ಶ್ರೀನಿವಾಸಪುರ: ಕೊಳತೂರು ಗ್ರಾಮದಲ್ಲಿ ಹಸುಗಳ ಸರಣಿ ಸಾವು: ರೋಗ ಪತ್ತೆಗೆಂದು ಹಳ್ಳಿಗೆ ಧಾವಿಸಿದ ವಿಜ್ಞಾನಿಗಳು
ಬಹುತೇಕ ಹಸುಗಳಲ್ಲಿ ಉಸಿರಾಟದ ತೊಂದರೆ ಹಾಗೂ ಕಿಡ್ನಿ ನಿಷ್ಕ್ರಿಯಗೊಂಡಿರುವ ಕುರುಹುಗಳು ಕಾಣಿಸಿಕೊಂಡಿದೆ ಎಂದು ಪಶುಸಂಗೋಪನೆ ಇಲಾಖೆ ಹೇಳಿದೆ.
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕೊಳತೂರು ಗ್ರಾಮದಲ್ಲಿ 15 ದಿನದಲ್ಲಿ 12 ಹಸುಗಳು ಸಾವನ್ನಪ್ಪಿವೆ. ಹಸುಗಳ ಸಾವಿಗೆ ನಿಖರ ಕಾರಣ ತಿಳಿಯದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಈ ವಿಚಾರವನ್ನು ವಿಜ್ಞಾನಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿರುವ ವಿಜ್ಞಾನಿಗಳು ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸತ್ತಿರುವ 12 ಹಸುಗಳಲ್ಲಿಯೂ ತೈಲೇರಿಯಾ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಬಹುತೇಕ ಹಸುಗಳಲ್ಲಿ ಉಸಿರಾಟದ ತೊಂದರೆ ಹಾಗೂ ಕಿಡ್ನಿ ನಿಷ್ಕ್ರಿಯಗೊಂಡಿರುವ ಕುರುಹುಗಳು ಕಾಣಿಸಿಕೊಂಡಿದೆ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಜಗದೀಶ್ ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 14 ಹಸುಗಳು ಸತ್ತಿವೆ. ಎಲ್ಲವೂ ಹಾಲು ಕೊಡುತ್ತಿದ್ದವು ಮತ್ತು ಅನಾರೋಗ್ಯದ ಯಾವುದೇ ಲಕ್ಷಣಗಳು ಇರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮದಲ್ಲಿ ಇಂದಿಗೂ 10ಕ್ಕೂ ಹೆಚ್ಚು ಹಸುಗಳ ಸ್ಥಿತಿ ಗಂಭೀರವಾಗಿದೆ. ಹೈನುಗಾರಿಕೆಯನ್ನೇ ಪ್ರಮುಖ ಆದಾಯ ಮೂಲವಾಗಿದ್ದ ಕೊಳತೂರು ಗ್ರಾಮದ ರೈತರು ಹಸುಗಳ ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ.
ಸತ್ತಿರುವ ಪ್ರತಿ ಹಸುವಿನ ಮೌಲ್ಯ ಸುಮಾರು 50 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ರೈತರು ಈಗಾಗಲೇ ಹಸುಗಳ ಸಾವಿನ ವಿಚಾರವನ್ನು ಪಶುಪಾಲನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ ಇದನ್ನೂ ಓದಿ: ಕೃಷಿ ಕುಟುಂಬಗಳಲ್ಲಿ ಪ್ರಾಣಿ ಸಾಕಣೆಯ ಲೆಕ್ಕಾಚಾರವನ್ನು ತೆರೆದಿಡುವ ಆಸಕ್ತಿಕರ ಅಂಕಿ-ಅಂಶಗಳು ಇಲ್ಲಿವೆ
Published On - 4:39 pm, Sun, 7 November 21