ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ

ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಗಿಡಗಳನ್ನು ನೋಡಬಹುದು. ಆದರೆ ಇವರ ಮನೆಯ ಬೆಡ್​ರೂಂ ನಿಂದ ಹಿಡಿದು ಅಡುಗೆ ಮನೆಯವರೆಗೆ, ಹಾಲ್​ನಿಂದ ಮನೆಯ ಗೋಡೆಗಳ ಮೇಲೆಲ್ಲಾ ವಿಭಿನ್ನ ರೀತಿಯ ಗಿಡಗಳನ್ನು ನೋಡಬಹುದು.

ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ
ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ

ಕೋಲಾರ: ಹಸಿರೇ ಉಸಿರು ಎನ್ನುವ ಮಾತು ಇತ್ತೀಚೆಗೆ ದೂರವಾಗುತ್ತಿದೆ. ಆದರೆ ಕೋಲಾರ ಜಿಲ್ಲೆಯ ಮನೆಯೊಂದರಲ್ಲಿ ಈ ವಾಕ್ಯವನ್ನೇ ಧ್ಯೇಯ ಮಾಡಿಕೊಂಡಿದ್ದಾರೆ. ಕೋಲಾರ ನಗರದ ಕಾಳಿದಾಸ ಬಡಾವಣೆಯ ರವಿಕುಮಾರ್​ ಹಾಗೂ ಮೋನಿಕಾ ಅವರ ಮನೆಯಲ್ಲಿ ಹಸಿರು ತುಂಬಿ ತುಳುಕುತ್ತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ್​ ಅವರಿಗೆ ಹಸಿರು ಗಿಡಗಳನ್ನು ಬೆಳೆಸುವುದು ಎಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ದೊಡ್ಡಮ್ಮನವರಿಂದ ಪ್ರೇರೇಪಿತರಾದ ರವಿಕುಮಾರ್​ ತಮ್ಮ ಮನೆಯಲ್ಲಿ ಹತ್ತಾರು ಬಗೆಯ ಗಿಡಗಳನ್ನು ಬೆಳೆಸುವ ಹವ್ಯಾಸ ಮಾಡಿಕೊಂಡಿದ್ದಾರೆ.

ತಮಗೆ ಸಿಗುವ ಯಾವುದೇ ಪ್ಲಾಸ್ಟಿಕ್​ ಬಾಟಲ್​ಗಳು, ಗಾಜಿನ ಬಾಟಲ್​ಗಳು, ವಾಹನದ ಟಯರ್​, ಖಾಲಿ ಕೋಳಿ ಮೊಟ್ಟೆ, ನೀರಿನ ಗ್ಲಾಸ್​, ಪಾಟ್​ಗಳು, ಹೀಗೆ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸ. ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಮನೆಯಲ್ಲಿನ ತಮ್ಮ ಗಿಡಗಳೊಂದಿಗೆ ಕಾಲ ಕಳೆಯುವ ರವಿಕುಮಾರ್​ ದಂಪತಿ ತಮ್ಮ ಮನೆಯನ್ನೇ ಒಂದು ಸುಂದರ ಪಾರ್ಕ್​ನ್ನಾಗಿ ಮಾಡಿಕೊಂಡಿದ್ದಾರೆ. ಇವರು ಅರಿಶಿಣ, ಅಲೋವೇರಾ, ಮರಗೆಣಸು, ತುಳಸಿ, ಒಂದೆಲಗ ಹೀಗೆ ಹಲವಾರು ಔಷಧೀಯ ಗಿಡಗಳ ಜತೆಗೆ, ಇಂಗಾಲವನ್ನು ಹೀರಿಕೊಂಡು ಆಕ್ಸಿಜನ್​ ಕೊಡುವ ಗಿಡಗಳನ್ನು ಬೆಳೆಸಿದ್ದಾರೆ. ಇವರ ಮನೆಯ ಒಳಗೆ ಹಾಗೂ ಹೊರಗೆ ಎಲ್ಲೆಡೆ ಗಿಡಗಳೇ ತುಂಬಿಕೊಂಡಿದೆ.

ತಮ್ಮ ಮನೆಗೆ ನಿಸರ್ಗವನ ಎಂದು ಹೆಸರಿಟ್ಟಿರುವ ಈ ದಂಪತಿಗಳಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸುವುದೇ ಒಂದು ಹವ್ಯಾಸ. ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಗಿಡಗಳನ್ನು ನೋಡಬಹುದು. ಆದರೆ ಇವರ ಮನೆಯ ಬೆಡ್​ರೂಂ ನಿಂದ ಹಿಡಿದು ಅಡುಗೆ ಮನೆಯವರೆಗೆ, ಹಾಲ್​ನಿಂದ ಮನೆಯ ಗೋಡೆಗಳ ಮೇಲೆಲ್ಲಾ ವಿಭಿನ್ನ ರೀತಿಯ ಗಿಡಗಳನ್ನು ನೋಡಬಹುದು.

ಮನೆಯಲ್ಲಿ ವಿವಿಧ ರೀತಿಯ ಆಟಿಕೆಗಳ ರೀತಿಯಲ್ಲಿ ಪಾಟ್​ಗಳನ್ನು ಮಾಡಿ, ಅದರಲ್ಲೂ ವಿವಿಧ ರೀತಿಯ ಶೋ ಗಿಡಗಳನ್ನು ಬೆಳೆಸುವುದು, ಖಾಲಿ ಬಾಟಲ್​ಗಳನ್ನು ವಿಭಿನ್ನವಾಗಿ ಕತ್ತರಿಸಿ ಅದರಲ್ಲಿ ಗಿಡ ಬೆಳೆಸಿ ಅಲಂಕಾರವಾಗಿ ನೇತಾಕುವುದು ಹೀಗೆ ಹಲವು ರೀತಿಯಲ್ಲಿ ಗಿಡಗಳನ್ನು ಬೆಳೆಸಿದ್ದೇವೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಇನ್ನು ಇವರ ಮನೆಯನ್ನು ನೋಡಿದ ಇವರ ಸ್ನೇಹಿತರುಗಳು ಕೂಡಾ ಇವರಿಗೆ ಗಿಡಗಳನ್ನು ಉಡುಗೋರೆಯಾಗಿ ನೀಡುತ್ತಿದ್ದಾರೆ. ಅಲ್ಲದೆ ರವಿಕುಮಾರ್​ ತಮ್ಮ ಮದುವೆಯಲ್ಲಿ 1000 ಗಿಡಗಳನ್ನು ಮದುವೆಗೆ ಬಂದಿದ್ದ ಜನರಿಗೆ ಕೊಟ್ಟು ಗಿಡಗಳನ್ನು ಬೆಳೆಸಲು ಪ್ರೇರೇಪಣೆ ಮಾಡಿದ್ದಾರೆ. ಹೀಗೆ ಪರಿಸರ ರಕ್ಷಣೆಗಾಗಿ ಈ ದಂಪತಿ ವಿಭಿನ್ನವಾಗಿ ತಮ್ಮ ಮನೆಯನ್ನೇ ಪಾರ್ಕ್​ ರೀತಿ ಪರಿವರ್ತಿಸಿದ್ದಾರೆ.

ಇದನ್ನೂ ಓದಿ:
ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ ನೀಳಕೊಂಬಿನ ಕೃಷ್ಣ ಮೃಗಗಳು