ಮಾಲೂರು ಕ್ಷೇತ್ರದ ಮರುಮತ ಎಣಿಕೆ ಕಾರ್ಯ ಅಂತ್ಯ: ಆದರೂ ತೃಪ್ತಿಯಾಗಿಲ್ಲ ಎಂದ ಬಿಜೆಪಿ ಪರಾಜಿತ ಅಭ್ಯರ್ಥಿ
ತೀವ್ರ ಕುತೂಹಲ ಮೂಡಿಸಿದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಅಂತ್ಯವಾಗಿದ್ದು, ಫಲಿತಾಂಶ ಮಾತ್ರ ಪ್ರಕಟಗೊಂಡಿಲ್ಲ. ಮರು ಎಣಿಕೆಯ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ತದನಂತರ ನ್ಯಾಯಾಲಯ ಈ ಕುರಿತು ತೀರ್ಪು ಪ್ರಕಟಿಸಲಿದೆ. ಆದ್ರೆ, ಮೇಲ್ನೋಟಕ್ಕೆ ಕಾಂಗ್ರೆಸ್ನ ಹಾಲಿ ಶಾಸಕಗೆ ಬಹುತೇಕ ಗೆಲುವು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋಲಾರ, (ನವೆಂಬರ್ 11): ಕಾಂಗ್ರೆಸ್ ನ ಕೆ.ವೈ. ನಂಜೇಗೌಡ ಮತ್ತು ಬಿಜೆಪಿಯ ಕೆ.ಎಸ್. ಮಂಜುನಾಥ್ ಗೌಡ ನಡವಿನ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಇಂದು (ನವೆಂಬರ್ 11) ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆದಿದ್ದು, ಮರು ಎಣಿಕೆಯ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ತದನಂತರ ನ್ಯಾಯಾಲಯ ಈ ಕುರಿತು ತನ್ನ ತೀರ್ಪು ಪ್ರಕಟಿಸಲಿದೆ. ಮೂಲಗಳ ಪ್ರಕಾರ ಮರು ಮತ ಎಣಿಕೆಯಲ್ಲೂ ಸಹ ಫಲಿತಾಂಶ ಯಥಾಸ್ಥಿತಿ ಸಾಧ್ಯತೆ ಇದೆ ಎನ್ನಲಾಗಿದೆ. ಆದರೂ ಮರುಮತ ಎಣಿಕೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.
2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ವೈ.ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಲೋಪವಾಗಿದ್ದು, ಈ ಸಂಬಂಧ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಮರುಮತ ಎಣಿಕೆ ಮಾಡಲಾಗಿದ್ದು, ಫಲಿತಾಂಶ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಪರವಾಗಿ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ನಂಜೇಗೌಡಗೆ ತುಸು ರಿಲೀಫ್: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ಸುಪ್ರೀಂ ಕೋರ್ಟ್ ಸೂಚನೆ
ಅಭ್ಯರ್ಥಿಗಳ ಅನುಮಾನ, ಗೊಂದಲ ನಿವಾರಣೆ
ಪ್ರಮುಖ ಮೂರು ಅಭ್ಯರ್ಥಿಗಳ ಎದುರಲ್ಲೇ ಮತ ಎಣಿಕೆ ಕಾರ್ಯ ನಡೆದಿದ್ದು, ಪೋಸ್ಟಲ್ ಬ್ಯಾಲೆಟ್ ನಲ್ಲಿ ಹಾಗೂ ಇನ್ ವ್ಯಾಲಿಡ್ ಮತಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಿದೆ. ಪ್ರತಿ ಸುತ್ತಿನಲ್ಲೂ ಅಧಿಕಾರಿಗಳು ಅಭ್ಯರ್ಥಿಗಳ ಅನುಮಾನ, ಗೊಂದಲ ನಿವಾರಣೆ ಮಾಡಿ ಎಣಿಕೆ ಕಾರ್ಯ ಮಾಡಿದ್ದಾರೆ. ಇನ್ನು ಚುನಾವಣಾಧಿಕಾರಿಗಳು ಸಹ ಪ್ರತಿ ಸುತ್ತಿನ ಮತ ಎಣಿಕೆ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಫಲಿತಾಂಶ ಬದಲಾವಣೆ ಕಡಿಮೆ ಎಂದ ಪಕ್ಷೇತರ ಅಭ್ಯರ್ಥಿ
ಇನ್ನು ಮರು ಮತ ಎಣಿಕೆ ಬಗ್ಗೆ ಮೂರನೇ ಸಮೀಪ ಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ ಪ್ರತಿಕ್ರಿಯಿಸಿದ್ದು, ತುಂಬಾ ಚೆನ್ನಾಗಿ ಮರು ಮತ ಎಣಿಕೆ ಕಾರ್ಯ ನಡೆದಿದೆ. ಅಧಿಕಾರಿಗಳು ತುಂಬಾ ಚೆನ್ನಾಗಿ ಮರು ಮತ ಎಣಿಕೆ ಕಾರ್ಯ ನಡೆಸಿಕೊಟ್ಟಿದ್ದಾರೆ. ಏನೆಲ್ಲಾ ದೂರು ಬಂದಿತ್ತು ಆ ಪ್ರಕಾರ ಮತ ಎಣಿಕೆ ನಡೆದಿದೆ. ಮರು ಮತ ಎಣಿಕೆ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ಮರು ಮತ ಎಣಿಕೆ ನನಗೆ ತೃಪ್ತಿ ತಂದಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಯಾವುದೇ ಫಲಿತಾಂಶ ಹೇಳುವಂತಿಲ್ಲ. ಸಣ್ಣಪುಟ್ಟ ಗೊಂದಲವಿತ್ತು, ಅದನ್ನು ನಿವಾರಣೆ ಮಾಡಿದ್ದಾರೆ. ನಾನು ಕೋರ್ಟ್ ಹೋಗಿಲ್ಲ. ಆದ್ರೆ, ಚುನಾವಣಾಧಿಕಾರಿಗಳು ನೋಟೀಸ್ ನೀಡಿದ್ದ ಹಿನ್ನಲೆಯಲ್ಲಿ ನಾನು ಬಂದಿದ್ದೀನಿ. ಫಲಿತಾಂಶ ಬಹುತೇಕ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಪರೋಕ್ಷವಾಗಿ ನಂಜೇಗೌಡ ಅವರೇ ಗೆಲ್ಲಲಿದ್ದಾರೆ ಎಂದು ಹೇಳಿದರು.
ಮರು ಎಣಿಕೆ ಸಮಾಧಾನವಾಗಿಲ್ಲ ಎಂದ ಮಂಜುನಾಥ್
ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ನಂತರ ಮಾಜಿ ಶಾಸಕ ಮಂಜುನಾಥಗೌಡ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮಾಲೂರು ವಿಧಾನಸಭಾ ಕ್ಷೇತ್ರದ ಮರುಎಣಿಕೆ ನನಗೆ ಇನ್ನೂ ಸಮಾಧಾನ ಆಗಿಲ್ಲ. ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸಿಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್ ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಿದೆ. ಚುನಾವಣೆ ಮರುಎಣಿಕೆ ವಿರುದ್ದ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ಕೆಲವೊಂದು ನನ್ನ ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ. ನನ್ನ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದರು.
ಹಾಲಿ ಶಾಸಕ ನಂಜೇಗೌಡ ಹೇಳಿದ್ದೇನು?
ಹಾಲಿ ಕಾಂಗ್ರೆಸ್ ಶಾಸಕ ನಂಜೇಗೌಡ ಮಾತನಾಡಿ, ಮಾಲೂರು ಜನರಿಗೆ ಮತ್ತು ಬಂಧುಗಳಿಗೆ ನನ್ನ ಧನ್ಯವಾದ. ಎರಡನೇ ಅವಧಿಗೆ ಶಾಸಕನಾಗಿ ಮಾಡಿದ ಮೇಲೆ ಶಾಸಕ ಎಂದು ಡಿಕ್ಲೇರ್ ಆದ ನಂತರ ಬಿಜೆಪಿಯವರು ಕೋರ್ಟ್ ಗೇ ಹೋಗಿದ್ದರು. ತುಂಬಾ ನೋವನ್ನು ಅನುಭವಿಸಿದ್ದೇನೆ. ನನ್ನ ತಾಲ್ಲೂಕಿನ ಜನರು ಅಭಿಮಾನಿಗಳು ಕಾರ್ಯಕರ್ತರು ಕುಟುಂಬ ಎಲ್ಲರೂ ನೋವು ಅನುಭವಿಸಿದರು. ಎರಡನೇ ಅವಧಿಗೆ ಶಾಸಕನಾದ ಮೇಲೆ ಅಭಿವೃದ್ಧಿ ಮಾಡಬೇಕು ಅಂದುಕೊಂಡಿದೆ. ಆದ್ರೆ, ನ್ಯಾಯಾಲಯಕ್ಕೆ ಅಲೆಯಬೇಕಾಗಿತ್ತು. ಬಿಜೆಪಿ ಅಭ್ಯರ್ಥಿ ನಾನೇ ಗೆದ್ದು ಬಿಡುತ್ತೇವೆ, ಮರು ಚುನಾವಣೆ ಆಗಿಬಿಡುತ್ತದೆ ಎಂದು ಗೊಂದಲ ಸೃಷ್ಟಿಸಿದರು. ಆದರೆ ಸುಪ್ರಿಂ ನ್ಯಾಯಾಲಯದ ಆದೇಶದ ನಂತರ ಮರು ಎಣಿಕೆ ಆದೇಶದ ಪ್ರಕಾರ ಎಣಿಕೆ ಮುಗಿದಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಗೌರವಿಸಬೇಕು. ಇವರಿಗೆ ಅದೆಲ್ಲ ಗೊತ್ತಿಲ್ಲ ಎಂದು ಮಂಜುನಾಥ್ ಗೌಡಗೆ ಟಾಂಗ್ ಕೊಟ್ಟರು.
ಮರು ಎಣಿಕೆಯಲ್ಲೂ ಗೆಲ್ಲುವ ವಿಶ್ವಾಸ
ಮರುಮತ ಎಣಿಕೆ ಆದರೂ ಕೂಡ ಯಾವುದೇ ಬದಲಾವಣೆ ಕಂಡಿಲ್ಲ. ಎಣಿಕೆ ಮಾಡಿದ ಅಧಿಕಾರಿಗಳನ್ನು ಅನುಮಾನದಿಂದ ನೋಡಿದ್ರು. ಬಿಜೆಪಿ ಅಭ್ಯರ್ಥಿ ಕೋರ್ಟ್ ಹೋಗಿ ತುಂಬಾ ನೋವು ಕೊಟ್ಟಿದ್ದಾರೆ.ಅಂದು ಅಧಿಕಾರಿಗಳು ಯಾರಿದ್ದರು ನನಗೆ ಗೊತ್ತಿಲ್ಲ.ಯಾರೇ ಅಧಿಕಾರಿಗಳು ಆಗಲಿ, ಅವರ ಕೆಲಸ ಜವಾಬ್ದಾರಿಯಿಂದ ಮಾಡಿದ್ದಾರೆ. ಇಷ್ಟು ದಿನ ನಾನು ನೋವು ತಿಂದಿದಕ್ಕೆ ಇಂದು ನ್ಯಾಯ ಸಿಕ್ಕಿತು. ನ್ಯಾಯ ನಮ್ಮಪರವಾಗಿದೆ. ಬಿಜೆಪಿ ಮಾಜಿ ಶಾಸಕ ನನ್ನ ಬಗ್ಗೆ ಎಷ್ಟೇ ಮಾತನಾಡಿದರೂ ನಾನು ಪ್ರತಿಕ್ರಿಯೆ ನೀಡಲ್ಲ. ನನ್ನ ಬಗ್ಗೆ ಸಾವಿರಾರು ಮಾತನಾಡಲಿ ಮಾತನಾಡಲ್ಲ.ನಾನಿಗ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತೇನೆ. ಸಾವಿರಾರು ಕೋಟಿ ಅನುದಾನ ನಮ್ಮ ಕ್ಷೇತ್ರಕ್ಕೆ ನೀಡಿದ್ದಾರೆ ಅದನ್ನು ಮಾಡುತ್ತೇನೆ ಎಂದು ಮರುಮತ ಎಣಿಕೆಯಲ್ಲೂ ಜಯ ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಇದೇ ಮೊದಲ ಬಾರಿಗೆ ಇವಿಎಂ ಮತಗಳ ಮರುಎಣಿಕೆ ನಡೆದಿದೆ. ಹೀಗಾಗಿ ಫಲಿತಾಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಚುನಾವಣಾ ಅಕ್ರಮದ ಬಗ್ಗೆ ಟೀಕಿಸಿ ಮತಗಳವು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ಸಮೀಪ ಸ್ಪರ್ಧಿ ಬಿಜೆಪಿಯ ಮಂಜುನಾಥ್ ಗೆದ್ದರೆ ಇದರ ಪರಿಣಾಮ ರಾಜ್ಯ ಕಾಂಗ್ರೆಸ್ ಮೇಲೆ ಬೀರಲಿದ್ದು, ರಾಹುಲ್ ಗಾಂಧಿ ಆರೋಪಕ್ಕೂ ಹಿನ್ನೆಡೆಯಾಗಲಿದೆ.
ಇನ್ನು 2023ರಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ನ ನಂಜೇಗೌಡ, ಈ ಬಾರಿ ಮರು ಮತ ಎಣಿಕೆಯಲ್ಲೂ ಗೆದ್ದರೆ ಯಥಾಸ್ಥಿತಿಯಂತೆಯೇ ಅವರೇ ಶಾಸಕರಾಗಿ ಮುಂದುವರೆಯಲಿದ್ದಾರೆ.
Published On - 9:19 pm, Tue, 11 November 25




