ಕೋಲಾರ
ಕೋಲಾರ, ನ.19: ಕಳೆದ ಮೂರು ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಸುಮಾರು 40 ಕೊಲೆಗಳು ನಡೆದಿವೆ. ಅದರಲ್ಲೂ ಮೂರು ಅತೀ ಆತಂಕವಾಗಿ ಕೊಲೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೋಲಾರ(
Kolar)ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಅಷ್ಟೇ ಅಲ್ಲದೆ
ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾದ ಮಾದಕ ವಸ್ತುಗಳ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಔಷಧ ನಿಯಂತ್ರಣ ಇಲಾಖೆಗಳು ನಿರಂತವಾಗಿ ಮೆಡಿಕಲ್ ಸ್ಟೋರ್ಗಳು, ಬಾರ್ಗಳು, ವೈನ್ಸ್ ಸ್ಟೋರ್ಗಳ ಮೇಲೆ ನಿರಂತರ ದಾಳಿ ಮಾಡಿ ತಪಾಸಣೆ ಮಾಡುತ್ತಿವೆ.
ಇನ್ನೊಂದೆಡೆ ಪೊಲೀಸರು, ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ಮಾಡಿ, ರೌಡಿಗಳಿಗೆ ಎಚ್ಚರಿಕೆ ಕೊಡುವ ಜೊತೆಗೆ ಅವರ ಮನೆಗಳನ್ನು ತಪಾಸಣೆ ಮಾಡುತ್ತಿದೆ. ಇನ್ನು ಯುವಕರು ಹೆಚ್ಚಾಗಿ ಮಾದಕ ವಸ್ತುಗಳಾದ ಗಾಂಜಾ ಸೇರಿದಂತೆ ಇತರ ವಸ್ತುಗಳಿಗೆ ಮಾರು ಹೋಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟಲ್ಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಈ ಮೂಲಕ ಕಳೆದೊಂದು ವಾರದಿಂದ ನಿರಂತರ ಕಾರ್ಯಾಚರಣೆ ಮೂಲಕ ಸದ್ಯ ಕೋಲಾರದಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲೂ ಕೂಡ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸ್ವತ: ಗೃಹಸಚಿವರಿಗೆ ಕರೆ ಮಾಡಿ ಜಿಲ್ಲೆಯಲ್ಲಿ ಖಾಲಿ ಇರುವ ಪೊಲೀಸ್ ಅಧಿಕಾರಿಗಳ ಹುದ್ದೆಯನ್ನು ತುಂಬಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದಂತಹ ಜನರಲ್ಲಿ ಧೈರ್ಯ ತುಂಬಲು ಸದ್ಯ ಪೊಲೀಸ್ ಇಲಾಖೆ ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಹಾಗೂ ಮಾದಕ ವಸ್ತುಗಳ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೋಲಾರ ನಗರದ ಪ್ರತಿಯೊಂದು ಬಡಾವಣೆಯಲ್ಲಿ ಸ್ಪೆಷಲ್ ಡ್ರೈವ್ ಮಾಡಲು ಮುಂದಾಗಿದೆ. ಹಾಸ್ಟೆಲ್, ಪಾರ್ಕ್, ಹಳೆ ಕಟ್ಟಡಗಳು ಸೇರಿದಂತೆ ಯುವಕರು ಸೇರುವಂತಹ ಅಕ್ರಮ ತಾಣಗಳ ಮೇಲೆ ಕಾರ್ಯಾಚರಣೆ ಮಾಡಿ ಜನರನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿ ಎಚ್ಚರಿಕೆ ಕೊಟ್ಟು ಕಳಿಸುವ ಕೆಲಸ ಮಾಡುತ್ತಿದೆ.
ಇದರ ಜೊತೆಗೆ ಯುವಜನತೆಗೆ ಬುದ್ದಿ ಹೇಳುವ ಜೊತೆಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುಮಾರು 50 ಕ್ಕೂ ಹೆಚ್ಚು ಅಡ್ಡೆಗಳ ಮೇಲೆ ದಾಳಿ ಮಾಡಿ ಕ್ರಮ ಕೈಗೊಂಡಿದ್ದಾರೆ. ಇನ್ನು ಅಬಕಾರಿ ಹಾಗೂ ಡ್ರಗ್ ಕಂಟ್ರೋಲರ್ ಸಹ ಪೊಲೀಸರ ಜೊತೆಗೆ ನಿರಂತರ ಕಾರ್ಯಾಚರಣೆ ಮಾಡಿ ಮಾದಕತೆ ಇರುವ ಮಾತ್ರೆಗಳನ್ನು ಮಾರಾಟ ಮಾಡುವ ಮುನ್ನ ಎಚ್ಚರ ವಹಿಸಲು ಸೂಚಿಸಿದೆ. ಒಟ್ಟಾರೆ ಕೋಲಾರದಲ್ಲಿ ಅತಿಯಾಗಿರುವ ಗಾಂಜಾ, ಡ್ರಗ್ಸ್, ಸೇರಿದಂತೆ ಕ್ರಿಕೆಟ್ ಬೆಟ್ಟಿಂಗ್ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವಿಶೇಷ ಡ್ರೈವ್ಗಳನ್ನು ಮಾಡಲಾಗುತ್ತಿದೆ. ಸದ್ಯ ಇದಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಮಾತುಗಳು ಕೇಳಿಬರುತ್ತಿವೆ. ಆದರೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.