೆ ಅತಿಸೂಕ್ಷ್ಮ ಪ್ರದೇಶ ಅಂತಾನೇ ಪರಿಗಣಿತವಾಗಿದೆ. ಆದರೆ ಇತ್ತೀಚಿನ ವರ್ಷಗಳಿಂದ ಕೊಡವರು ಸಾಂಸ್ಕೃತಿಕವಾಗಿ ಅದಃಪತನದತ್ತ ಸಾಗುತ್ತಿದ್ದಾರೆ ಅನ್ನೋ ಆತಂಕ ಜನರನ್ನ ಕಾಡುತ್ತಿದೆ. ಎಲ್ಲರೂ ತಮ್ಮ ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳಿ ಅಲ್ಲೇ ಜೀವನ ಮಾಡುತ್ತಿದ್ದಾರೆ. ಜೊತೆಗೆ ಒಂದೇ ಮಗು ಸಾಕು ಅಂತ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಜಿಲ್ಲೆಯ ಹಬ್ಬ ಹರಿದಿನಗಳಿಗೆ ಬರುವ ಕೊಡವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೊಂದು ದಿನ ಕೊಡವರು ಬೆರಳೆಣಿಕೆ ಸಂಖ್ಯೆಗೆ ಇಳಿದರೂ ಅಚ್ಚರಿ ಇಲ್ಲ. ಹಾಗಾಗಿ ಜಿಲ್ಲೆಯ ವಿವಿಧ ಊರುಗಳಲ್ಲಿರುವ ಕೊಡವ ಸಮಾಜಗಳು ತಮ್ಮ ಜನಾಂಗಕ್ಕೆ ಹೆಚ್ಚು ಹೆಚ್ಚು ಮಕ್ಕಳನ್ನ ಮಾಡಿಕೊಳ್ಳುವಂತೆ ಆಫರ್ ನೀಡಿದೆ.
ಮೂರು ಮಕ್ಕಳಿಗೆ 50 ಸಾವಿರ ರೂ, 4 ಮಕ್ಕಳಿಗೆ 1 ಲಕ್ಷ ರೂ ಬಹುಮಾನ
ಪೊನ್ನಂಪೇಟೆ ತಾಲ್ಲೂಕಿನ ಟಿ ಶೆಟ್ಟಿಗೇರಿ ಕೊಡವ ಸಮಾಜ ಈ ವಿಶಿಷ್ಟ ಆಫರ್ ನೀಡಿದೆ. ಯಾವ ಕೊಡವ ಕುಟುಂಬದ ಮೂರು ಮಕ್ಕಳಿಗೆ ಜನ್ಮ ನೀಡುವ ಪೋಷಕರಿಗೆ ಅವರಿಗೆ 50 ಸಾವಿರ ರೂ ಬಹುಮಾನ, 4 ಮಕ್ಕಳು ಮಾಡಿಕೊಳ್ಳುವ ಪೋಷಕರಿಗೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಈ ಹಣವನ್ನ ಆ ಮಗುವಿನ ಹೆಸರಲ್ಲಿ ಬ್ಯಾಂಕ್ನಲ್ಲಿ ಡಿಪಾಸಿಟ್ ಇಟ್ಟು 18 ವರ್ಷ ತುಂಬಿದ ಬಳಿಕ ನೀಡುವುದಾಗಿ ಪ್ರಕಟಿಸಲಾಗಿದೆ.
ಇನ್ನು ಮಡಿಕೇರಿ ಕೊಡವ ಸಮಾಜ ಕೂಡ ಇಂತಹ ಒಂದು ಆಫರ್ ಅನ್ನು ಈಗಾಗಲೇ ಜಾರಿ ಮಾಡಿದೆ. ಈಗಾಗಲೇ ಮೂರು ಮಕ್ಕಳನ್ನು ಮಾಡಿಕೊಂಡಿರುವ ಒಂದು ಕುಟುಂಬ ಹಾಗೂ ನಾಲ್ಕು ಮಕ್ಕಳನ್ನು ಮಾಡಿಕೊಂಡಿರುವ ಒಂದು ಕುಟುಂಬವನ್ನು ಗುರುತಿಸಿ ಹಣ ನೀಡಿ ಹಾಗೂ ಸನ್ಮಾನ ಕೂಡ ಮಾಡಲಾಗಿದೆ. ಹಲವಾರು ಕೊಡವ ವ್ಯಕ್ತಿಗಳೂ ವೈಯಕ್ತಿಕವಾಗಿಯೂ ಕುಟುಂಬಗಳಿಗೆ ಹಣಕಾಸು ನೆರವು ನೀಡಿದೆ. ತಮ್ಮ ಜನಾಂಗದ ಅತಿವಿಶಿಷ್ಟ ಸಂಸ್ಕೃತಿಯನ್ನು ಉಳಿಸಲು ಇಂತಹ ಕ್ರಮಕ್ಕೆ ಮುಂದಾಗಿರುವುದಾಗಿ ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಮುತ್ತಪ್ಪ ಮಂಡುವಂಡ ಹೇಳಿದ್ದಾರೆ.
ವಿಶಿಷ್ಟ ಆಫರ್ ಬಗ್ಗೆ ಕೊಡವ ಯುವ ಜನತೆಯಿಂದಲೂ ಬೆಂಬಲ
ಒಂದು ಕಾಲದಲ್ಲಿ ಕೊಡಗಿನಲ್ಲಿ ಬಹುಸಂಖ್ಯಾತರಾಗಿದ್ದ ಕೊಡವರು ಇದೀಗ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಇರುವ ಕೊಡವರಿಗಿಂತ ಹೊರ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಲ್ಲಿ ಇರುವ ಕೊಡವರ ಸಂಖ್ಯೆಯೇ ಜಾಸ್ತಿ ಇದೆ. ಇವರು ವರ್ಷಕ್ಕೆಂದೆರಡು ಬಾರಿ ಮಾತ್ರ ಕೊಡಗಿಗೆ ಬರುತ್ತಿದ್ದಾರೆ. ಇದರಿಂದಾಗಿ ಕೊಡವ ಸಂಸ್ಕೃತಿಯೇ ಅಪಾಯಕ್ಕೆ ಸಿಲುಕಿದೆ. ಈ ಎಲ್ಲಾ ಸಮಸ್ಯೆಗಳ ಜೊತೆ ಅಂತರ್ಜಾತಿ ವಿವಾಹ ಆಗುತ್ತಿರುವ ಕೊಡವ ಯುವತಿಯರ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದು ಸಮಸ್ಯೆಯಾಗಿ ಕಾಡುತ್ತಿದೆ.
ಜಿಲ್ಲೆಯಲ್ಲಿ ನೆಲೆಸಿರುವ ಬಹಳಷ್ಟು ಕೊಡವ ಯುವಕರು ವಿವಾಹಕ್ಕೆ ಯುವತಿಯರು ಸಿಗದೆ ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕೊಡವರ ಸಂಖ್ಯೆ ಅತಿಯಾಗಿ ಇಳಿಕೆ ಆಗುತ್ತಿರುವುದು ಜನಾಂಗದ ಹಿರಿಯರಲ್ಲಿ ಆತಂಕ ಮೂಡಿಸಿದೆ. ಹಾಗಾಗಿಯೇ ಜನಾಂಗದ ಹಿರಿಯರು ಕೊಡವ ಜನಾಂಗದ ಜನಸಂಖ್ಯೆ ಬೆಳೆಸಲು ಇಂತಹ ಒಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕೊಡವ ಯುವ ಜನತೆಯಿಂದಲೂ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ: ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿದ ಕೆಆರ್ಎಸ್
ಕೊಡವ ಸಮಾಜದ ನಿಲುವುಗಳನ್ನು ಸ್ವಾಗತಿಸುವುದೂ ಅಲ್ಲದೆ, ಜಿಲ್ಲೆಯ ಇತರೆ ಕೊಡವ ಸಮಾಜಗಳೂ ಇಂತಹ ಪ್ರೋತ್ಸಾಹ ನೀಡಲು ಮುಂದೆ ಬರಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಕರೆ ನೀಡಿದ್ದಾರೆ. ಯಾವುದೇ ಒಂದು ಪ್ರದೇಶದಲ್ಲಿ ಅಭಿವೃದ್ಧಿ ಹಾಗೂ ಆಧುನೀಕತೆಯ ಪ್ರವಾಹದಲ್ಲಿ ಸಾಂಸ್ಕೃತಿಕ ಅತಿಸೂಕ್ಷ್ಮ ಪಂಗಡಗಳು ಅವಸಾನವಾಗುತ್ತಿರುವುದು ಹೊಸದೇನಲ್ಲ. ಆದರೆ ಇದರ ಸಾಲಿಗೆ ನಮ್ಮ ಕೊಡವ ಜನಾಂಗ ಕೂಡ ಸೇರುತ್ತಿರುವುದು ಮಾತ್ರ ವಿಪರ್ಯಾಸ. ಈ ನಿಟ್ಟಿನಲ್ಲಿ ಕೊಡವ ಸಮಾಜಗಳ ಈ ಪ್ರಯತ್ನ ಆಶಾದಾಯಕವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.