‘ಲಕ್ಷಾಂತರ ರೂ. ಅನುದಾನ ಕೊಟ್ಟರೂ ಜಿಲ್ಲೆಯಲ್ಲಿ ಗಾಂಜಾ, ಬೆಟ್ಟಿಂಗ್ ನಿಂತಿಲ್ಲ ಯಾಕೆ’?: ಕೋಲಾರ ಎಸ್ಪಿಗೆ ಶಾಸಕ ಸಮೃದ್ಧಿ ಮಂಜುನಾಥ್ ತರಾಟೆ

ಕೋಲಾರ ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಕೃತ್ಯಗಳ ಹೆಚ್ಚಳ ಕುರಿತು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಜಿಲ್ಲಾ ಪಂಚಾಯತ್ ದಿಶಾ ಸಭೆಯಲ್ಲಿ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಪ್ರಾಪ್ತರ ಮೇಲಿನ ಅತ್ಯಾಚಾರ, ಡ್ರಗ್ಸ್, ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದ ಬಗ್ಗೆ ಪ್ರಶ್ನಿಸಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷಾಂತರ ರೂ. ಅನುದಾನ ಕೊಟ್ಟರೂ ಜಿಲ್ಲೆಯಲ್ಲಿ ಗಾಂಜಾ, ಬೆಟ್ಟಿಂಗ್ ನಿಂತಿಲ್ಲ ಯಾಕೆ?: ಕೋಲಾರ ಎಸ್ಪಿಗೆ ಶಾಸಕ ಸಮೃದ್ಧಿ ಮಂಜುನಾಥ್ ತರಾಟೆ
ಶಾಸಕ ಸಮೃದ್ಧಿ ಮಂಜುನಾಥ್ , ಎಸ್ಪಿ ಕನ್ನಿಕಾ ಸಿಕ್ರಿವಾಲ್
Edited By:

Updated on: Jun 06, 2026 | 2:43 PM

ಕೋಲಾರ, ಜೂ.6: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ (ದಿಶಾ) ಸಭೆಯಲ್ಲಿ ಕೋಲಾರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವಾಗಿ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕನ್ನಿಕಾ ಸಿಕ್ರಿವಾಲ್ ಅವರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಮಿತಿಮೀರಿದ್ದರೂ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಅವರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು, ರೌಡಿಸಂ, ಡ್ರಗ್ಸ್ ಹಾಗೂ ಗಾಂಜಾ ಮಾರಾಟ ಜಾಲ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ಶಾಸಕರು ಗಂಭೀರ ಆರೋಪ ಮಾಡಿದರು. “ಜಿಲ್ಲೆಯೊಂದರಲ್ಲೇ ಬರೋಬ್ಬರಿ 7 ಜನ ಪ್ರಮುಖ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್‌ಗಳಿದ್ದಾರೆ. ಇವರ ವಿರುದ್ಧ ಇಲಾಖೆ ಕೈಗೊಂಡಿರುವ ಕ್ರಮಗಳೇನು? ಎಷ್ಟು ಜನರ ವಿರುದ್ಧ ಕಟ್ಟುನಿಟ್ಟಿನ ಕೇಸ್ ದಾಖಲಿಸಿದ್ದೀರಿ?” ಎಂದು ಎಸ್ಪಿಯವರನ್ನು ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಮಂಗಳೂರು ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಮೂವರು ಪೊಲೀಸ್ ಬಲೆಗೆ: ಕಲಬುರಗಿಯಲ್ಲಿ ವಂಚಿಸುತ್ತಿದ್ದ ಬಿಹಾರಿಗಳ ಬಂಧನ

ಇಲ್ಲಿದೆ ನೋಡಿ ವಿಡಿಯೋ:

ಕೋಲಾರವು ಗಡಿ ಜಿಲ್ಲೆಯಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಸರಣಿಯಾಗಿ ನಡೆಯುತ್ತಿವೆ. ಆದರೆ, ಸಾರ್ವಜನಿಕರಲ್ಲಿ ಕಾನೂನು ಮತ್ತು ಸುರಕ್ಷತೆಯ ಕುರಿತು ಅರಿವು ಮೂಡಿಸುವ ಯಾವುದೇ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿಲ್ಲ ಎಂದು ಮಂಜುನಾಥ್ ಅಸಮಾಧಾನ ಹೊರಹಾಕಿದರು. “ಪೊಲೀಸ್ ಇಲಾಖೆಯ ಸುಧಾರಣೆಗಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟ್ರಾಫಿಕ್ ಸಿಗ್ನಲ್ ಲೈಟ್‌ಗಳು ಹಾಗೂ ಇಲಾಖೆಯ ಬಳಕೆಗೆ 2 ಕಾರುಗಳನ್ನು ಕೊಡಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯ ನೀಡಿದರೂ ಜಿಲ್ಲೆಯಲ್ಲಿ ಅಪರಾಧಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಏಕೆ?” ಎಂದು ತರಾಟೆಗೆ ತೆಗೆದುಕೊಂಡರು. ಶಾಸಕರ ಈ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ತಡಕಾಡಿದ ಪ್ರಸಂಗ ಸಭೆಯಲ್ಲಿ ನಡೆಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us