ಕೆರೆ ಕಾಮಗಾರಿ ಸರಿಯಾಗಿ ಮಾಡಿಲ್ಲ: ಕೋಲಾರ ಜಿಲ್ಲೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೆರೆಯಲ್ಲಿ‌ ನೀರು ಖಾಲಿಯಾದ ಮೇಲೆ ಸ್ವಚ್ಛಪಡಿಸುತ್ತೇವೆ ಎಂದ ಅಧಿಕಾರಿಯ ಉತ್ತರವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಲಿಲ್ಲ.

ಕೆರೆ ಕಾಮಗಾರಿ ಸರಿಯಾಗಿ ಮಾಡಿಲ್ಲ: ಕೋಲಾರ ಜಿಲ್ಲೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೋಲಾರ ಜಿಲ್ಲೆಯ ವಿವಿಧ ಕೆರೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೀಕ್ಷಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 30, 2022 | 2:24 PM

ಕೋಲಾರ: ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sithraman) ಶುಕ್ರವಾರ ಕೋಲಾರ ತಾಲ್ಲೂಕಿನ ಮುದುವತ್ತಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು. ಕೆರೆ ಅಭಿವೃದ್ಧಿ ಕಾಮಗಾರಿ (Lake Development) ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆರೆಯನ್ನು ಸರಿಯಾಗಿ ಸ್ವಚ್ಛಪಡಿಸಿಲ್ಲ. ನೀರು ನಿಲ್ಲುವ ವ್ಯವಸ್ಥೆಯನ್ನೂ ಸರಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆರೆಯಲ್ಲಿ‌ ನೀರು ಖಾಲಿಯಾದ ಮೇಲೆ ಸ್ವಚ್ಛಪಡಿಸುತ್ತೇವೆ ಎಂದ ಅಧಿಕಾರಿಯ ಉತ್ತರವನ್ನು ಅವರು ಒಪ್ಪಲಿಲ್ಲ. ‘ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿ, ತಮಿಳು ಭಾಷೆಯಲ್ಲಿ ಬುದ್ಧಿ ಹೇಳಿದರು.

ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ವೀಕ್ಷಿಸಿದ ನಂತರ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸುಮಾರು 15 ನಿಮಿಷಗಳ ಕಾಲ ಗ್ರಾಮಸ್ಥರ‌ ಜೊತೆಗೆ ಸ್ಥಳೀಯ ಸಮಸ್ಯೆಗಳು ಮತ್ತು ಕೆರೆಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಪಂಚಾಯಿತಿ ಮೂಲಕ ಸಿಗುವ ಸರ್ಕಾರದ ಹಲವು ಅನುದಾನಗಳನ್ನು ಗ್ರಾಮದ ಏಳ್ಗೆಗೆ ಹೇಗೆಲ್ಲಾ ಬಳಸಿಕೊಳ್ಳಬಹುದು ಎಂದು ವಿವರಿಸಿದರು. ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ ನಂತರ ಕೆರೆಗಳ ಅಭಿವೃದ್ದಿ ಕುರಿತು ಚರ್ಚಿಸಿದರು. ಕೆರೆಗಳ ಅಭಿವೃದ್ದಿಗೆ ಮತ್ತಷ್ಟು‌ ಹಣ ನೀಡಲು ನಾನು ಸಿದ್ಧ. ಆದರೆ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮದಲ್ಲಿ ಕೆರೆ ವೀಕ್ಷಣೆ ವೇಳೆ ರೈತರೊಂದಿಗೆ ಮಾತುಕತೆ ನಡೆಸಿದರು. ಸಚಿವರು ಆಗಮನದ ಹಿನ್ನೆಲೆಯಲ್ಲಿ ಜನರು ಹೆಚ್ಚಾಗಿ ಗುಂಪುಗೂಡಿದ್ದರು. ಕೆರೆ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರು ಕೈಮುಗಿದು ಮನವಿ ಮಾಡಿದರು. ಕೆಜಿಎಫ್ ತಾಲ್ಲೂಕು ಪೆದ್ದಪಲ್ಲಿ‌ ಕೆರೆಗೆ ಭೇಟಿ‌ ನೀಡಿದ್ದ ಸಚಿವರನ್ನು ಗ್ರಾಮಸ್ಥರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಸಚಿವರ ಬೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಮೃತ್ ಸರೋವರ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಸಚಿವರು ಅನುದಾನ ನೀಡಿದ್ದಾರೆ.

Published On - 2:24 pm, Fri, 30 September 22