ಸವಾಲಾದ SSLC ಪರೀಕ್ಷೆ: ಕೋಲಾರದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಣ ಇಲಾಖೆಗೂ ಟಾಸ್ಕ್!
ಕೋಲಾರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ತೀವ್ರ ಒತ್ತಡದಲ್ಲಿದೆ. ರಾಜ್ಯದಲ್ಲಿ ಹತ್ತನೇ ಸ್ಥಾನದೊಳಗೆ ಬರಬೇಕೆಂಬ ಗುರಿಯನ್ನು ಜನಪ್ರತಿನಿಧಿಗಳು ನಿಗದಿಪಡಿಸಿದ್ದಾರೆ. ಕಳಪೆ ಫಲಿತಾಂಶಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಹೀಗಾಗಿ ಪರೀಕ್ಷಾ ಸಿದ್ಧತೆಗಾಗಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೋಲಾರ, ಫೆಬ್ರವರಿ 12: ಕೋಲಾರ ಜಿಲ್ಲಾಡಳಿತಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಎಸ್‌ಎಸ್‌ಎಲ್‌ಸಿ (sslc) ಪರೀಕ್ಷೆಯ ಭಯ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ಶಿಕ್ಷಣ ಇಲಾಖೆಗೆ ಕಠಿಣ ಟಾಸ್ಕ್ ನೀಡಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೋಲಾರ ಹತ್ತನೇ ಸ್ಥಾನದ ಒಳಗೆ ಬರಲೇ ಬೇಕು ಎಂದು ಟಾರ್ಗೆಟ್ ನೀಡಿದ್ದು, ಇದರಿಂದ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ತಲೆಕೆಡಿಸಿಕೊಂಡಿದೆ.
2023-24ನೇ ಸಾಲಿನಲ್ಲಿ ಶೇ 73.57 ಫಲಿತಾಂಶದೊಂದಿಗೆ 20ನೇ ಸ್ಥಾನಕ್ಕೆ ಕೋಲಾರ ಜಿಲ್ಲೆ ಕುಸಿದಿದ್ದರಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಹಾಗೂ ಗುಣಮಟ್ಟದ ಬಗ್ಗೆ ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಅಲ್ಲದೆ ಕಳಪೆ ಫಲಿತಾಂಶಕ್ಕೆ ಯಾರು ಕಾರಣ ಯಾರು ಹೊಣೆ ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಎದ್ದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕರು, ಸಂಸದರು ಪ್ರತಿ ಸಭೆಗಳಲ್ಲಿ ಆಕ್ರೋಶ ಹೊರ ಹಾಕುತ್ತಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಮುಖ್ಯಶಿಕ್ಷಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ: ಕೋಟಿ ಆದಾಯದ ಪುಷ್ಪೋದ್ಯಮ: ಬದಲಾಯ್ತು ಕೋಲಾರದ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿ ಬದುಕು
ಸದ್ಯ ಪರೀಕ್ಷೆಗೆ ಒಂದುತಿಂಗಳಷ್ಟೇ ಬಾಕಿಯಿದ್ದು, ವಿದ್ಯಾರ್ಥಿಗಳ ಜೊತೆಗೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೂ ಅಗ್ನಿಪರೀಕ್ಷೆ ಎದುರಾಗಿದೆ. ಅದರಂತೆ ಈ ಬಾರಿ 19,400 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ. ಈ ವೇಳೆ ಕೋಲಾರ ಜಿಲ್ಲೆಯ ರಾಜ್ಯಮಟ್ಟದಲ್ಲಿ ಕನಿಷ್ಠ ಹತ್ತರೊಳಗೆ ಸ್ಥಾನ ಪಡೆಯಬೇಕೆಂದು ತಾಕೀತು ಮಾಡಿರುವ ಜನಪ್ರತಿನಿಧಿಗಳು, ತಪ್ಪಿದರೆ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಹಾಗೂ ಮುಖ್ಯಶಿಕ್ಷಕರ ತಲೆದಂಡದ ಮಾಡುವ ಎಚ್ಚರಿಕೆಯನ್ನೂ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕರು ಕೊಟ್ಟಿದ್ದಾರೆ.
ಫಲಿತಾಂಶ ಸುಧಾರಣೆಗೆ ಹಲವು ಕ್ರಮ
ಇನ್ನೂ ಈಗಾಗಲೇ ಪೋಷಕರು ಹಾಗೂ ವಿಶೇಷವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ. ಪೂರ್ವಭಾವಿ ಪರೀಕ್ಷೆಗಳಲ್ಲಿನ ಫಲಿತಾಂಶದಲ್ಲಿ ಸುಮಾರು 4 ಸಾವಿರ ಮಕ್ಕಳ ಸಾಧನೆ ಆತಂಕ ತಂದೊಡ್ಡಿತ್ತು. ಹಾಗಾಗಿ ಈ ಬಾರಿಯೂ ದೊಡ್ಡ ಸವಾಲೇ ಎದುರಾಗಿದೆ. ಅದರಂತೆ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನ ಕೈಗೊಂಡಿದ್ದು, 6 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮುಖ್ಯ ಶಿಕ್ಷಕರ ಸಭೆ, ಸರ್ಕಾರಿ ಪ್ರೌಢಶಾಲೆಗಳಿಗೆ ಅನುಪಾಲನಾಧಿಕಾರಿಗಳ ಭೇಟಿ, ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ಶೈಕ್ಷಣಿಕ ದೀವಿಗೆ ವಿತರಣೆ, ಅನುಷ್ಠಾನಾಧಿಕಾರಿಗಳ ಸಭೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಕ್ರಿಯಾ ಯೋಜನೆ ರೂಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ, ಭಾನುವಾರ ಅನುಮಾನ ಹೋಗಲಾಡಿಸುವ ಕಾರ್ಯಕ್ರಮ, ಪೋಷಕರು, ತಾಯಂದಿರ ಸಭೆ, ಬೆಳಿಗ್ಗೆ 9 ರಿಂದ 10 ಗಂಟೆವರೆಗೆ, ಮತ್ತು ಸಂಜೆ 4.30 ರಿಂದ 6.00 ಗಂಟೆವರೆಗೆ ವಿಶೇಷ ತರಗತಿಗಳು, ಪೂರ್ವಬಾವಿ ಪರೀಕ್ಷೆಗಳು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಮಾದರಿ ಪ್ರಶ್ನೆ ಪತ್ರಿಕೆ ರಚನೆ, ವಿದ್ಯಾರ್ಥಿಗಳ ದತ್ತು ಯೋಜನೆ ರೂಪಿಸಲಾಗಿದೆ. ಅಂದರೆ ಪ್ರತಿ ಶಾಲೆಯಲ್ಲಿ ಪ್ರತಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಗುಂಪನ್ನು ದತ್ತು ನೀಡಿ ನಿರಂತರವಾಗಿ ಕಲಿಕಾ ಮಟ್ಟವನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ.
ಇದನ್ನೂ ಓದಿ: ಗೋಡೌನ್ನಲ್ಲಿ ಕೊಳೆಯುತ್ತಿದೆ ಕೋಮುಲ್ನ ಹಾಲಿನ ಪೌಡರ್ ಮತ್ತು ಬೆಣ್ಣೆ
ವಿದ್ಯಾರ್ಥಿವಾರು ದತ್ತು ನೀಡಿದ ಶಿಕ್ಷಕರು ಪ್ರತಿದಿನ ಶಾಲೆಯಲ್ಲಿ ನಿಗಾ ಇಡುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಮುಂಜಾನೆ ಕರೆ ಮಾಡಿ ಓದಲು ಪ್ರೇರೇಪಿಸುತ್ತಿದ್ದಾರೆ. ಒಟ್ಟಾರೆ ಕೋಲಾರದಲ್ಲಿ ಈಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಎಲ್ಲರಿಗೂ ಕಠಿಣ ಪರೀಕ್ಷೆ ಎದುರಾಗಿದ್ದು, ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಲಾಗಿದೆ. ಈ ಬಾರಿಯಾದರೂ ಕೋಲಾರ ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.