ಕೋಲಾರದಲ್ಲಿದೆ ರಾಮ, ಕೃಷ್ಣಾರ್ಜುನಿಂದ ಪೂಜಿಸಲ್ಪಟ್ಟ 18 ಅಡಿ ಸಾಲಿಗ್ರಾಮ ಏಕಶಿಲೆ ಗಣಪನ ಮೂರ್ತಿ
ಆತ ಭ್ರಹ್ಮ ವಿಷ್ಣು ಮಹೇಶ್ವರರಿಂದ ಪ್ರತಿಷ್ಠಾಪನೆಗೊಂಡ ಜಗದೊಡೆಯ, ಕೌಂಡಿನ್ಯ ಮಹಾಋಷಿಯಿಂದ ಪೂಜಿಸಲ್ಪಟ್ಟ ಗಜಾನನ, ಮೂರು ಯುಗಗಳಲ್ಲಿ ನಡೆದಿದೆ ಆತನಿಂದ ಚಮತ್ಕಾರ, ವಿಶ್ವದಲ್ಲೇ ಇರುವ ಏಕೈಕ ಸಾಲಿಗ್ರಾಮ ಶಿಲೆಯ ಗಣಪ, ಈ ಯುಗದಲ್ಲೂ ಅವನ ಮುಂದೆ ಬೇಡಿದರೆ ಈಡೇರುತ್ತವೆ ಎಲ್ಲರ ಇಷ್ಟಾರ್ಥಗಳು. ಹಾಗಾದರೆ ಅಂಥ ಚಮತ್ಕಾರಿ ಸ್ಥಳ ಯಾವುದು? ಇಲ್ಲಿದೆ ಮಾಹಿತಿ
ಕೋಲಾರ, ಸೆಪ್ಟೆಂಬರ್ 07: ಮುಳಬಾಗಿಲು (Mulabagilu) ತಾಲೂಕಿನ ಕುರುಡುಮಲೆ ಗ್ರಾಮದಲ್ಲಿದೆ 18 ಅಡಿಯ ಸಾಲಿಗ್ರಾಮ ಏಕಶಿಲೆಯ ಗಣೇಶ (Ganesha) ಮೂರ್ತಿ. ಕೂಟಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದವಾದ ಗಣಪತಿ ದೇವಾಲಯವಿದು. ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪ್ರತಿಷ್ಠಾಪಿಸಲಾದ ಈ ಸಾಲಿಗ್ರಾಮ ಶಿಲೆಯ ಮೂರ್ತಿ, ನಂತರ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಸುಂದರ ಶಿಲ್ಪಕಲೆಯನ್ನೊಳಗೊಂಡ ದೇವಾಲಯವನ್ನು ನಿರ್ಮಾಣ ಮಾಡಲಾಯಿತು.
ಇಲ್ಲಿನ ಗಣೇಶನಿಗೆ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಮುನ್ನ ಪೂಜೆ ಸಲ್ಲಿಸಿದ್ದನೆಂದು, ದ್ವಾಪರಯುಗದಲ್ಲಿ ಪಾಂಡವರು ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಚೌತಿಯ ಚಂದ್ರನನ್ನು ನೋಡಿದ ಶ್ರೀಕೃಷ್ಣನಿಗೆ ಶಮಂತಕಮಣಿಯ ಕದ್ದ ಅಪವಾದ ಈ ಗಣೇಶನ ದರ್ಶನದಿಂದಲೇ ಪರಿಹಾರವಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈಗಲೂ ಚೌತಿಯ ಚಂದ್ರನ ದರ್ಶನದಿಂದಾಗುವ ಪಾಪ ಪರಿಹಾರವಾಗುತ್ತದೆ ಎಂಬು ನಂಬಲಾಗಿದೆ. ಜೊತೆಗೆ ನಾಗದೋಷಗಳು ಇಷ್ಟಾರ್ಥಗಳು ಇಲ್ಲಿ ಬಗೆಹರಿಯುತ್ತವೆ ಅನ್ನೋದಕ್ಕೆ ಇಂದಿಗೂ ಅದೆಷ್ಟೋ ಜೀವಂತ ನಿದರ್ಶನಗಳಿವೆ.
ಇಂದು ಗಣೇಶ ಚತುರ್ಥಿ ಅಂಗವಾಗಿ ಕುರುಡುಮಲೆಯಲ್ಲಿ ಐದು ದಿನಗಳ ಕಾಲ ಬ್ರಹ್ಮರಥೋತ್ಸವಗಳು, ಪುಷ್ಪಪಲ್ಲಕ್ಕಿ, ಲಕ್ಷ್ಮೀಗಣಪತಿ ಉತ್ಸವಗಳು ನಡೆಯುತ್ತವೆ. ಈ ವಿಶೇಷ ದಿನಗಳಂದು ಗಣೇಶನ ದರ್ಶನಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಬರುತ್ತಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು
ಮೂರು ಯುಗಗಳಿಂದ ಪೂಜಿಸಲ್ಪಡುತ್ತಿರುವ ಕುರುಡುಮಲೆ ಗಣಪತಿಯು ಕಲಿಯುಗದಲ್ಲೂ ತನ್ನ ಚಮತ್ಕಾರವನ್ನು ತೋರಿಸುತ್ತಿದ್ದಾನೆ. ಭಕ್ತಿಯಿಂದ ಬೇಡಿದ ಭಕ್ತರಿಗೆ ಕೇಳಿದ್ದನ್ನು ನೀಡಿದ್ದಾನೆ. ಅದಕ್ಕಾಗಿ ಇಂದಿಗೂ ರಾಜಕೀಯ ನಾಯಕರು ಇಲ್ಲಿಗೆ ಬರುತ್ತಾರೆ. ಎಸ್.ಎಂ ಕೃಷ್ಣ, ಹೆಚ್ಡಿ ದೇವೇಗೌಡ, ಬಿಎಸ್ ಯಡಿಯೂರಪ್ಪ, ಹಾಗೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಗಣೇಶನಿಗೆ ಪೂಜೆ ಸಲ್ಲಿಸಿಯೇ ತಮ್ಮ ಪ್ರಚಾರ ಕಾರ್ಯಾರಂಭ ಮಾಡುತ್ತಾರೆ. ಜೊತೆಗೆ ಸಾವಿರಾರು ಜನರು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಗಣೇಶನ ಬಳಿ ಬಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ.
ಹೀಗೆ ವಿಶ್ವದಲ್ಲೇ ಏಕೈಕ, ಏಕಶಿಲಾ, ಸಾಲಿಗ್ರಾಮ ಶಿಲೆಯ 18 ಅಡಿ ಎತ್ತರದ ಗಣೇಶ ಮೂರ್ತಿಯ ಶಕ್ತಿ ಅಪಾರವಾದದು. ನಮ್ಮ ಪುರಾಣ ಪ್ರಸಿದ್ಧ ದೇವರುಗಳಾದ ರಾಮ, ಕೃಷ್ಣಾರ್ಜುನರರೇ ಇಲ್ಲಿನ ಗಣೇಶನ ಮುಂದೆ ಬಂದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡಿರುವ ಉದಾಹರಣೆಗಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ