
ಕೋಲಾರ, ಮೇ 15: ಕಳೆದ ನಾಲ್ಕೈದು ವರ್ಷಗಳಿಂದ ಕೋಲಾರ (kolar) ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಅರಣ್ಯ ಭೂಮಿ ಒತ್ತುವರಿ (Land encroachment) ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ರೈತರೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ, ಈಗ ಉಲ್ಟಾ ಅರಣ್ಯ ಇಲಾಖೆಯೇ ರೈತರ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂಬ ಆಘಾತಕಾರಿ ಸತ್ಯ ಜಂಟಿ ಸರ್ವೆಯಿಂದ ಬಯಲಾಗಿದೆ ಎಂದು ರೈತರು ದಾಖಲೆ ಸಮೇತ ಆರೋಪಿಸುತ್ತಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ, ಮಾಲೂರು, ಕೋಲಾರ ಮತ್ತು ಮುಳಬಾಗಿಲು ತಾಲೂಕುಗಳಲ್ಲಿ ಅರಣ್ಯ ಇಲಾಖೆ ಈ ಹಿಂದೆ ದೊಡ್ಡ ಮಟ್ಟದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. ಆದರೆ, ಸೆಪ್ಟೆಂಬರ್ 2025ರಲ್ಲಿ ಕೋಲಾರ ತಾಲೂಕಿನ ಹರಟಿ ಗ್ರಾಮದ ಬಳಿಯಿರುವ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ನಡೆದ ತೆರವು ಕಾರ್ಯಾಚರಣೆ ಈಗ ತೀವ್ರ ವಿವಾದಕ್ಕೆ ಈಡುಮಾಡಿದೆ. ಅರಣ್ಯ ಇಲಾಖೆ ತನ್ನ ವ್ಯಾಪ್ತಿಯನ್ನು ಮೀರಿ, ರೈತರಿಗೆ ಸೇರಿದ ಸುಮಾರು 180 ಎಕರೆಯಷ್ಟು ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ಸೆಪ್ಟೆಂಬರ್ 2025ರ ಕಾರ್ಯಾಚರಣೆಯ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಜೆಸಿಬಿಗಳನ್ನು ಬಳಸಿ ರೈತರು ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಗಳು, ಮನೆಗಳು ಹಾಗೂ ಬೋರ್‌ವೆಲ್ ಪಂಪ್ ಮೋಟಾರ್‌ಗಳನ್ನು ಧ್ವಂಸಗೊಳಿಸಲಾಗಿತ್ತು. ಈ ದಬ್ಬಾಳಿಕೆಯ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರು ಜಂಟಿ ಸರ್ವೆಗೆ ಆದೇಶಿಸಿದ್ದರು. ಅದರಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಭೂ ಸರ್ವೆ ಕಾರ್ಯ ಮುಕ್ತಾಯಗೊಂಡಿದ್ದು, ಕಂದಾಯ ಇಲಾಖೆಯ ಭೂದಾಖಲೆಗಳ ಅಧಿಕಾರಿಗಳು ನೀಡಿರುವ ನಕ್ಷೆಯು ರೈತರ ಆರೋಪಕ್ಕೆ ಪುಷ್ಟಿ ನೀಡಿದೆ.
ಲಭ್ಯವಿರುವ ಅಧಿಕೃತ ದಾಖಲೆಗಳ ಪ್ರಕಾರ, 1941ರ ಸೆಟಲ್‌ಮೆಂಟ್ ಅನ್ವಯ ಅರಣ್ಯ ಇಲಾಖೆಗೆ ಸೇರಿರುವುದು ಕೇವಲ 409.35 ಎಕರೆ ಪ್ರದೇಶ ಮಾತ್ರ. ಆದರೆ ಅರಣ್ಯ ಇಲಾಖೆಯೂ ಈ ನಿಗದಿತ ಗಡಿಯನ್ನು ಮೀರಿ ಹೆಚ್ಚುವರಿಯಾಗಿ ರೈತರಿಗೆ ಸೇರಿದ 180 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಅಲ್ಲದೆ, ಸುಮಾರು 200 ಎಕರೆಯಲ್ಲಿದ್ದ ರೈತರ ವಿವಿಧ ಬೆಳೆಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿದೆ ಎಂಬ ಅಂಶ ಜಂಟಿ ಸರ್ವೆ ವೇಳೆ ಬಹಿರಂಗವಾಗಿದೆ.
ಜಂಟಿ ಸರ್ವೆಯ ನಕ್ಷೆಯಿಂದ ಸತ್ಯ ಹೊರಬರುತ್ತಿದ್ದಂತೆ ಎಚ್ಚೆತ್ತಿರುವ ಹರಟಿ ಗ್ರಾಮದ ರೈತರು ಹಾಗೂ ರೈತ ಮುಖಂಡ ಗೋಪಾಲ್ ಮತ್ತು ಜಮೀನು ಕಳೆದುಕೊಂಡಿರುವ ಶ್ರೀನಿವಾಸ್, ‘ಅರಣ್ಯ ಇಲಾಖೆ ತಕ್ಷಣವೇ ತನ್ನ ಹಠಮಾರಿ ಧೋರಣೆ ಬಿಟ್ಟು, ವಶಪಡಿಸಿಕೊಂಡಿರುವ ರೈತರ ಭೂಮಿಯನ್ನು ಮರಳಿ ಬಿಟ್ಟುಕೊಡಬೇಕು. ಕಂದಾಯ ಇಲಾಖೆಯು ತಕ್ಷಣವೇ ರೈತರಿಗೆ ಅಧಿಕೃತ ನಕ್ಷೆಯನ್ನು ಸಿದ್ಧಪಡಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ ಜಾಗಕ್ಕೆ ರೈತರು ಮರುಪ್ರವೇಶ ಮಾಡಿ ಮತ್ತೆ ಗಿಡಗಳನ್ನು ನೆಟ್ಟು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಎರಡೇ ವರ್ಷಗಳಲ್ಲಿ 90 ಸಾವಿರ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ!
ಒಟ್ಟಾರೆಯಾಗಿ ರೈತರು ಹಾಗೂ ಅರಣ್ಯ ಇಲಾಖೆ ನಡುವಿನ ಸಂಘರ್ಷಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಜಂಟಿ ಸರ್ವೆಯ ನಕ್ಷೆ ಸಿದ್ಧವಾದ ಮೇಲೆ ಅರಣ್ಯ ಇಲಾಖೆ ದಾಖಲಾತಿಗಳನ್ನು ಒಪ್ಪದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರೈತರು ಹಾಗೂ ಅರಣ್ಯ ಇಲಾಖೆಯ ನಡುವಿನ ಎರಡನೇ ಹಂತದ ಸಂಘರ್ಷ ಶುರುವಾಗುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.