ಬೆಂಗಳೂರು, ಮಾರ್ಚ್ 28: ಸಚಿವ ಕೆಹೆಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ವಿರೋಧಿಸಿ ಕೋಲಾರ (Kolar) ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು, ಎಂಎಲ್ಸಿಗಳ ರಾಜೀನಾಮೆಯ ಹೈಡ್ರಾಮಾವೇ ನಡೆದುಗೋಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಕೋಲಾರ ಕಾಂಗ್ರೆಸ್ನಲ್ಲಿ (Congress) ಬಣ ಬಡಿದಾಟ ಸ್ಫೋಟಗೊಂಡಿದೆ. ಕೋಲಾರ ಕಾಂಗ್ರೆಸ್ನಲ್ಲಿನ ಬಿರುಕು ಮತ್ತೆ ಜಗಜಾಹೀರಾಗಿದ್ದು, ಸದ್ಯ ಕೋಲಾರ ಟಿಕೆಟ್ ಘೋಷಣೆಯನ್ನು ಹೈಕಮಾಂಡ್ ತಡೆ ಹಿಡಿದಿದೆ. ಇದೀಗ ಅಸಮಾಧಾನ ಶಮನಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯರೇ (CM Siddaramaiah) ಮುಂದಾಗಿದ್ದಾರೆ.
ಸಚಿವ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವಿನ ತಿಕ್ಕಾಟವೇ ಟಿಕೆಟ್ ಕಲಹಕ್ಕೆ ಕಾರಣವಾಗಿದೆ. ಸಚಿವ ಮುನಿಯಪ್ಪ, ಕೋಲಾರದಲ್ಲಿ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ರಮೇಶ್ ಕುಮಾರ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಶಾಸಕರ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಸಂಜೆ 4 ಗಂಟೆಯ ಹೊತ್ತಿಗೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೋಲಾರ ಶಾಸಕರು ಭಾಗಿಯಾಗುತ್ತಿದ್ದಾರೆ.
ಕೋಲಾರ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕೋಲಾರ ಟಕೆಟ್ ವಿಚಾರದಲ್ಲಿ ಸಂಜೆಯೊಳಗೆ ತೀರ್ಮಾನ ಆಗುತ್ತದೆ. ಯಾರೂ ರಾಜೀನಾಮೆ ಕೊಡುವುದಿಲ್ಲ ಅಂದಿದ್ದಾರೆ.
ಕೋಲಾರ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ರಾಜ್ಯ ನಾಯಕರು, ಹೈಕಮಾಂಡ್ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಸಚಿವ ಮುನಿಯಪ್ಪರನ್ನ ಮಾತ್ರ ಖರ್ಗೆ ಚರ್ಚೆಗೆ ಆಹ್ವಾನಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಟಿಕೆಟ್ ವಿಚಾರದಲ್ಲಿ ಮುನಿಯಪ್ಪರನ್ನು ಮಾತ್ರ ಚರ್ಚೆಗೆ ಪರಿಗಣಿಸಿದ್ದ ಖರ್ಗೆ, ಮುನಿಯಪ್ಪ ಜೊತೆ ಮಾತ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬೇರೆ ನಾಯಕರ ಅಭಿಪ್ರಾಯದ ಬಗ್ಗೆ ಖರ್ಗೆ ಚರ್ಚಿಸಿರಲಿಲ್ಲ. ಕೋಲಾರ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದಿರಲಿಲ್ಲ. ವಿಧಾನಸಭೆಗೆ ದೇವನಹಳ್ಳಿಯಿಂದ ಮುನಿಯಪ್ಪ ಆಯ್ಕೆ ಆಗಿದ್ದಾರೆ. ಇದರಿಂದ ಮುನಿಯಪ್ಪರನ್ನು ಕೋಲಾರದಿಂದ ಹೊರಗಿಡಲು ಶಾಸಕರ ತಂತ್ರ ಆಗಿದೆ. ಮುನಿಯಪ್ಪರಿಂದ ಉಳಿಗಾಲ ಎಂದುಕೊಂಡಿರೋ ಶಾಸಕರು, ಶಾಸಕರು ಪಕ್ಷ ಸೇರ್ಪಡೆಗೂ ವಿರೋಧಿಸಿದ್ದ ಮುನಿಯಪ್ಪ, ಕೊತ್ತೂರು ಮಂಜುನಾಥ್, ಎಂಸಿ ಸುಧಾಕರ್ ಸೇರ್ಪಡೆಗೆ ಅಡ್ಡಗಾಲು ಹಾಕಿದ್ದರು. ವಿರೋಧಿ ಬಣ ಸೃಷ್ಟಿ ಆಗುತ್ತೆಂದು ಅಡ್ಡಗಾಲು ಹಾಕಿದ್ದ ಮುನಿಯಪ್ಪ, ಇದಿರಂದ ರಾಜಕೀಯ ಭವಿಷ್ಯಕ್ಕೆ ಕಂಟಕ ಎಂದು ಶಾಸಕರು ಭಾವಿಸಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಖರ್ಗೆ ‘ಮಲತಾಯಿ ಧೋರಣೆ’ ಕಾರಣವಾಯ್ತಾ?
ಒಟ್ಟಾರೆಯಾಗಿ ಕೋಲಾರ ಕಾಂಗ್ರೆಸ್ ಟಿಕೆಟ್ನಲ್ಲಿ ಬಣ ಬಡಿದಾಟ ನಡೆಯುತ್ತಿದೆ. ಮನವೊಲಿಸಲು ಸಿಎಂ ಸಿದ್ದರಾಮಯ್ಯರೇ ಖುದ್ದು ಎಂಟ್ರಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ