ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇಯಲ್ಲಿ ಬೈಕ್, ರಿಕ್ಷಾ, ಟ್ರ್ಯಾಕ್ಟರ್ ಸಂಚಾರ ನಿಷೇಧ

Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಂದಾಗಿ ಕೋಲಾರ ಪೊಲೀಸರು, ದ್ವಿಚಕ್ರ, ತ್ರಿಚಕ್ರ ವಾಹನಗಳು ಮತ್ತು ಟ್ರಾಕ್ಟರ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಹಲವು ಅಪಘಾತಗಳು ಮತ್ತು ಸಾವುಗಳು ಸಂಭವಿಸಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿಂದಿನ ನಿರ್ದೇಶನವನ್ನು ಅನುಸರಿಸಿಯೇ ಈ ಕ್ರಮ ಕೈಗೊಳ್ಳಲಾಗಿದೆ. ದ್ವಿಚಕ್ರ ವಾಹನಗಳ ಸಂಚಾರ ಮುಂದುವರಿಯುತ್ತಿರುವುದು ಕಂಡುಬಂದ ಕಾರಣ ಪೊಲೀಸರು ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇಯಲ್ಲಿ ಬೈಕ್, ರಿಕ್ಷಾ, ಟ್ರ್ಯಾಕ್ಟರ್ ಸಂಚಾರ ನಿಷೇಧ
ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ
Updated By: Ganapathi Sharma

Updated on: Jun 12, 2025 | 8:54 AM

ಬೆಂಗಳೂರು, ಜೂನ್ 12: ನೂತನ ಚೆನೈ ಬೆಂಗಳೂರು ಎಕ್ಸ್​ಪ್ರೆಸ್ ವೇಯಲ್ಲಿ (Bengaluru-Chennai Expressway)  ಅಪಘಾತಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಕೋಲಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್​ಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಹೆದ್ದಾರಿಯಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವ ಕಾರಣ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.

ಜೂನ್ 9 ರಂದು ಸೋಮವಾರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಎಡಗಿನಬೆಲೆ ಟೋಲ್​​ ಬಳಿ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ರಾಜಸ್ಥಾನ ಮೂಲದ ಅಶೋಕ್ (28) ಮತ್ತು ಮೋಹನ್ ಲಾಲ್ (32) ಮೃತಪಟ್ಟಿದ್ದರು.

ನಿಷೇಧ ಇದ್ದರೂ ಬೈಕ್ ಸಂಚಾರ ಸರಾಗ!

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2025ರ ಮಾರ್ಚ್​ನಲ್ಲೇ ಸುತ್ತೋಲೆ ಹೊರಡಿಸಿತ್ತು. ಆದಾಗ್ಯೂ, ದ್ವಿಚಕ್ರ ವಾಹನ ಸಂಚಾರ ಎಗ್ಗಿಲ್ಲದೆ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಪೊಲೀಸರು ಕೂಡ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ
ಕಟ್ಟಡ ನಕ್ಷೆಗೆ ಇನ್ಮುಂದೆ ಇ ಖಾತಾ ಕಡ್ಡಾಯ: ಆಸ್ತಿ ಮಾಲೀಕರು ಕಂಗಾಲು
ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬಾಕಿ ಉಳಿದಿದ್ದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನ ನೇಮಿಸಿದ ಬಿಜೆಪಿ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ

ಕೋಲಾರದ ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಮಾರ್ಚ್​ ತಿಂಗಳಲ್ಲಿ ದ್ವಿಚಕ್ರ ವಾಹನವೊಂದು ರಾಂಗ್ ಸೈಡ್​​ನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ್ದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಆ ನಂತರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ ಕೈಗೊಂಡಿತ್ತು.

ಬೈಕ್ ಸಂಚಾರ ನಿಷೇಧ: ಕಾನೂನಿನಲ್ಲೇನಿದೆ?

ಕಾನೂನಿನ ಪ್ರಕಾರ, ಅತಿ ವೇಗದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಒಟ್ಟು 260 ಕಿಲೋಮೀಟರ್ ಉದ್ದವಿದ್ದು, ಕರ್ನಾಟಕ ವ್ಯಾಪ್ತಿಯಲ್ಲಿ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದೆ. ಈ ಹೆದ್ದಾರಿಯು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗುತ್ತದೆ. ಹೈವೇಯ ಉಳಿದ ಭಾಗದ ಕಾಮಗಾರಿ ಈ ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಎಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಒಟ್ಟು 17,900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದು ಬೆಂಗಳೂರು ಮತ್ತು ಚೆನ್ನೈ ನಡುವಣ ಪ್ರಯಾಣದ ಸಮಯವನ್ನು ಏಳು ಗಂಟೆಗಳಿಂದ ಕೇವಲ ಮೂರು ಗಂಟೆಗೆ ಇಳಿಸುವ ಗುರಿ ಹೊಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 am, Thu, 12 June 25