ಕೋಲಾರ, ಫೆಬ್ರವರಿ 19: ಕೋಲಾರ ಹಾಲು ಒಕ್ಕೂಟದಲ್ಲಿ ನೂರಾರು ಕೋಟಿ ರೂಪಾಯಿ ಡೀಸೆಲ್ ಅವ್ಯವಹಾರ ಎಸಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇದರೊಂದಿಗೆ, ಕೋಲಾರ ಹಾಲು ಒಕ್ಕೂಟದಲ್ಲಿ ಮತ್ತೊಂದು ಹಗರಣದ ಆರೋಪ ಕೇಳಿಬಂದಂತಾಗಿದೆ. ಮಾಲೂರು ಶಾಸಕ ಕೆವೈ ನಂಜೇಗೌಡ ವಿರುದ್ಧ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ದಾಖಲೆ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದಾರೆ.
ಹಾಲು ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು, ಹಾಲು ಸಾಗಾಟದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಕೇವಲ ಐದು ವರ್ಷಗಳಲ್ಲಿ 239 ಕೋಟಿ ರೂಪಾಯಿ ಕೇವಲ ಡೀಸೆಲ್ಗಾಗಿ ಖರ್ಚು ಮಾಡಿದ್ದಾರೆ. ಅಧ್ಯಕ್ಷರ ವಾಹನದ ಡೀಸೆಲ್ಗಾಗಿ 20,56,193 ರೂಪಾಯಿ ಖರ್ಚು ಮಾಡಲಾಗಿದೆ. ವ್ಯವಸ್ಥಾಪಕರ ವಾಹನದ ಡೀಸೆಲ್ಗೆ 8,56,210 ಲಕ್ಷ ರೂ. ಬಳಕೆ ಮಾಡಲಾಗಿದೆ. ಟ್ಯಾಂಕರ್ ಹಾಲು ಸರಬರಾಜಿಗೆ 13,22,98,336 ಕೋಟಿ ರೂಪಾಯಿ ಮೌಲ್ಯದ ಡೀಸಲ್ ಬಳಕೆಯಾಗಿದೆ. ಒಕ್ಕೂಟದ ಅಧಿಕಾರಿಗಳ ಗುತ್ತಿಗೆ ವಾಹನಕ್ಕೆ 5,88,25,425 ಕೋಟಿ ರೂ. ಡೀಸಲ್ ವ್ಯಯಿಸಲಾಗಿದೆ ಎಂದು ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಎಸ್ಎನ್ ನಾರಾಯಣಸ್ವಾಮಿ
ಗುಡ್ ಲೈಫ್ ಹಾಲು ಸಾಗಾಟಕ್ಕೆ 79,58,72,865 ಕೋಟಿ ರೂ., ಪಶು ವೈದ್ಯರ ವಾಹನದ ಡೀಸೆಲ್ಗಾಗಿ 7,69,84,680 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮುಖ್ಯ ಡೈರಿಯಿಂದ ಹಾಲಿನ ಉತ್ಪನ್ನಗಳ ಸಾಗಾಟ ಮಾಡುವ ವಾಹನಕ್ಕೆ 73,01,12,608 ಕೋಟಿ ರೂ. ಡೀಸೆಲ್ ಬಳಸಲಾಗಿದೆ. ಬಿಎಂಸಿ ಕೇಂದ್ರಗಳಿಂದ ಕಚ್ಚಾ ಹಾಲು ಸಾಗಾಟಕ್ಕೆ 60,05,94,883 ಕೋಟಿ ರೂ. ಡೀಸೆಲ್ ಖರೀದಿ ಮಾಡಲಾಗಿತ್ತು. ಈ ಯಾವುದೇ ವ್ಯೆಚ್ಚದ ಲಾಗ್ ಬುಕ್ ಇಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ರೈತರ ಪ್ರವಾಸದ ಹೆಸರಲ್ಲಿ ಹಾಲು ಒಕ್ಕೂಟ 4,93,50,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಆಡಳಿತ ಮಂಡಳಿ ನಿರ್ದೇಶಕರ ಪ್ರವಾಸಕ್ಕೆ 1,15,55,774 ರೂಪಾಯಿ ವ್ಯಯಿಸಲಾಗಿದೆ. ಗೋಲ್ಡನ್ ಡೈರಿ ನಿರ್ಮಾಣದಲ್ಲಿ ಅಕ್ರಮ ಎಸಗಲಾಗಿದೆ. ಸಂಬಂಧಪಟ್ಟ ಯಾವುದೇ ಇಲಾಖೆಗಳಿಂದ ಅನುಮತಿ ಪಡೆಯದೆ ನಿರ್ಮಾಣ ಮಾಡಲಾಗಿದೆ. ಮೇವು ಬೆಳೆಯಲು ಭೂಮಿ ಮಂಜೂರು ಮಾಡಿಸಿಕೊಂಡು ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಸೋಲಾರ್ ಪ್ಲಾಂಟ್ ನಿರ್ಮಾಣದ ಭೂಮಿ ಪೋಡಿ ಆಗಿಲ್ಲ, ಭೂ ಪರಿವರ್ತನೆ ಆಗಿಲ್ಲ, ಸರ್ಕಾರದಿಂದ ಅನುಮತಿ ಪಡೆದಿಲ್ಲ ಅಕ್ರಮವಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ನಾರಾಯಣಸ್ವಾಮಿ ದೂರಿದ್ದಾರೆ.
ಇದನ್ನೂ ಓದಿ: ಏರಿಕೆಯಾಗುತ್ತಾ ನಂದಿನಿ ಹಾಲಿನ ದರ? 5 ರೂ. ಹೆಚ್ಚಿಸಲು ಒಕ್ಕೂಟಗಳ ಮನವಿ
ಆಡಳಿತ ಮಂಡಳಿ ಅವಧಿಗೂ ಮುನ್ನ ಹಣ ಖರ್ಚು ಮಾಡಲು ತರಾತುರಿಯಲ್ಲಿ ಕಾಮಗಾರಿ ಆರಂಭ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ನಾರಾಯಣಸ್ವಾಮಿ ಹೇಳಿದ್ದಾರೆ. ಸಂಸ್ಥೆಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಕಾಳಜಿಯಿಂದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
Published On - 2:13 pm, Wed, 19 February 25