ಕ್ಷುಲ್ಲಕ ಕಾರಣಕ್ಕೆ ಗಲಾಟೆ: ರಸ್ತೆ ಜಗಳ ಕೊಲೆಯಲ್ಲಿ ಅಂತ್ಯ, ಇಬ್ಬರ ಬಂಧನ
ಕೋಲಾರ ಜಿಲ್ಲೆಯ ಕಣ್ಣೂರು ಗ್ರಾಮದಲ್ಲಿ ರಸ್ತೆ ವಿವಾದದಿಂದಾಗಿ ಚಾಲಕ ಮಂಜುನಾಥ್ ಹತ್ಯೆಯಾಗಿದೆ. ಮನೆಯ ಮುಂದೆ ಸೌದೆ ಇಟ್ಟಿದ್ದಕ್ಕೆ ಮಂಜುನಾಥ್ ಮತ್ತು ಮುನಿವೆಂಕಟಪ್ಪ ನಡುವೆ ಜಗಳ ನಡೆದು, ಮುನಿವೆಂಕಟಪ್ಪ ಮತ್ತು ಅವನ ಸ್ನೇಹಿತ ರಾಜೇಶ್ ಹಾರೆಯಿಂದ ಮಂಜುನಾಥ್ನನ್ನು ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಲಾರ, ಫೆಬ್ರವರಿ 21: ಅವನು ಡ್ರೈವರ್ ಕೆಲಸ ಮಾಡಿಕೊಂಡು ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಹೀಗಿರುವಾಗ ಅಕ್ಕ-ಪಕ್ಕದ ಮನೆಯವರು ಅವರ ಮನೆ ಮುಂದೆ ಹಾಕಿದ್ದ ಸೌದೆ ಹಾಗೂ ವಸ್ತುಗಳನ್ನು ತೆಗೆಯುವಂತೆ ಹೇಳಿದ್ದಾರೆ. ಇಷ್ಟಕ್ಕೆ ಹಳೆಯ ಕೋಪ ಏನೇನಿತ್ತು ಎಲ್ಲವನ್ನು ಮನಸ್ಸಿಗೆ ತೆಗೆದುಕೊಂಡು ರೌಡಿಗಳಿಬ್ಬರು ಏಕಾಏಕಿ ಹಾರಿಯಿಂದ ತಿವಿದು ಡ್ರೈವರ್ ಪ್ರಾಣವನ್ನು (kill) ತೆಗೆದಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಕಣ್ಣೂರು ಗ್ರಾಮದಲ್ಲಿ ನಡೆದಿದೆ.
ಅಷ್ಟಕ್ಕೂ ಇಲ್ಲಿ ಬರ್ಬರವಾಗಿ ಕೊಲೆಯಾಗಿರುವವನು ಡ್ರೈವರ್ ಮಂಜುನಾಥ್. ಇಲ್ಲಿ ಕೊಲೆಯಾಗುವಂತೆ ಘಟನೆಯಾದರೂ ಏನಾಯ್ತು ಅಂತ ನೋಡಿದರೆ, ಮಂಜುನಾಥ್ ಕಣ್ಣೂರು ಗ್ರಾಮದ ನಿವಾಸಿ. ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಊರಿಗೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಬರುತ್ತಿದ್ದ. ಈತನ ಹೆಂಡತಿ ಹಾಗೂ ಇಬ್ಬರು ಮಕ್ಕಳು ಕೂಡ ಬಂಗಾರಪೇಟೆ ತಾಲ್ಲೂಕು ಹೂವರಸನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ಪತಿಯ ಗುಟ್ಟು ರಟ್ಟು: ಗಂಡನ ಜಿಮ್ ಸೆಂಟರ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಊರಿನಲ್ಲಿದ್ದ ಮನೆ ನೋಡಿಕೊಂಡು ಹೋಗಲು ಮಂಜುನಾಥ್ ಆಗಾಗ ಬರುತ್ತಿದ್ದ. ಅದೇ ರೀತಿ ನಿನ್ನೆ ರಾತ್ರಿ ಕೂಡ ಕಣ್ಣೂರು ಗ್ರಾಮದ ಮನೆಗೆ ಬಂದಿದ್ದ. ಪಕ್ಕದ ಮನೆಯ ವಾಸಿ ಮುನಿವೆಂಟಪ್ಪ ಆಲಿಯಾಸ್ ಅಪ್ಪಿ ಎಂಬುವರು ಮಂಜುನಾಥ್ ಮನೆಯ ಎದುರಲ್ಲಿ ಸೌದೆ, ಸೇರಿದಂತೆ ಹಲವು ವಸ್ತುಗಳನ್ನು ಶೇಖರಿಸಿಟ್ಟಿದ್ದರು. ಮಂಜುನಾಥ್ ಮನೆಯ ಬಾಗಿಲಲ್ಲೇ ಇಟ್ಟಿದ್ದರು. ಇದ್ದ ಐದು ಅಡಿ ಜಾಗದಲ್ಲಿ ಮಂಜುನಾಥ್ ಮನೆಗೆ ಹೋಗೋದಕ್ಕೆ ಆಗುತ್ತಿರಲಿಲ್ಲ. ಈ ವೇಳೆ ಮಂಜುನಾಥ್ ಅದೇ ಮುನಿವೆಂಕಟಪ್ಪ ಆಲಿಯಾಸ್ ಅಪ್ಪಿಯನ್ನು ಮನೆಯ ಬಳಿ ಯಾಕೆ ಹೀಗಿಟ್ಟಿದ್ದೀರಿ, ನಾವು ಮನೆಗೆ ಹೋಗೋದಾದ್ರು ಹೇಗೆ, ಅದನ್ನು ತೆಗೆಯಲು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿ ಕೊಲೆ
ಈ ವೇಳೆ ತನ್ನ ಸ್ನೇಹಿತ ರೌಡಿಶೀಟರ್ ರಾಜೇಶ್ ಜೊತೆಗೆ ಸೇರಿ ಕಂಠಪೂರ್ತಿ ಕುಡಿದು ಕುಳಿತಿದ್ದ ಮುನಿವೆಂಕಟಪ್ಪ ಹಾಗೂ ರಾಜೇಶ್ ಇಬ್ಬರು ಸೇರಿ ಏಕಾಏಕಿ ಮಂಜುನಾಥನಿಗೆ ಹಾರೆಯಿಂದ ಇರಿದಿದ್ದಾರೆ. ಮಂಜುನಾಥ್ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಕಿರುಚಿಕೊಂಡಾಗ ಆತನ ತಲೆಗೆ ಅದೇ ಹಾರೆಯಿಂದ ಇರಿದಿದ್ದಾರೆ. ಈ ವೇಳೆ ಯಾರೂ ಆತನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಕೂಡ ಮಾಡಿಲ್ಲ. ಹೀಗಾಗಿ ತೀವ್ರ ರಕ್ತಸ್ರಾವದಿಂದಾಗಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾತ್ರಿ ಎಷ್ಟೊ ಹೊತ್ತಿನ ನಂತರ ಆತನನ್ನು ಹೋಗಿ ನೋಡಿದಾಗ ಮಂಜುನಾಥ್ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಕ್ಯಾಸಂಬಳ್ಳಿ ಠಾಣೆಯ ಪೊಲೀಸರು ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ರಾಜೇಶ್ ಹಾಗೂ ಮುನಿವೆಂಕಟಪ್ಪರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಬೇತಮಂಗಳ ಪೊಲೀಸ್ ಇನ್ಸ್ಪೆಕ್ಟರ್ ರಂಗಸ್ವಾಮಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಇನ್ನೂ ಗ್ರಾಮಕ್ಕೆ ಬಂದಾಗಲೆಲ್ಲಾ ಕೊಲೆಯಾದ ಮಂಜುನಾಥ್ ಹಾಗೂ ಅಪ್ಪಿ ಆಲಿಯಾಸ್ ಮುನಿವೆಂಕಟಪ್ಪ ಇಬ್ಬರ ನಡುವೆ ಈ ಮನೆಯ ಮುಂದಿನ ರಸ್ತೆ ವಿಚಾರಕ್ಕೆ ಗಲಾಟೆಯಾಗುತ್ತಲೇ ಇತ್ತು. ಈ ವಿಚಾರವಾಗಿ ಇಬ್ಬರ ನಡುವಿನ ಜಗಳ ವೈಷಮ್ಯಕ್ಕೆ ತಿರುಗಿತ್ತು.
ಇದನ್ನೂ ಓದಿ: ಕೋಲಾರ: ಸ್ಮಶಾನದಲ್ಲಿ ವಾಸ, ಅಲ್ಲೇ ಸ್ಕೆಚ್; ಜನರ ನಿದ್ದೆಗೆಡಿಸಿದ್ದ ಮಂಕಿಕ್ಯಾಪ್ ಗ್ಯಾಂಗ್ ಭೇದಿಸಿದ ಖಾಕಿ
ಒಟ್ಟಾರೆ ಮನೆ ಮುಂದಿನ ಸಣ್ಣ ದಾರಿ ವಿಚಾರ ಇಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ದಾರಿ ಮಾಡಿಕೊಟ್ಟಿದೆ. ವಿಷಯ ಸಣ್ಣದ್ದೇ ಆದರೂ ಇಲ್ಲಿ ವೈಷಮ್ಯ ಬೆಳೆದು ನಿಂತಿತ್ತು. ಹಾಗಾಗಿ ಕುಡಿದ ಮತ್ತಿನಲ್ಲಿ ನಡೆದ ಇದೊಂದು ಕೊಲೆಯಿಂದ ಎರಡು ಮನೆಗಿದ್ದ ರಸ್ತೆಯ ಸಮಸ್ಯೆ ಬಗೆಹರಿಯುವ ಬದಲು ಒಬ್ಬ ಸಾವಿನ ದಾರಿ ಹಿಡಿದರೆ ಮತ್ತೊಬ್ಬ ಜೈಲಿನ ದಾರಿ ಹಿಡಿದಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Fri, 21 February 25