ಕೋಲಾರ ಹೊಸ ರಿಂಗ್ ರಸ್ತೆಗೆ ಸಂಕಷ್ಟ; ಬಿಡುಗಡೆಯಾಗಿದ್ದ 250 ಕೋಟಿ ರೂ. ವಾಪಾಸ್ ಪಡೆದ ಕೇಂದ್ರ ಸರ್ಕಾರ
ಅದು ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದಿದ್ದ ಯೋಜನೆ, ನಗರ ಬೆಳೆದಿದ್ದರೂ ಆ ಯೋಜನೆಗೆ ಮಾತ್ರ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಈಗ ಸುಮಾರು ನೂರು ಕೋಟಿ ರೂಪಾಯಿ ಅನುದಾನದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದೆ. ಆದರೆ, ಕೇಂದ್ರ ಸರ್ಕಾರದ ಅದೊಂದು ಬಿಗ್ ಶಾಕ್, ಈಗ ರಿಂಗ್ ರೋಡ್ ಯೋಜನೆಗೆ ಮತ್ತೆ ಗ್ರಹಣ ಹಿಡಿಯುವಂತೆ ಮಾಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಕೋಲಾರ, ಅ.02: ಕೋಲಾರ ನಗರ ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದರೂ ಸಹ ಕೋಲಾರ(Kolar) ಜಿಲ್ಲೆ ಈಗಲೂ ದೊಡ್ಡ ಹಳ್ಳಿಯಂತಿದೆ. ನಗರದ ಮೇಲೆ ಒತ್ತಡ ಕಡಿಮೆ ಮಾಡಲು ವರ್ತುಲ ರಸ್ತೆ ಮಾಡಲು ಕಳೆದ 20 ವರ್ಷಗಳ ಹಿಂದೆ ಕ್ರಿಯಾಯೋಜನೆ ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿತ್ತು. ಆದ್ರೆ, ಯೋಜನೆ ಮಾತ್ರ ಅನುಷ್ಟಾನಗೊಂಡಿಲ್ಲ. ಈ ಹಿನ್ನಲೆಯಲ್ಲಿ ಹಳೇ ಯೋಜನೆಯನ್ನು ಕೈ ಬಿಟ್ಟು ಈಗ ಹೊಸದಾದ ಕ್ರಿಯಾಯೋಜನೆ ತಯಾರು ಮಾಡಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ನಗರಾಭಿವೃದ್ದಿ ಇಲಾಖೆಗೆ 250 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು.
ಬಿಡುಗಡೆಯಾಗಿದ್ದ ಅನುದಾನ ವಾಪಾಸ್ ಪಡೆದ ಕೇಂದ್ರ ಸರ್ಕಾರ
ತಮ್ಮ ಇಲಾಖೆಗೆ ಬಿಡುಗಡೆಯಾಗಿದ್ದ 250 ಕೋಟಿ ರೂ ಹಣದಲ್ಲಿ ನಗರಾಭಿವೃದ್ದಿ ಸಚಿವ ಹಾಗೂ ಕೋಲಾರ ಜಿಲ್ಲಾಉಸ್ತುವಾರಿ ಸಚಿವ ಬೈರತಿ ಸುರೇಶ್, 100 ಕೋಟಿಯನ್ನು ಕೋಲಾರದ ನೂತನ ರಿಂಗ್ ರೋಡ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು. ಯೋಜನೆ ಡಿಪಿಆರ್ ಹೊಸ ಸರ್ವೆ ಕಾರ್ಯ ಮುಗಿಸಿದ್ದ ಅಧಿಕಾರಿಗಳು, ಇನ್ನೇನು ಕ್ಯಾಬಿನೆಟ್ ಅನುಮತಿ ಪಡೆದು ಟೆಂಡರ್ ಹಾಗೂ ಭೂಸ್ವಾಧಿನ ಪ್ರಕ್ರಿಯೆ ಶುರುಮಾಡಬೇಕಿತ್ತು. ಈ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನಗರಾಭಿವೃದ್ದಿ ಇಲಾಖೆಗೆ ಬಿಡುಗಡೆ ಮಾಡಿದ್ದ 250 ಕೋಟಿ ಹಣವನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಶಾಕ್ ನೀಡಿದೆ. ಇದರಿಂದ ಈಗಾಗಲೇ ಅ ಹಣದಲ್ಲಿ ಹಲವು ಯೋಜನೆಗಳನ್ನು ಪ್ಲಾನ್ ಮಾಡಿದ್ದ ಸಚಿವ ಬೈರತಿ ಸುರೇಶ್, ಈಗ ರಾಜ್ಯದ ಅನುಧಾನದಲ್ಲೇ ರಿಂಗ್ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡುವುದಾಗಿ ಹೇಳಿದ್ದಾರೆ.
ಇನ್ನು ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕೋಲಾರದಿಂದ 9 ಕಿ.ಮೀ. ಹೊರಗೆ ವರ್ತುಲ ರಸ್ತೆ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿತ್ತು. ಒಟ್ಟು ಸುಮಾರು 30 ಕಿ.ಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಇಪ್ಪತ್ತು ವರ್ಷಗಳ ಹಿಂದೆ ಮಾಡಲು ಉದ್ದೇಶಿಸಿದ್ದ ರಿಂಗ್ ರಸ್ತೆ ಪ್ಲಾನ್ ಕೈಬಿಟ್ಟು ಈಗ ಹೊಸದಾಗಿ ರಿಂಗ್ ರೋಡ್ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಹೊಸ ನೀಲಿ ನಕ್ಷೆ ಸಿದ್ದಪಡಿಸಿದ್ದು, ಅದರಂತೆ ಕೋಲಾರ ನಗರದಿಂದ 9 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ-75 ಬೆಂಗಳೂರು ರಸ್ತೆ ನಾಗಲಾಪುರದಿಂದ ಆರಂಭವಾಗಿ ಚಿಕ್ಕಬಳ್ಳಾಪುರ ಮುಖ್ಯರಸ್ತೆ, ಚಿಂತಾಮಣಿ ಮುಖ್ಯರಸ್ತೆ, ಶ್ರೀನಿವಾಸಪುರ ಮುಖ್ಯ ರಸ್ತೆ ಮೂಲಕ, ರಾಷ್ಟ್ರೀಯ ಹೆದ್ದಾರಿ-75 ರ ಮತ್ತೊಂದು ಭಾಗದ ಮುಳಬಾಗಲು ಹೆದ್ದಾರಿಗೆ ಬಂದು ತಲುಪುವ ಮೂಲಕ ಇಡೀ ನಗರ ಹಾಗೂ ಹೆದ್ದಾರಿಗೆ ಕನೆಕ್ಟ್ ಮಾಡುವ ಮೂಲಕ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ನಗರವನ್ನು ವಿಸ್ತರಣೆ ಮಾಡುವುದು ಇದರ ಉದ್ದೇಶವಾಗಿದೆ.
ಹಾಗಾಗಿ ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ಈ ರಸ್ತೆ ಬಹಳ ಮುಖ್ಯವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕೋಲಾರದ ಜನರ ಆಗ್ರಹಿಸಿದ್ದಾರೆ. ಒಟ್ಟಾರೆ ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಲಾರ ರಿಂಗ್ ರೋಡ್ ಕೆಲಸ ಏಕಾಏಕಿ ಚುರುಕು ಪಡೆದುಕೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಹಣ ವಾಪಸ್ ಪಡೆಯುವ ಮೂಲಕ ಈಗ ಕೋಲಾರ ನಗರದ ಮಹತ್ವದ ಯೋಜನೆಯೊಂದು ಮತ್ತೆ ನೆನಗುದಿಗೆ ಬಿದ್ದಿದೆ. ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆದ ಹಣವನ್ನು ಬಿಡುಗಡೆ ಮಾಡಬೇಕಿದೆ. ಇಲ್ಲವಾದ್ರೆ ರಾಜ್ಯ ಸರ್ಕಾರವಾದರೂ ಯೋಜನೆಗೆ ಹಣ ಮೀಸಲಿಟ್ಟು ಯೋಜನೆ ಮುಂದುವರೆಸಲಿ ಎನ್ನುವುದು ಕೋಲಾರದ ಜನರ ಒತ್ತಾಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Wed, 2 October 24