ಕೋಲಾರ ಕೆರೆಗಳ ಅಭಿವೃದ್ದಿ ಕಾಮಗಾರಿ ವೀಕ್ಷಣೆಗೆ ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪುಲ್ ಗರಂ! ಅಸಲಿಗೆ ಅಲ್ಲಿ ನಡೆದಿದ್ದೇನು?
Nirmala Sitharaman: ಇವತ್ತು ಕೋಲಾರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭೇಟಿ ನಿಡಿದ್ದರು, ತಮ್ಮ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆಗೆಂದು ಜಿಲ್ಲೆಯ ಮೂರು ಕೆರೆಗಳಿಗೆ ಭೇಟಿ ನೀಡಿದರು.
ಕೇಂದ್ರ ಸರ್ಕಾರದ ಬಹಳ ಪ್ರಭಾವಿ ಸಚಿವರೂ ತಮ್ಮ ಸಿಂಪ್ಲಿಸಿಟಿಯಿಂದಲೇ ಹೆಚ್ಚು ಪ್ರಸಿದ್ದಿಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೆರೆಗಳ ನಾಡು ಕೋಲಾರಕ್ಕೆ ಬೇಟಿ ನೀಡಿದ್ದರು. ಜಿಲ್ಲೆಯ ಕೆರೆಗಳ ಅಭಿವೃದ್ದಿಗೆಂದು ತಮ್ಮ ವಿಶೇಷ ಅನುದಾನದ ಮೂಲಕ ಹಣ ಬಿಡುಗಡೆ ಮಾಡಿದ್ದು, ಇವತ್ತು ಕಾಮಗಾರಿ ವೀಕ್ಷಣೆಗೆಂದು ಬಂದಾಗ ಅಧಿಕಾರಿಗಳ ವಿರುದ್ದ ಸಚಿವರು ಪುಲ್ ಗರಂ ಆದರು.
ನಿಗದಿತ ಸಮಯಕ್ಕೂ ಮುನ್ನವೇ ಆಗಮಿಸಿದ್ದ ಸಚಿವರು..! ಇವತ್ತು ಕೋಲಾರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದರು, ತಮ್ಮ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆಗೆಂದು ಜಿಲ್ಲೆಯ ಮೂರು ಕೆರೆಗಳಿಗೆ ಭೇಟಿ ನೀಡಿದರು. ಬೆಳಿಗ್ಗೆ 10.15 ಕ್ಕೆ ಇದ್ದ ಕಾರ್ಯಕ್ರಮಕ್ಕೆ ಸುಮಾರು 45 ನಿಮಿಷ ಮುಂಚಿತವಾಗಿಯೇ ಆಗಮಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಸಂಸದರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಕೆರೆ ಕಾಮಗಾರಿ ಕಂಡು ಗರಂ ಆದ ಸಚಿವರು..! ಮೊದಲು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಚಿಕ್ಕಅಂಕಂಡಹಳ್ಳಿ ಗ್ರಾಮದ ಕೆರೆಗೆ ಭೇಟಿ ನೀಡಿದರು. ಅಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕಂಡು ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದರು. ಸರಿಯಾಗಿ ಕೆರೆಗಳ ಒತ್ತುವರಿ ತೆರವು ಮಾಡಿಲ್ಲ, ಗಡಿ ಗುರುತಿಸಿಲ್ಲ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು. ನಂತರ ಅಲ್ಲಿಂದ ಕೆಜಿಎಫ್ ತಾಲ್ಲೂಕು ಪೆದ್ದಪಲ್ಲಿ ಗ್ರಾಮದ ಕೆರೆಗೆ ಭೇಟಿ ನೀಡಿದ ಸಚಿವರು ಕೆರೆಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ಕಂಡು ಕೋಲಾರ ಜಿಲ್ಲಾ ಪಂಚಾಯ್ತಿ ಸಿಇಓ ಯುಕೇಶ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ವೆಂಕಟರಾಜಾ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
ಅಲ್ಲದೆ ಕೆರೆಗಳ ಒಳಗೆ ಮರ ಗಿಡಗಳನ್ನು ಬೆಳೆಸಿರುವ ಬಗ್ಗೆ, ಸರಿಯಾಗಿ ಒತ್ತುವರಿ ತೆರವು ಮಾಡದೆ ಕೆರೆ ಗಡಿ ಗುರುತಿಸದೆ, ಕೆರೆಯ ಒಳಗಿನ ಗಿಡಗಳನ್ನು ಕ್ಲೀನ್ ಮಾಡದೆ ಇದ್ದುದಕ್ಕೆ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡರು. ನಂತರ ಪೆದ್ದಪಲ್ಲಿ ಗ್ರಾಮದ ಮಹಿಳೆಯರ ಜೊತೆಗೆ ನಗುನಗುತ್ತಲೇ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತನಾಡುತ್ತಾ ಕೆರೆಯ ಮಹತ್ವವನ್ನು ವಿವರಿಸಿದರು. ಅಲ್ಲದೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಅನ್ನೋದನ್ನು ವಿವರವಾಗಿ ತಿಳಿಸಿಕೊಟ್ಟರು. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)
ಯಾವ ಭಾಷೆಯಲ್ಲಿ ಮಾತಾಡ್ತೀರಿ ಎಂದು ತಮಿಳು ಭಾಷೆಯಲ್ಲೇ ಕ್ಲಾಸ್..! ಇನ್ನು ಕೆಜಿಎಫ್ನಿಂದ ಸೀದಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರ ತಾಲ್ಲೂಕು ಶೆಟ್ಟಿಕೊತ್ತನೂರು ಗ್ರಾಮದ ಕೆರೆ ವೀಕ್ಷಣೆಗೆ ಬಂದರು. ಈ ವೇಳೆ ಕೆರೆಯನ್ನು ವೀಕ್ಷಣೆ ಮಾಡಿದ ಸಚಿವರು ಮತ್ತೆ ಅಲ್ಲಿದ್ದ ಅಧಿಕಾರಿಗಳಿಗೆ ಜನರೆದುರಲ್ಲೇ ಕ್ಲಾಸ್ ತೆಗೆದುಕೊಂಡರು. ಕೆರೆಯಲ್ಲಿ ನೀರು ಇರುವ ಕಾರಣ ನೀರು ಖಾಲಿಯಾದ ಮೇಲೆ ಕ್ಲೀನ್ ಮಾಡುತ್ತೀನಿ ಎಂದ ಜಿಲ್ಲಾ ಪಂಚಾಯ್ತಿ ಸಿಇಓ ಅವರಿಗೆ, ಯಾವ ಭಾಷೆಯಲ್ಲಿ ಮಾತನಾಡುತ್ತೀರಿ ಎಂದು ಕೇಳಿ ತಮಿಳು ಎಂದಾಗ ತಮಿಳು ಭಾಷೆಯಲ್ಲೇ ಕ್ಲಾಸ್ ತೆಗೆದುಕೊಂಡು ನೀರಿಳಿಸಿದರು. ಕೆರೆಯನ್ನು ಕ್ಲೀನ್ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡೋದಕ್ಕೆ ನಾನು ಬರಬೇಕಿತ್ತಾ, ಕೆರೆಯಲ್ಲಿ ನೀರು ಖಾಲಿಯಾಗುಷ್ಟರಲ್ಲಿ ಅದರಲ್ಲಿರುವ ಗಿಡಗಂಟೆಗಳೇ ಕೊಳೆತು ಹೋಗಿರುತ್ತವೆ ಎಂದರು. ಜೊತೆಗೆ ಅಲ್ಲಿದ್ದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧ್ಯಕ್ಷರನ್ನು ಕರೆದು ನಿಮ್ಮೂರ ಕೆರೆಯನ್ನು ಅಧಿಕಾರಿಗಳನ್ನ ಕೇಳಿ ಕೆಲಸ ಮಾಡಿಸಿಕೊಳ್ಳಿ ಎಂದರು.
ಕೈಮುಗಿದು ಕೆರೆ ನೋಡಲು ಅವಕಾಶ ಮಾಡಿಕೊಡಿ ಎಂದರು..
ಪ್ರತಿ ಹಂತದಲ್ಲೂ ಕಾಮಗಾರಿಗಳನ್ನು ತಾವೇ ಖುದ್ದಾಗಿ ಸವಿವರವಾಗಿ ವೀಕ್ಷಣೆ ಮಾಡಿದ ಸಚಿವರು, ತಮ್ಮನ್ನು ನೋಡಲು ಬಂದಿದ್ದ ಜನರನ್ನು ವಿನಯವಾಗಿಯೇ ಕೈಮುಗಿದು ಕೆರೆ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ನಂತರ ತಾವೇ ಕೆರೆಯ ಮೂಲೆ ಮೂಲೆಗೆ ಹೋಗಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿ, ನಂತರ ಅಧಿಕಾರಿಗಳಿಗೆ ಏನೇನು ಮಾಡಬೇಕು, ಹೇಗೇಗೆ ಮಾಡಬೇಕು ಎಂದು ಸವಿವರವಾಗಿ ಹೇಳಿದ್ರು.
ಅದರ ಜೊತೆಗೆ ಅಲ್ಲಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮಹಿಳೆಯರ ಜೊತೆಗೆ ತೆಲುಗು ಭಾಷೆಯಲ್ಲಿ ಮಾತನಾಡುತ್ತಾ ತಿಳಿಯ ಹೇಳಿದ್ರು. ಜೊತೆಗೆ ಕೆರೆಯ ನೀರನ್ನು ಸಂರಕ್ಷಣೆ ಮಾಡಬೇಕು, ಬೆಟ್ಟದ ಮೇಲೆ ಬೀಳುವ ನೀರನ್ನು ಸರಾಗವಾಗಿ ಕೆರೆಗೆ ಹರಿದು ಬರುವಂತೆ ಕಾಲುವೆಗಳನ್ನು ಮಾಡಬೇಕು ಎಂದು ಮ್ಯಾಪ್ ಹಿಡಿದು ತಿಳಿಯಹೇಳಿದ್ರು.
ಜಿಲ್ಲೆಯ ಮೂರು ಕೆರೆಗಳ ವೀಕ್ಷಣೆ ಮಾಡಿದ ನಂತರ ಕೋಲಾರ ನಗರದ ಪ್ರವಾಸಿ ಮಂದಿರಕ್ಕೆ ಬಂದು ಊಟ ಮಾಡಿ ನಂತರ ಹೊರಟರು. ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಸುಮಾರು 38 ಕೋಟಿ ರೂಪಾಯಿ ಹಣ ನೀಡಲಾಗುತ್ತಿದ್ದು ಜಿಲ್ಲೆಯ 75 ಕೆರೆಗಳನ್ನು ಸಚಿವರ ಸೂಚನೆಯಂತೆ ಅಭಿವೃದ್ದಿ ಪಡಿಸುತ್ತೇವೆ. ಕೋಲಾರ ಜಿಲ್ಲೆಯ ಮೇಲೆ ಅವರಿಗೆ ಇರುವ ವಿಶೇಷ ಕಾಳಜಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಒಟ್ಟಾರೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆರೆಗಳ ನಾಡಲ್ಲಿ ಅಂತರ್ಜಲ ಅಭಿವೃದ್ದಿಗಾಗಿ ಕೆರೆಗಳಿಗೆ ಜೀವ ತುಂಬಲು ಯೋಜನೆ ರೂಪಿಸಿದ್ದು, ಆ ಮೂಲಕ ಅವರ ಕನಸಿನಂತೆ ಕೆರೆಗಳ ಅಭಿವೃದ್ದಿಯಾದರೆ ನಿಜಕ್ಕೂ ಜಿಲ್ಲೆಯ ಮಟ್ಟಿಗೆ ನಿರ್ಮಲಾ ಸೀತಾರಾಮನ್ ಅವರು ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ.
Published On - 8:38 pm, Fri, 30 September 22