Murder clue: ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಭೀಕರ ಹತ್ಯೆ, ಆದರೆ ಮೃತಳ ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!

Malur woman murder case: ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆ ಶವವನ್ನು  ಮಾಲೂರು ಪೊಲೀಸರು ಪರಿಶೀಲಿಸುತ್ತಿದ್ದರು. ಅಲ್ಲಿ ಪೂಜಾ ಸಾಮಗ್ರಿಗಳಿದ್ದ ಬ್ಯಾಗ್​ ಬಿದ್ದಿತ್ತು, ಶವದ ಮುಖ ಕಾಣದ ರೀತಿಯಲ್ಲಿ ಬೋರಲಾಗಿ ಬಿದ್ದಿತ್ತು, ಆಗ ಶವದ ಗುರುತು ಪತ್ತೆಗಾಗಿ ಪೊಲೀಸರು ಶವವನ್ನು ತಿರುಗಿಸಿ ನೋಡಿದ್ರು ಅಷ್ಟೊತ್ತಿಗೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಅಯ್ಯೋ ಇದು ನನ್ನ ಹೆಂಡತಿ ಸಾರ್​ ಎಂದು ಗೋಳಾಡೋದಕ್ಕೆ ಶುರುಮಾಡಿಕೊಂಡಿದ್ದ.   ಆತನನ್ನು ಸಮಾಧಾನ ಪಡಿಸಿದ ಪೊಲೀಸರು ಏನಾಗಿದೆ ಎಂದು ವಿಚಾರಣೆ ಮಾಡಲು ಶುರು ಮಾಡಿದಾಗ...

Murder clue:  ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಭೀಕರ ಹತ್ಯೆ, ಆದರೆ ಮೃತಳ ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!
ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಭೀಕರ ಹತ್ಯೆ!
Follow us
| Updated By: ಸಾಧು ಶ್ರೀನಾಥ್​

Updated on:Sep 14, 2024 | 1:44 PM

ಅದೊಂದು ಹಿಟ್​ ಅಂಡ್​ ರನ್​ ಅಪಘಾತ ಎಂದುಕೊಂಡಿದ್ದ ಪ್ರಕರಣ, ಆದರೆ ಅವತ್ತು ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಮೃತಳ ಚಪ್ಪಲಿ ನೀಡಿದ್ದ ಅದೊಂದು ಸುಳಿವು ಪೊಲೀಸರ ಅನುಮಾನವನ್ನು ಗಟ್ಟಿಯಾಗಿಸಿತ್ತು, ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅಲ್ಲೊಂದು ಸೆಂಟ್ರಲ್​ ಜೈಲ್​ನಲ್ಲಿ ಒಂದಾಗಿದ್ದ ಸ್ನೇಹಿತರಿಬ್ಬರು ಸೇರಿ ಮಾಡಿದ್ದ ಮಾಸ್ಟರ್ ಮೈಂಡ್ ಮರ್ಡರ್​ ಪ್ರಕರಣ ಬಯಲಾಗಿತ್ತು.

ಗಣೇಶನ ಹಬ್ಬದ ಸಿದ್ದತೆಯಲ್ಲಿದ್ದವರಿಗೆ ರಸ್ತೆ ಬದಿ ಸಿಕ್ಕಿತ್ತು ಮಹಿಳೆಯ ಶವ..! ಅವತ್ತು ಸೆಪ್ಟಂಬರ್​ 7 ಎಲ್ಲರೂ ಗಣೇಶನ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು, ಗ್ರಾಮಗಳಲ್ಲಿ ಗಣೇಶನನ್ನು ಇಡೋದಕ್ಕೆ ಬೇಕಾದ ಸಿದ್ದತೆಗಳಲ್ಲಿ ಜನರು ತೊಡಗಿದ್ದರು ಹೀಗಿರುವಾಗಲೇ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಹುಂಗೇನಹಳ್ಳಿ ಗೇಟ್​ ಬಳಿಯಿಂದ ಅದೊಬ್ಬರು ಮಾಲೂರು ಪೊಲೀಸ್​ ಠಾಣೆಗೆ ಪೋನ್​ ಮಾಡಿದ್ದರು. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬಳು ಸಾವನ್ನಪ್ಪಿರುವ ಅನುಮಾನವಿದೆ ಎಂದು ಕರೆ ಮಾಡಿದ್ದರೂ, ಕೂಡಲೇ ಸ್ಥಳಕ್ಕೆ ಮಾಲೂರು ಇನ್ಸ್​ಪೆಕ್ಟರ್ ವಸಂತ್​ ಕುಮಾರ್ ಹಾಗೂ ಅವರ ಸಿಬ್ಬಂದಿಗಳು ಹುಂಗೇನಹಳ್ಳಿ ಗೇಟ್​ ಬಂದಿದ್ದರು.

ಈ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯ ಶವವನ್ನು ಪರಿಶೀಲಿಸುತ್ತಿದ್ದರು. ಅಕೆಯ ಬಳಿಯಲ್ಲಿ ಒಂದು ಪೂಜಾ ಸಾಮಗ್ರಿಗಳಿದ್ದ ಬ್ಯಾಗ್​ ಬಿದ್ದಿತ್ತು, ಮಹಿಳೆಯ ಶವ ಮುಖ ಕಾಣದ ರೀತಿಯಲ್ಲಿ ಬೋರಲಾಗಿ ಬಿದ್ದಿತ್ತು, ಆಗ ಶವದ ಗುರುತು ಪತ್ತೆಗಾಗಿ ಪೊಲೀಸರು ಶವವನ್ನು ತಿರುಗಿಸಿ ನೋಡಿದ್ರು ಅಷ್ಟೊತ್ತಿಗೆ ನೋಡಿ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಅಯ್ಯೋ ಇದು ನನ್ನ ಹೆಂಡತಿ ಸಾರ್​ ಎಂದು ಗೋಳಾಡೋದಕ್ಕೆ ಶುರುಮಾಡಿಕೊಂಡಿದ್ದ. ಆಗ ಆತನನ್ನು ಸಮಾಧಾನ ಪಡಿಸಿದ್ದ ಪೊಲೀಸರು ಏನಾಗಿದೆ ಎಂದು ವಿಚಾರಣೆ ಮಾಡಲು ಶುರು ಮಾಡಿದ್ದರು.

ಹಿಟ್​ ಅಂಡ್ ರನ್​ ಎಂದುಕೊಂಡಿದ್ದವರಿಗೆ ಅಲ್ಲೊಂದು ಕೊಲೆಯ ಸುಳಿವು ಬಿಚ್ಚಿಟ್ಟಿತ್ತು..! ಹುಂಗೇನಹಳ್ಳಿ ಗೇಟ್​ನಲ್ಲಿ ಹಿಟ್​ ಅಂಡ್ ರನ್​ ಅಪಘಾತ ರೀತಿಯಲ್ಲಿ ಕಾಣುತ್ತಿದ್ದ ಮೃತ ಮಹಿಳೆಯ ಶವವನ್ನು ಪರಿಶೀಲಿಸಿದ ಮಾಲೂರು ಪೊಲೀಸರು ಆಕೆ ಯಾರು ಏನು ಅನ್ನೋದನ್ನು ವಿಚಾರಣೆ ನಡೆಸಿದ್ದರು,ಈ ವೇಳೆ ಅಲ್ಲೇ ಇದ್ದ ನಂಬಿಗಾನಹಳ್ಳಿ ಗ್ರಾಮದ ಆನಂದ್ ಕುಮಾರ್​ ಅದು ನನ್ನ ಪತ್ನಿ ಲಕ್ಷ್ಮಮ್ಮ(46) ಎಂದು ಪೊಲೀಸರ ಎದುರು ಹೇಳಿದ್ದ. ಈ ವೇಳೆ ಏನಾಯ್ತು ಎಂದು ಪೊಲೀಸರು ಆನಂದ್ ಕುಮಾರ್​ ರಿಂದ ಮಾಹಿತಿ ಪಡೆದಿದ್ದರು.

ಆನಂದ್​ ಕುಮಾರ್ ಮಾಲೂರು ಪೊಲೀಸರ ಎದುರು ಎಲ್ಲವನ್ನೂ ಹೇಳಿದ್ದ.​ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಲಕ್ಷ್ಮಮ್ಮ ಶುಕ್ರವಾರ ಅಂದರೆ ಸೆಪ್ಟಂಬರ್​-6 ರಂದು ನಂಬಿಗಾನಹಳ್ಳಿ ಗ್ರಾಮದಿಂದ ಮಾಲೂರು ಪಟ್ಟಣಕ್ಕೆ ಹೋಗಿ ಹಬ್ಬದ ಸಾಮಾನು ತೆಗೆದುಕೊಂಡು ಹಾಗೆ ತಮ್ಮ ಕುಟುಂಬಕ್ಕೆ ಸ್ನೇಹಿತರಾಗಿದ್ದ ತಿಮ್ಮೇಗೌಡ ಅವರ ಮನೆಗೆ ಹೋಗಿ ತಿಮ್ಮೇಗೌಡ ಹಾಗೂ ಅವರ ಪತ್ನಿ ಲೀಲಾ ಅವರನ್ನು ಹಬ್ಬಕ್ಕೆ ಬರುವಂತೆ ಕರೆದು ಬರೋದಾಗಿ ಹೇಳಿ ಹೋಗಿದ್ದರು.

ಇದಾದ ನಂತರ ಸಂಜೆ ವೇಳೆ ಮಾಲೂರಿನಿಂದ ಹೊರಟು ಮನೆಗೆ ಬರುತ್ತಿರುವುದಾಗಿ ಪೋನ್​ ಮಾಡಿ ಹೇಳಿದ್ದರು, ಇದಾದ ನಂತರ ಲಕ್ಷ್ಮಮ್ಮ ಮನೆಗೆ ಬಂದಿರಲಿಲ್ಲ, ಮೊಬೈಲ್​ ಕೂಡಾ ನಾಟ್ ರೀಚಬಲ್​ ಆಗಿತ್ತು, ಇದರಿಂದ ಲಕ್ಷ್ಮಮ್ಮ ಪತಿ ಆನಂದ್ ಹಾಗೂ ಅವರ ಮಕ್ಕಳು ಕೂಡಾ ಲಕ್ಷ್ಮಮ್ಮರನ್ನು ಹುಡುಕಾಡಿದರಾದರೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ, ಈವೇಳೆ ತಿಮ್ಮೇಗೌಡರಿಗೆ ಪೋನ್​ ಮಾಡಿ ಕೇಳಿದಾಗಲೂ ಅವರು ತಮ್ಮ ಮನೆಯಿಂದ ಹೊರಟಿರುವುದಾಗಿ ಮಾಹಿತಿ ನೀಡಿದ್ದರು. ರಾತ್ರಿ ಇಡೀ ಲಕ್ಷ್ಮಮ್ಮ ಕುರಿತು ಮಾಹಿತಿ ಸಿಗದೆ ಹೋದಾಗ ಬೆಳ್ಳಂಬೆಳಿಗ್ಗೆಯೇ ಆನಂದ್ ಕುಮಾರ್ ತನ್ನ ಹೆಂಡತಿಯನ್ನು ಹುಡುಕಿಕೊಂಡು ಮಾಲೂರಿನತ್ತ ಹೊರಟಿದ್ದರು.

ಈ ವೇಳೆ ಮಾರ್ಗ ಮಧ್ಯೆದಲ್ಲೇ ಹುಂಗೇನಹಳ್ಳಿ ಗೇಟ್​ನಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರ ಶವವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು​ ಈವೇಳೆ ಹೋಗಿ ನೋಡಿದ್ರೆ ಅದು ಆನಂದ್ ಕುಮಾರ್ ಪತ್ನಿ ಲಕ್ಷ್ಮಮ್ಮ ಅನ್ನೋದು ತಿಳಿದು ಬಂದಿತ್ತು. ಈವೇಳೆ ಅದೊಂದು ಅಪಘಾತ ಎಂದುಕೊಂಡಿದ್ದವರಿಗೆ ಪೊಲೀಸರ ಕೆಲವೊಂದು ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬೇರೆಯದ್ದೇ ಕಥೆ ತೆರೆದುಕೊಂಡಿತ್ತು.

ಸ್ಥಳಕ್ಕೆ ಬಂದಿದ್ದ ಮಾಲೂರು ಪೊಲೀಸರಿಗೆ ಅನುಮಾನ ಹುಟ್ಟಿಸಿದ್ದೇಕೆ..! ಅಷ್ಟಕ್ಕೂ ಅಲ್ಲಿ ಮೃತಪಟ್ಟಿದ್ದ ಲಕ್ಷ್ಮಮ್ಮ ಅವರು ದೇಹದ ಮೇಲೆ ಯಾವುದೇ ಗಾಯಗಳಾಗಿರಲಿಲ್ಲ, ಜೊತೆಗೆ ಅದು ಅಪಘಾತ ಎಂದಾಗಿದ್ದರೆ ಆಕೆಯ ಚಪ್ಪಲಿ ಇರಬೇಕಿತ್ತು ಆದರೆ ಚಪ್ಪಲಿ ಇರಲಿಲ್ಲ, ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದರೆ ಆಕೆಯ ಕಾಲು ದೂಳಾಗಿರಬೇಕಿತ್ತು ಆದರೆ ಕಾಲು ಕ್ಲೀನ್​ ಆಗಿತ್ತು, ಇನ್ನು ಆಕೆಯ ಮೊಬೈಲ್​ ಪ್ಲೈಟ್​ ಮೋಡ್​ನಲ್ಲಿತ್ತು ಹಾಗಾಗಿ ಇದೆಲ್ಲವೂ ಪೊಲೀಸರ ಅನುಮಾನವನ್ನು ಹೆಚ್ಚಿಸಿ ಇದೊಂದು ಕೊಲೆ ಇರಬಹುದು ಎಂದು ಲಕ್ಷ್ಮಮ್ಮ ಸಾವನ್ನು ಅನುಮಾನಾಸ್ಪದ ಎಂದು ಪ್ರಕರಣ ದಾಖಲಿಸಿಕೊಂಡು ನಂತರ ಕುಟುಂಬಸ್ಥರು ನೀಡಿದ ಮಾಹಿತಿ ಪಡೆದಾಗ ಕೆಲವೊಂದು ಅಂಶಗಳು ಕೊಲೆಯ ಸುಳಿವು ನೀಡಿದ್ದವು.

ಕುಟುಂಬಕ್ಕೆ ಸ್ನೇಹಿತನಂತಿದ್ದು ಲಕ್ಷ ಲಕ್ಷ ಹಣ ಸಾಲ ಪಡೆದಿದ್ದವನಿಂದಲೇ ಕೃತ್ಯ..! ಅಷ್ಟಕ್ಕೂ ಲಕ್ಷ್ಮಮ್ಮ ಪತಿ ನೀಡಿದ ಸುಳಿವೇನೆಂದರೆ ಅನಂದ್ ಕುಮಾರ್ ಹಾಗೂ ಅವರ ಕುಟುಂಬಕ್ಕೆ ಇತ್ತೀಚೆಗೆ ಅಂದರೆ ಒಂದೆರಡು ವರ್ಷ ಗಳಿಂದ ರಾಮನಗರ ಜಿಲ್ಲೆ ಸಾತನೂರು ಗ್ರಾಮದ ಕೆಮ್ಮೋಳಿ ಗ್ರಾಮದ ತಿಮ್ಮೇಗೌಡ ಎಂಬಾತ ರಿಯಲ್​ ಎಸ್ಟೇಟ್​, ಭೂಮಿಯನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುವುದು ಸೇರಿದಂತೆ ಹಲವು ವ್ಯವಹಾರಗಳ ಮೂಲಕ ಪರಿಚಯವಾಗಿದ್ದ ಇಬ್ಬರೂ ಒಂದೆರಡು ವ್ಯವಹಾರ ಮಾಡಿ ಒಂದಷ್ಟು ಹಣವನ್ನು ಸಂಪಾದನೆ ಮಾಡಿದ್ರು.

ಹಾಗಾಗಿ ತಿಮ್ಮೇಗೌಡ ಆನಂದ್ ಕುಮಾರ್​ ಅವರ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ, ಅದರ ಜೊತೆಗೆ ತಿಮ್ಮೇಗೌಡ ಪತ್ನಿ ಲೀಲ ಹಾಗೂ ಲಕ್ಷ್ಮಮ್ಮ ಕೂಡಾ ಒಳ್ಳೆ ಸ್ನೇಹಿತರಂತೆ ಇದ್ದರು ಇವರ ಮನೆಗೆ  ಅವರು ಬರೋದು ಹೋಗೋದು ನಡೆಯುತ್ತಿತ್ತು. ಜೊತೆಗೆ ಇತ್ತೀಚೆಗೆ ತಿಮ್ಮೇಗೌಡನಿಗೆ ಯಾವುದೋ ಒಂದು ಹಣದ ವ್ಯವಹಾರದಲ್ಲಿ ಸಮಸ್ಯೆ ಎದುರಾದಾಗ ಇದೇ ಆನಂದ್ ಕುಮಾರ್ ಹಾಗೂ ಲಕ್ಷ್ಮಮ್ಮ ಅವರು ಸುಮಾರು 20 ಲಕ್ಷ ರೂಪಾಯಿ ಹಣ ಕೊಟ್ಟು ಸಹಾಯ ಮಾಡಿದ್ರು  ಹೀಗೆ ಎರಡು ಕುಟುಂಬದಲ್ಲಿ ಒಂದು ರೀತಿ ಬಾಂಧವ್ಯ ಇತ್ತು.

ಇನ್ನು ಇದೇ ಬಾಂಧವ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದ ತಿಮ್ಮೇಗೌಡ ಆನಂದ್ ಕುಮಾರ್ ಗೆ ತಿಳಿಯದಂತೆ ಲಕ್ಷ್ಮಮ್ಮ ಬಳಿ ಕೂಡಾ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನಂತೆ, ಇನ್ನು ತಿಮ್ಮೇಗೌಡ ಕೊಡಬೇಕಿದ್ದ ಹಣವನ್ನು ಆನಂದ್ ಕುಮಾರ್​ ವಾಪಸ್​ ಕೊಡುವಂತೆ ಕೇಳಿದಾಗಲೂ ಈ ತಿಮ್ಮೇಗೌಡ ಆನಂದ್ ಕುಮಾರ್ ಪತ್ನಿ ಲಕ್ಷ್ಮಮ್ಮ ಅವರ ಬಳಿ ತೆಗೆದುಕೊಂಡು ಹಣ ಕೊಟ್ಟಿದ್ದನಂತೆ. ಹೀಗಿರುವಾಗಲೇ ಲಕ್ಷ್ಮಮ್ಮ ತಾನು ತನ್ನ ಗಂಡ ಮಕ್ಕಳಿಗೆ ತಿಳಿಯದ ರೀತಿ ತಿಮ್ಮೇಗೌಡನಿಗೆ ಕೊಟ್ಟಿದ್ದ ಹಣವನ್ನು ವಾಪಸ್​ ಕೊಡುವಂತೆ ಒತ್ತಾಯ ಮಾಡುತ್ತಿದ್ದಳು.

ಮತ್ತೊಂದೆಡೆ ಆನಂದ್ ಕುಮಾರ್ ಕೂಡಾ ತನಗೆ ಕೊಡಬೇಕಾದ ಹಣ ವಾಪಸ್​ ಕೊಡುವಂತೆ ತಿಮ್ಮೇಗೌಡನನ್ನು ಒತ್ತಾಯ ಮಾಡುತ್ತಿದ್ದನಂತೆ. ಹಾಗಾಗಿ ಹಣ ಕೊಡಲಾಗದ ತಿಮ್ಮೇಗೌಡ ಈ ಸಮಸ್ಯೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಆಲೋಚಿಸಿ ತನ್ನ ಸ್ನೇಹಿತ ಚಿಕ್ಕಬಳ್ಳಾಪುರ ಜಿಲ್ಲೆ ಹಾರೋಬಂಡೆ ನಿವಾಸಿ ಮುನಿಯಪ್ಪ ಎಂಬಾತನ ಸಹಾಯ ಕೇಳಿದ್ದ, ಗಣೇಶ ಹಬ್ಬದ ಮುನ್ನಾದಿನ ಸೆಪ್ಟಂಬರ್​-6 ರಂದು ಲಕ್ಷ್ಮಮ್ಮ ಗಣೇಶ ಹಬ್ಬಕ್ಕೆ ಸಾಮಾಲು ತಗೆದುಕೊಂಡು ನಂತರ ತಿಮ್ಮೇಗೌಡ ಪತ್ನಿ ಲೀಲಾರನ್ನು ಹಬ್ಬಕೆ ಮನೆಗೆ ಕರೆದು ಬರಲು ಮಾಲೂರಿಗೆ ಬಂದಿದ್ದಳು.

ಈ ವೇಳೆ ತಿಮ್ಮೇಗೌಡನಿಗೆ ಮೇಲಿಂದ ಮೇಲೆ ಪೋನ್​ ಮಾಡಿ ಹಣ ವಾಪಸ್ ಕೊಡುವಂತೆ ಪೀಡಿಸುತ್ತಿದ್ದಳಂತೆ ಇದರಿಂದ ಕೋಪಗೊಂಡಿದ್ದ ತಿಮ್ಮೇಗೌಡ ತನ್ನ ಸ್ನೇಹಿತ ಮುನಿಯಪ್ಪನಿಗೆ ತಿಳಿಸಿದ್ದ, ಈವೇಳೆ ಇಬ್ಬರೂ ದೊಡ್ಡಕಡತೂರು ತಮ್ಮ ತೋಟದ ಮನೆಯ ಬಳಿ ಪ್ಲಾನ್​ ಮಾಡಿ ಆಕೆಯನ್ನು ಮುಗಿಸಿಬಿಟ್ಟರೆ ಕೊಡುವ ಹಣ ನಮಗೆ ಉಳಿದುಕೊಳ್ಳುತ್ತದೆ ಎಂದು ಪ್ಲಾನ್​ ಮಾಡಿ ತಮ್ಮ ಸ್ವಿಪ್ಟ್​ ಕಾರ್​ನಲ್ಲಿ ಮಾಲೂರಿಗೆ ಹೋಗುತ್ತಾರೆ ಹಬ್ಬದ ಸಾಮಾನು ತೆಗೆದುಕೊಂಡು ಮನೆಗೆ ಹೋಗಲು ನಿಂತಿದ್ದ ಲಕ್ಷ್ಮಮ್ಮರನ್ನು ಕಾರ್​ನಲ್ಲಿ ಹತ್ತಿಸಿಕೊಂಡು ಹಣ ಕೊಡುವುದಾಗಿ ಹೇಳಿ ತಿಮ್ಮೇಗೌಡ ಹಾಗೂ ಮುನಿಯಪ್ಪ ಇಬ್ಬರು ಮಾಲೂರಿನ ಡೊಡ್ಡಕಡತೂರು ಗ್ರಾಮದ ಬಳಿ ಇರುವ ಎಂ.ಎಂ.ಲೇಔಟ್​ನಲ್ಲಿ ಕುತ್ತಿಗೆ ಹಿಸುಕಿ ಸಾಯಿಸಿ ನಂತರ ಆಕೆಯನ್ನು ಹುಂಗೇನಹಳ್ಳಿ ಗೇಟ್​ನಲ್ಲಿ ತಂದು ಬಿಸಾಡಿ ಹೋಗ್ತಾರೆ.

ಇನ್ನು ಗಣೇಶ ಹಬ್ಬದ ದಿನ ಬೆಳಿಗ್ಗೆ ಶವ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಇದು ಅಪಘಾತದಿಂದಾಗಿರುವ ಸಾವಲ್ಲ ಅನ್ನೋದನ್ನು ಹೇಳುತ್ತಿದ್ದಂತೆ ತಿಮ್ಮೇಗೌಡ ತನ್ನ ಹೆಂಡತಿ ಲೀಲಾರನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಮುನಿಯಪ್ಪನ ಮನೆಗೆ ಹೋಗುತ್ತಾರೆ. ಈವೇಳೆ ಪೊಲೀಸರಿಗೆ ಅನುಮಾನ ಬಂದು ತಿಮ್ಮೇಗೌಡ ಹಾಗೂ ಮುನಿಯಪ್ಪರನ್ನು ಹುಡುಕಿದಾಗ ಇಬ್ಬರು ತಲೆಮರೆಸಿಕೊಂಡಿದ್ದರು ಆಗ ಪೊಲೀಸರಿಗೆ ತಮ್ಮ ಅನುಮಾನ ನಿಜವಾಗುತ್ತದೆ ಆಗ ಎಸ್ಪಿ ನಿಖಿಲ್.ಬಿ ಅವರು ಆರೋಪಿಗಳ ಪತ್ತೆಗೆ​ ಎರಡು ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕರೆತಂದು ಪೊಲೀಸರು ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ತಾವು ಕೊಲೆಗಾರಿ ಮಾಡಿದ ಪ್ಲಾನ್​ ಎಲ್ಲವನ್ನೂ ಬಾಯಿ ಬಿಟ್ಟಿದ್ದಾರೆ.

ಸೆಂಟ್ರಲ್​ ಜೈಲಿನಲ್ಲಿ ಸ್ನೇಹಿತರಾಗಿದ್ದವರಿಂದ ಕೊಲೆ ಮಾಡಿ ಮತ್ತೆ ಜೈಲಿಗೆ..!

ಇನ್ನು ಚಿಕ್ಕಬಳ್ಳಾಪುರದ ಹಾರೋಬಂಡೆ ನಿವಾಸಿ ಮುನಿಯಪ್ಪನಿಗೂ, ರಾಮನಗರ ಜಿಲ್ಲೆ ಸಾತನೂರಿನ ತಿಮ್ಮೇಗೌಡನಿಗೂ ಪ್ರೆಂಡ್​ ಶಿಪ್​ ಹೇಗೆ ಎಂದು ಕೇಳಿದ್ರೆ, ಈ ಇಬ್ಬರೂ ಆಸಾಮಿಗಳು ಈಮೊದಲೇ ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದಾರೆ. ತಿಮ್ಮೇಗೌಡ ಬೆಂಗಳೂರಿನಲ್ಲಿ ಬಾರ್​ ಒಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುವ ವೇಳೆ ಶ್ರೀನಿವಾಸಮೂರ್ತಿ ಎಂಬಾತನನ್ನು ಕೊಲೆ ಮಾಡಿದ್ದ, ಇನ್ನು ಮುನಿಯಪ್ಪ ಕೂಡಾ ನಂದಗುಡಿ ಬಳಿ ಮುನಿರಾಜು ಎಂಬಾತನ್ನು ಕೊಂದು ಜೈಲು ಪಾಲಾಗಿದ್ದ ಈವೇಳೆ ಜೈಲು ಶಿಕ್ಷೆ ಅನುಭವಿಸುವ ವೇಳೆ ಇಬ್ಬರೂ ಕೂಡಾ ಸ್ನೇಹಿತರಾಗಿದ್ದರು.

ಅದೇ ಸ್ನೇಹದ ಹಿನ್ನೆಲೆ ಸೆಪ್ಟಂಬರ್-6 ರಂದು ಮುನಿಯಪ್ಪ ಮಾಲೂರಿಗೆ ಬಂದಿದ್ದ, ಈವೇಳೆ ಲಕ್ಷ್ಮ್ಮಮ್ಮ ಹಣಕ್ಕಾಗಿ ಪದೇ ಪದೇ ಪೋನ್​ ಮಾಡಿದ್ದನ್ನು ನೋಡಿ ತಾವು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದ ದೊಡ್ಡಕಡತ್ತೂರು ತೋಟದ ಮನೆ ಬಳಿ ಕೂತು ಪ್ಲಾನ್​ ಮಾಡಿ ನಂತರ ಇಬ್ಬರೂ ಬಾರ್​ಗೆ ಹೋಗಿ ಕುಡಿದು ನಂತರ, ಮಾಲೂರಿನಲ್ಲಿದ್ದ ಲಕ್ಷ್ಮಮ್ಮರನ್ನು ಕಾರ್​ನಲ್ಲಿ ಕೂರಿಸಿಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಹುಂಗೇನಹಳ್ಳಿ ಬಳಿ ಬಿಸಾಡಿ ರಾತ್ರಿ ಇಡೀ ಸುತ್ತಾಡಿ ನಂತರ ಬೆಳಿಗ್ಗೆ ಪರಾರಿಯಾಗಿದ್ದರು. ಸದ್ಯ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು ಆರೋಪಿಗಳನ್ನು ಹಿಡಿದು ತಂದು ಎರಡು ಒದೆಯುತ್ತಿದ್ದಂತೆ ನಿಜಾಂಶ ಹೊರ ಬಂದಿತ್ತು.

ಒಟ್ಟಾರೆ ತಾವು ಒಳ್ಳೆಯವರಂತೆ ನಂಬಿಕೆ ಹುಟ್ಟಿಸಿ ಮನೆಯಲ್ಲಿ ತಿಂದು ಉಂಡು ನಂತರ ಅವರಿಂದಲೇ ಹಣವನ್ನು ಪಡೆದು ಕೊನೆಗೆ ಹಣ ಕೇಳಿದಾಗ ಅವರನ್ನೇ ಕೊಲೆ ಮಾಡಿದ ಈ ನಂಬಿಕೆ ದ್ರೋಹಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋದು ಕೊಲೆಯಾದ ಲಕ್ಷ್ಮಮ್ಮ ಕುಟುಂಬಸ್ಥರ ಆಗ್ರಹವಾಗಿದೆ.

Published On - 1:36 pm, Sat, 14 September 24

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ