ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಭಾರಿ ಮಳೆಯಿಂದಾಗಿ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಡಳಿತಗಳು ನದಿ ತೀರ ಮತ್ತು ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿವೆ. ಮುಂದಿನ ದಿನಗಳಲ್ಲಿಯೂ ಭಾರಿ ಮಳೆಯಾಗುವ ಸಂಭವವಿದೆ.

ಉಡುಪಿ/ಚಿಕ್ಕಮಗಳೂರು, ಜೂನ್ 11: ಕರ್ನಾಟಕದಲ್ಲಿ ಮುಂಗಾರು ಮಳೆ (Karnataka Monsoon Rain) ಆರಂಭವಾಗಿದೆ. ಕರವಾಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುರುವಾರ (ಜೂ.12) ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಹವಾಮಾನ ಇಲಾಖೆ ಈ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿನ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ನಾಳೆ (ಜೂ.11) ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ 4 ದಿನ ಭಾರಿ ಮಳೆ
ಮುಂದಿನ ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಲಿದ್ದು, ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಂಭವ ಇದೆ. ಕಡಲತೀರ, ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನಾಡದೋಣಿಗಳು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದಿನ ಎರಡು ದಿನ ಭಾರಿ ಮಳೆಯಾಗಲಿದೆ. ಹೀಗಾಗಿ, ಜೂ. 13 ಮತ್ತು 14 ರಂದು ಜಿಲ್ಲೆಯಾದ್ಯಂತ ಹಾವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ತಗ್ಗು ಪ್ರದೇಶ, ನದಿತೀರದ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೊಡಗು ಜಿಲ್ಲೆಗೂ ರೆಡ್ ಅಲರ್ಟ್
ಕೊಡಗು ಜಿಲ್ಲೆಯಲ್ಲಿ ಗುರುವಾರದಿಂದ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ನದಿ ತೀರ, ಬೆಟ್ಟ ಗುಡ್ಡದ ನಿವಾಸಿಗಳು ಎಚ್ಚರದಿಂದಿ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಹುಬ್ಬಳ್ಳಿಯಲ್ಲಿ ಭಾರಿ ಮಳೆ
ಹುಬ್ಬಳ್ಳಿಯ ಹಲವಡೆ ಮಂಗಳವಾರ ಭಾರಿ ಮಳೆಯಾಗಿದೆ. ಮಳೆಯಿಂದ ಹುಬ್ಬಳ್ಳಿಯಲ್ಲಿನ ರಸ್ತೆಗಳು ಜಲಾವೃತಗೊಂಡಿವೆ. ಹುಬ್ಬಳ್ಳಿಯ ಗಬ್ಬೂರ್ ಬೈಪಾಸ್ ಸೇರಿ ಹಲವಡೆ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಪರದಾಡಿರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Wed, 11 June 25