ರೇಷ್ಮೆ ನಾಡು ಕೋಲಾದಲ್ಲಿ ರೇಷ್ಮೆ ಬೆಳೆಗೆ ಸಂಕಷ್ಟ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಬೆಳೆಗಾರರ ಸಂಖ್ಯೆ
ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೋಗಗಳು, ಕೀಟಗಳ ಹಾವಳಿ, ಮತ್ತು ಸರ್ಕಾರದಿಂದ ಸೂಕ್ತ ಪ್ರೋತ್ಸಾಹದ ಕೊರತೆಯಿಂದ ರೇಷ್ಮೆ ಬೆಳೆಯುವುದನ್ನು ರೈತರು ಕೈಬಿಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮತ್ತು ರೇಷ್ಮೆ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

ಕೋಲಾರ, ಫೆಬ್ರವರಿ 22: ಇಷ್ಟು ವರ್ಷಗಳು ಈ ಜಿಲ್ಲೆಯ ಹಿರಿಮೆ ಗರಿಮೆಯಲ್ಲಿ ರೇಷ್ಮೆ (silk) ಬೆಳೆ ಹೆಸರುವಾಸಿಯಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಹಿರಿಮೆಗಿದ್ದ ರೇಷ್ಮೆ ಬೆಳೆಯನ್ನೇ ರೈತರು ಬೆಳೆಯೋದನ್ನ ನಿಲ್ಲಿಸುತ್ತಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಜಿಲ್ಲೆಯಲ್ಲಿನ ಬದಲಾದ ವಾತಾವರಣ, ಬೆಳೆಗಳಿಗೆ ಕಾಡುತ್ತಿರುವ ಕೀಟ ಹಾಗೂ ರೋಗ ಬಾಧೆ ಈ ಎಲ್ಲಾ ಕಾರಣಗಳಿಂದ ಬೆಳೆ ಬೆಳೆಯಲಾಗದೆ ರೈತರು ಪರ್ಯಾಯ ಬೆಳೆಗಳತ್ತ ಭಾರವಾದ ಮನಸ್ಸಿನಿಂದಲೇ ಮುಖ ಮಾಡುತ್ತಿದ್ದಾರೆ.
ಕೋಲಾರ ಜಿಲ್ಲೆ ಸಿಲ್ಕ್ ಮತ್ತು ಮಿಲ್ಕ್ಗೆ ಹೆಸರಾಗಿರುವಾಸಿಯಾಗಿದೆ. ಹಾಲು ಮತ್ತು ರೇಷ್ಮೆ ಉತ್ಪಾದನೆಗೆ ಹೆಸರು ವಾಸಿಯಾಗಿರುವ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗೆ ಶತಮಾನದ ಇತಿಹಾಸ ಇದೆ. ಟಿಪ್ಪು ಸುಲ್ತಾನ್ ಕಾಲದಿಂದಲೂ ಜಿಲ್ಲೆಯಲ್ಲಿ ರೈತರು ರೇಷ್ಮೆ ಬೆಳೆ ಬೆಳೆಯುವುದನ್ನು, ನೂಲು ಬಿಡಿಸುವುದನ್ನ, ಬಟ್ಟೆ ನೇಯುವುದನ್ನು ರೂಡಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ಶಿರಗನಹಳ್ಳಿ ರೈತ!
ಜಿಲ್ಲೆಯ ರೈತರು ಹಿಪ್ಪುನೇರಳೆ ಸೊಪ್ಪನ್ನು ಬೆಳೆದ ರೇಷ್ಮೆ ಹುಳು ಮನೆ ನಿರ್ಮಾಣ ಮಾಡಿ, ಚಂದ್ರಂಕಿಯಲ್ಲಿ ರೇಷ್ಮೆ ಕಟ್ಟಿದ ರೇಷ್ಮೆಗೂಡನ್ನು ಮಾರುಕಟ್ಟೆಗೆ ತಂದು ಹಾಕಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜಿಲ್ಲೆಯ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಗುಣಮಟ್ಟದಲ್ಲಿ ನಂಬರ್ ಒನ್ ಸ್ಥಾನದಲ್ಲಿರುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಅಂತರಾಷ್ಟ್ರೀಯ ಮಾರಕಟ್ಟೆಯಲ್ಲಾದ ಬದಲಾವಣೆ ಹಾಗೂ ನಮ್ಮ ದೇಶದಲ್ಲಿ ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ಸಿಗುತ್ತಿದ್ದ ಪ್ರೋತ್ಸಾಹ ಧನ ಕೊರತೆಯಿಂದ ರೇಷ್ಮೆ ಬೆಳೆಗಾರರು ದಿನದಿಂದ ದಿನಕ್ಕೆ ಮಂಕಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ರೇಷ್ಮೆ ಬೆಳೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕಾರಣ ರೇಷ್ಮೆ ಬೆಳೆಗೆ ಬಾಧಿಸುತ್ತಿರುವ ರೋಗಗಳು, ರೇಷ್ಮೆ ಇಲಾಖೆಯ ನಿರ್ಲ್ಯಕ್ಷ, ರೇಷ್ಮೆಯಲ್ಲಿ ಮೂಲೆ ಗುಂಪಾದ ವೈಜ್ಞಾನಿಕ ಸಂಶೋಧನೆ, ಹೊಸ ಹೊಸ ತಳಿಗಳ ಸಂಶೋಧನೆ ಮಾಡುವಲ್ಲಿ ವಿಜ್ಞಾನಿಗಳ ನಿರಾಸಕ್ತಿ, ರೇಷ್ಮೆ ಬೆಳೆಗೆ ಬಾಧಿಸುವ ರೋಗಗಳಿಗೆ ಔಷಧಿಗಳನ್ನು ಕಂಡು ಹಿಡಿಯುವಲ್ಲಿ ವಿಜ್ಞಾನಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸಂಶೋಧನೆ ಇಲ್ಲದೆ ಹೋಗಿದ್ದು ಹಾಗೂ ರೈತರಿಗೆ ರೇಷ್ಮೆ ಇಲಾಖೆಯಿಂದ ನೀಡುತ್ತಿದ್ದ ರೇಷ್ಮೆ ಬೆಳೆಯ ಕುರಿತು ತಿಳುವಳಿಕೆ, ಅರಿವು ಮತ್ತು ಪ್ರೋತ್ಸಾಹ ಎಲ್ಲವೂ ಸ್ಥಗಿತವಾಗಿರುವುದೇ ಮುಖ್ಯ ಕಾರಣವಾಗಿದೆ.
ಕಳೆದ ಮೂರು ನಾಲ್ಕು ದಶಕಗಳಿಂದ ರೇಷ್ಮೆ ಬೆಳೆದು ಜೀವನ ಕಂಡುಕೊಂಡಿದ್ದ ರೈತರು ಮಾರುಕಟ್ಟೆಯಲ್ಲಿ ರೇಷ್ಮೆಗೆ ಬಂಗಾರದಂತ ಉತ್ತಮ ಬೆಲೆ ಇದ್ದರೂ ಕೂಡ, ಏಕಾಏಕಿ ರೇಷ್ಮೆ ಬೆಳೆಯಲಾಗದೆ ನಷ್ಟದ ಸುಳಿಗೆ ಸಿಲುಕುತ್ತಿದ್ದಾರೆ. ಹಿಪ್ಪುನೇರಳೆ ಬೆಳೆಯಲ್ಲಿ ಗುಣಮಟ್ಟದ ಇಳುವರಿ ಬಾರದ ಹಿನ್ನೆಲೆ ಮೇಲಿಂದ ಮೇಲೆ ನಷ್ಟ ಅನುಭವಿಸಿ ಗುಣಮಟ್ಟದ ರೇಷ್ಮೆ ಉತ್ಪಾದನೆ ಮಾಡಲಾಗದೆ ರೈತರು ಕಂಗಾಲಾಗಿ ಹೋಗಿದ್ದಾರೆ. ರೈತರ ನೆರವಿಗೆ ರೇಷ್ಮೆ ಇಲಾಖೆ ಹಾಗೂ ಸರ್ಕಾರ ಇಂದಲ್ಲಾ ನಾಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ಕೊನೆಗೆ ರೇಷ್ಮೆ ಉತ್ಪಾದನೆಯನ್ನೇ ನಿಲ್ಲಿಸಲು ತೀರ್ಮಾನಿಸುತ್ತಿದ್ದಾರೆ.

ಇನ್ನು ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 19,910 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಅಂದರೆ ಹಿಪ್ಪುನೇರಳೆ ಅಥವಾ ಮಲ್ಬೇರಿಯನ್ನು ಬೆಳೆಯುತ್ತಿದ್ದಾರೆ. ಈ ಪೈಕಿ ಸುಮಾರು 1477 ಗ್ರಾಮಗಳ ಜನರು ಈ ರೇಷ್ಮೆ ಬೆಳೆಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇನ್ನು ಕಳೆದ ನಾಲ್ಕೈದು ದಶಕಗಳಿಂದ ರೇಷ್ಮೆ ಬೆಳೆಯನ್ನೇ ನಂಬಿ ಜಿಲ್ಲೆಯ ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅವಲಂಬಿತವಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಸರ್ಕಾರವೂ ಕೂಡ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಗೆ ವಿಲೀನಮಾಡುವ ಕುರಿತು ಹಲವು ಬಾರಿ ಚಿಂತನೆ ಕೂಡ ನಡೆಸಿತ್ತು. ಪರಿಣಾಮ ಸರ್ಕಾರಕ್ಕೂ ರೇಷ್ಮೆ ಇಲಾಖೆಯ ಮೇಲಿದ್ದ ಆಸಕ್ತಿ ಕಡಿಮೆಯಾಗಿದೆ. ಹಾಗಾಗಿಯೇ ರೇಷ್ಮೆ ಬೆಳೆಗಾರರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ರೈತರು ಹಿಪ್ಪುನೇರಳೆ ಬೆಳೆಗೆ ಯಾವತ್ತು ಔಷಧಿ ಸಿಂಪಡಿಸಿರಲಿಲ್ಲ ಆದರೆ ಕಳೆದ ಐದು ವರ್ಷಗಳಿಂದ ಔಷಧಿ ಸಿಂಪಡಿಸದೆ ಗೊಬ್ಬರ ಹಾಕದೆ ಬೆಳೆ ಬೆಳೆಯಲಾಗುತ್ತಿಲ್ಲ. ಬೆಳೆ ಬೆಳೆಯಲು ಸಾವಿರಾರು ರೂ. ಬಂಡವಾಳ ಹಾಕುವ ಪರಿಸ್ಥಿತಿ ಇದೆ. ಇದರ ಜೊತೆಗೆ ಬೆಳೆಯುವ ಹಿಪ್ಪುನೇರಳೆ ಬೆಳೆ ಕೂಡ ಗುಣಮಟ್ಟದ ಬೆಳೆ ಬರುತ್ತಿಲ್ಲ, ಹಿಪ್ಪುನೇರಳೆ ಬೆಳೆಗೆ ಎಲೆಸುರುಳಿ ರೋಗ, ವೈರಸ್ ಕಾಟದಿಂದ ಬೆಳೆ ಕುಂಠಿತವಾಗುತ್ತಿದೆ ಪರಿಣಾಮ ರೈತರು ಗುಣಮಟ್ಟದ ರೇಷ್ಮೆ ಉತ್ಪಾದನೆ ಸಾಧ್ಯವಾಗದೆ ಮಾರುಕಟ್ಟೆಯಲ್ಲೂ ಸರಿಯಾದ ಬೆಲೆ ಸಿಗದೆ ಮೇಲಿಂದ ಮೇಲೆ ನಷ್ಟ ಅನುಭವಿಸುತ್ತಿರುವ ಕಾರಣ ರೈತರು ರೇಷ್ಮೆ ಬೆಳೆಯುವುದನ್ನೇ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಕೂಡಲೇ ಸರ್ಕಾರ ಜಿಲ್ಲೆಯ ರೇಷ್ಮೆ ಇಲಾಖೆಯನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕಿದೆ. ಜೊತೆಗೆ ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಜ್ಞಾನಿಗಳಿಂದ ಸೂಕ್ತ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ರೇಷ್ಮೆಯ ನಾಡು ಕೋಲಾರದಲ್ಲಿ ರೇಷ್ಮೆಯೇ ಕಣ್ಮರೆಯಾಗದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ!
ಒಟ್ಟಾರೆ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದ ರೇಷ್ಮೆ ಜಿಲ್ಲೆಯಲ್ಲಿನ ಮಣ್ಣು, ನೀರು, ವಾತಾವರಣದಲ್ಲಿನ ಏರುಪೇರಿನಿಂದಾಗಿ ರೈತರು ರೇಷ್ಮೆ ಬೆಳೆಯುವುದನ್ನು ನಿಲ್ಲಿಸಿ, ಪರ್ಯಾಯ ಬೆಳೆಗಳತ್ತ ಮುಖ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಎಚ್ಚೆತ್ತು ರೇಷ್ಮೆ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.