ಗಣಿಯಾಳದಲ್ಲಿ ಏನಾಗ್ತಿದೆಯೋ ತಿಳಿಯುತ್ತಿಲ್ಲ, ಮುಂದಿನ ದಿನಗಳಲ್ಲಿ ಇದು ಕೆಜಿಎಫ್ ನಗರಕ್ಕೆ ದೊಡ್ಡ ಆತಂಕ ತಂದೊಡ್ಡುವ ಅಪಾಯವಿದೆ!
ನೂರಾರು ವರ್ಷಗಳ ಕಾಲ ಇಡೀ ವಿಶ್ವಕ್ಕೆ ಚಿನ್ನವನ್ನು ತನ್ನೊಡಲಿನಿಂದ ಬಗೆದುಕೊಟ್ಟ ಚಿನ್ನದ ನಾಡು ಕೆಜಿಎಫ್ಗೆ ಈಗ ಚಿನ್ನದ ಗಣಿಯೇ ಕಂಟಕವಾಗಿ ಪರಿಣಮಿಸಿದೆ. ಟೊಳ್ಳಾದ ಭೂಗರ್ಭದಲ್ಲಿ ಆಗಾಗ ನಡೆಯುವ ಬಂಡೆ ಕಲ್ಲುಗಳ ಸ್ಫೋಟದಿಂದ ಆಗಾಗ ಅಲುಗಾಡುವ ಕೆಜಿಎಫ್ ಭೂಮಿ ಯಾವಾಗ ಕುಸಿಯುತ್ತದೋ ಅನ್ನೋ ಆತಂಕ ಕೆಜಿಎಫ್ ನಲ್ಲಿ ಶುರುವಾಗಿದೆ..
ನೂರಾರು ವರ್ಷಗಳ ಕಾಲ ಇಡೀ ವಿಶ್ವಕ್ಕೆ ಚಿನ್ನವನ್ನು ತನ್ನೊಡಲಿನಿಂದ ಬಗೆದುಕೊಟ್ಟ ಚಿನ್ನದ ನಾಡು ಕೆಜಿಎಫ್ಗೆ ಈಗ ಚಿನ್ನದ ಗಣಿಯೇ ಕಂಟಕವಾಗಿ ಪರಿಣಮಿಸಿದೆ. ಟೊಳ್ಳಾದ ಭೂಗರ್ಭದಲ್ಲಿ ಆಗಾಗ ನಡೆಯುವ ಬಂಡೆ ಕಲ್ಲುಗಳ ಸ್ಫೋಟದಿಂದ ಆಗಾಗ ಅಲುಗಾಡುವ ಕೆಜಿಎಫ್ ಭೂಮಿ ಯಾವಾಗ ಕುಸಿಯುತ್ತದೋ ಅನ್ನೋ ಆತಂಕ ಕೆಜಿಎಫ್ ನಲ್ಲಿ ಶುರುವಾಗಿದೆ..
ಚಿನ್ನದ ಗಣಿ ಪ್ರದೇಶದಲ್ಲಿ ಭೂ ಕಂಪನ, ತೀವ್ರತೆ ಅಳೆಯುವ ಮಾಪಕ ಸ್ಥಳಾಂತರ..!
ಕೋಲಾರ ಜಿಲ್ಲೆ ಕೆಜಿಎಫ್ ಅಂದರೆ ಅದೊಂದು ಚಿನ್ನದ ನೆಲ, ನೂರಾರು ವರ್ಷಗಳ ಕಾಲ ಚಿನ್ನದ ಕೃಷಿ ಮಾಡಿದ ಭೂಮಿ, ತನ್ನ ಒಡಲಿನಿಂದ ಸಾವಿರಾರು ಟನ್ ಚಿನ್ನವನ್ನು ಇಡೀ ವಿಶ್ವಕ್ಕೆ ಕೊಟ್ಟಂತ ಕೀರ್ತಿ ಕೆಜಿಎಫ್ ಗೆ ಸಲ್ಲುತ್ತದೆ.ಸದ್ಯ ಚಿನ್ನದ ಗಣಿಯಿಂದಲೇ ಹೆಸರುವಾಸಿಯಾಗಿದ್ದ ಕೆಜಿಎಫ್ಗೆ ಈಗ ಚಿನ್ನದ ಗಣಿಯೇ ಆತಂಕ ತಂದೊಡ್ಡುವ ಕೇಂದ್ರವಾಗುತ್ತಿದೆ. ಕೆಜಿಎಫ್ ನಗರಸಭೆಗೆ ಕೆಜಿಎಫ್ನಲ್ಲಿನ ತಮಿಳು ಸಂಘವೊಂದು ಪತ್ರದ ಮೂಲಕ ಮನವಿ ನೀಡಿದ್ದು ಕೆಜಿಎಫ್ನಲ್ಲಿ ಮೊದಲು ನಡೆಯುತ್ತಿದ್ದ ಗಣಿಪ್ರದೇಶದಲ್ಲಿ, ಭೂಮಿ ಒತ್ತಡದ ತೀವ್ರತೆಯಿಂದ ಗಣಿಯಾಳದಲ್ಲಿ ಆಗಾಗ ನಡೆಯುತ್ತಿದ್ದ ಕಲ್ಲುಬಂಡೆ ಸ್ಟೋಟ ಅಥವಾ (ರಾಕ್ ಬರ್ಸ್ಟ್) ನಿಂದ ಕೆಜಿಎಫ್ನಲ್ಲಿ ಆಗಾಗ ಭೂ ಕಂಪನ ಆಗೋದು ಸರ್ವೇ ಸಾಮಾನ್ಯವಾಗಿತ್ತು, ಆದರೆ ಅದರ ತೀವ್ರತೆಯನ್ನು ಅಳತೆ ಮಾಡುವ ಸೆಸ್ಮಿಕ್ ಉಪಕರಣವನ್ನು ಕೆಜಿಎಫ್ನಲ್ಲಿರುವ ಕೇಂದ್ರ ಸರ್ಕಾರದ NIRM (ನ್ಯಾಷನಲ್ ಇನ್ಸ್ ಟ್ಯೋಟ್ ಆಫ್ ರಾಕ್ ಮೆಕಾನಿಕ್ಸ್) ಸಂಸ್ಥೆ ಮಾಪನ ಮಾಡುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಭೂ ಕಂಪನದ ಮಾಪನ ಮಾಡುತ್ತಿದ್ದ ಉಪಕರಣವನ್ನು ಕೇಂದ್ರ ಸರ್ಕಾರದ ಅದೇಶದ ಮೇರೆಗೆ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಪರಿಣಾಮ ಕೆಜಿಎಫ್ನಲ್ಲಿ ಚಿನ್ನದ ಗಣಿಯ ಆಳದಲ್ಲಿ ನಡೆಯುವ ಭೂ ಕಂಪನದ ತೀವ್ರತೆ ಅಥವಾ ಬೆಳವಣಿಗೆಗಳು ತಿಳಿಯುತ್ತಿಲ್ಲ.
ಚಿನ್ನದ ಗಣಿ ಪ್ರದೇಶದಲ್ಲಿ ನಡೆಯುವ ಬೆಳವಣಿಗೆಗಳ ಮಾಹಿತಿ ಸಿಗುತ್ತಿಲ್ಲ ಮುಂದಿದೆ ಆತಂಕ..!
ಇನ್ನು ತಮಿಳು ಸಂಘ ನೀಡಿದ ಮನವಿ ಮೇರೆಗೆ ಚರ್ಚೆ ನಡೆಸಿರುವ ನಗರಸಭೆ ಚಿನ್ನದ ಗಣಿಗಾರಿಕೆ ನಡೆದಿರುವ ಸುಮಾರು ಹತ್ತು ಕಿ.ಮೀ.ಪ್ರದೇಶದಲ್ಲಿ ಯಾವಾಗ ಏನಾಗುತ್ತೆ ಅನ್ನೋ ಮಾಹಿತಿ ಸಿಗುತ್ತಿಲ್ಲ, ಉಪಕರಣ ಇಲ್ಲದೆ ಹೋದಲ್ಲಿ ಮುಂದೊಂದು ದಿನ ಕೆಜಿಎಫ್ ನಗರವೇ ಸಂಪೂರ್ಣವಾಗಿ ಕುಸಿಯಬಹುದು ಅನ್ನೋ ಆತಂಕವನ್ನು ವ್ಯಕ್ತಪಡಿಸಿದ್ದು. ಸದ್ಯ ಈವಿಷಯ ವನ್ನು ಗಂಭೀರವಾಗಿ ಪರಿಗಣಿಸಿರುವ ಕೆಜಿಎಫ್ ನಗರಸಭೆ ತನ್ನ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧ ಪಟ್ಟ NIRM ವಿಜ್ನಾನಿಗಳ ಜೊತೆಗೆ ಚರ್ಚೆ ಮಾಡಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲು ನಿರ್ಧಾರಿಸಿದೆ ಎಂದು ನಗರಸಭೆ ಅಧ್ಯಕ್ಷ ವಲ್ಲಾಳ ಮುನಿಸ್ವಾಮಿ ತಿಳಿಸಿದ್ದಾರೆ.
ರಾಕ್ ಬರ್ಸ್ಟ್ ಆದಾಗಷ್ಟೇ ಅಲ್ಲಾ, ನೀರಿನ ಮಟ್ಟ ಹೆಚ್ಚಾದರೂ ಕುಸಿಯುತ್ತದೆ ಭೂಮಿ..!
ಈ ಬಗ್ಗೆ NIRM ವಿಜ್ನಾನಿ ರಾಜನ್ ಬಾಬು ಹೇಳುವ ಪ್ರಕಾರವಾಗಿ ಕೆಜಿಎಫ್ ಚಿನ್ನದ ಗಣಿಗೆ ಬೀಗ ಹಾಕಿ 22 ವರ್ಷಗಳೇ ಕಳೆದು ಹೋಗಿದೆ ಆದರೆ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ನಿತ್ಯ ನಡೆಯುತ್ತಿದ್ದ ಬಂಡೆಗಳ ಸ್ಟೋಟ, ಭೂ ಕುಸಿತ ಅದರಿಂದ ಆಗುವ ತೀವ್ರತೆ ಅದರ ಪರಿಣಾಮ ಎಲ್ಲವನ್ನೂ ಭೂ ಕಂಪನದ ಮಾಪಕದ ಮೂಲಕ ಅಳತೆ ಮಾಡಲಾಗುತ್ತಿತ್ತು. ಆದರೆ ಈಗ ಗಣಿಯಲ್ಲಿ ಕೆಲಸ ನಡೆಯುತ್ತಿಲ್ಲ ಅದರೆ ಗಣಿಯಾಳದಲ್ಲಿ ಭೂ ಗರ್ಭದಲ್ಲಿನ ಒತ್ತಡದಿಂದ ಸ್ಟೋಟಗೊಳ್ಳುವ ಕಲ್ಲು ಬಂಡೆಗಳಿಂದ(ರಾಕ್ ಬರ್ಸ್ಟ್) ಕೆಜಿಎಫ್ ನಗರದಲ್ಲಿ ಆಗಾಗ ಭೂ ಕಂಪನ ಉಂಟಾಗುತ್ತಿದೆ. ಜೊತೆಗೆ ಗಣಿಯಾಳದಲ್ಲಿ ಈಗ ನೀರು ತುಂಬಿಕೊಂಡಿದ್ದು ಅದರಿಂದ ಭೂ ಕುಸಿತ ಉಂಟಾಗಿಯೂ ಭೂ ಕಂಪನವಾಗುತ್ತಿದೆ.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ..!
ಭೂಕಂಪನದ ತೀವ್ರತೆಯನ್ನು ಮೊದಲು ಇದೇ NIRM ನಲ್ಲಿದ್ದ (ಸೆಸ್ಮಿಕ್ ಉಪಕರಣ) ಭೂಕಂಪನ ತೀವ್ರತೆ ಅಳೆಯುವ ಉಪಕರಣದ ಸಹಾಯದಿಂದ ಯಾವ ಭಾಗದಲ್ಲಿ ಕಂಪನವಾಗಿದೆ ಅದರ ತೀವ್ರತೆ ಏನು ಅದರಿಂದಾದ ಪರಿಣಾಮ ಏನು ಎಲ್ಲವನ್ನೂ ತಿಳಿದುಕೊಳ್ಳಲಾಗುತ್ತಿತ್ತು. ಜೊತೆಗೆ ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು ಆದರೆ ಕಳೆದ ಮೂರು ವರ್ಷಗಳ ಈ ಮಾಪನ ನಡೆಯುತ್ತಿಲ್ಲ. ಕಾರಣ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಆ ಉಪರಣವನ್ನು ತೆಗೆದು ಬೆಂಗಳೂರಿಗೆ ವರ್ಗಾಯಿಸಿದೆ. ಪರಿಣಾಮ ಕೆಜಿಎಫ್ನ ಚಿನ್ನದ ಗಣಿಯಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತಿಳಿಯುತ್ತಿಲ್ಲ. ಹಾಗಾಗಿ ಇದು ಮುಂದಿನ ದಿನಗಳಲ್ಲಿ ಕೆಜಿಎಫ್ ನಗರಕ್ಕೆ ದೊಡ್ಡ ಆತಂಕ ತಂದೊಡ್ಡುವ ಸಾಧ್ಯತೆ ಇದೆ ಎಂದು NIRM ನ ಹಿರಿಯ ವಿಜ್ನಾನಿ ರಾಜನ್ ಬಾಬು ಕೂಡಾ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಈವಿಚಾರವಾಗಿ ಕೋಲಾರ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದ್ದು ಜಿಲ್ಲಾಡಳಿತ ಕೆಂದ್ರ ಗಣಿ ಇಲಾಖೆಗೆ ಪತ್ರದ ಮೂಲಕ ಮಾಹಿತಿ ನೀಡುವುದಾಗಿ ಜಿಲ್ಲಾಧಿಕಾರಿ ವೆಂಕಟ ರಾಜಾ ತಿಳಿಸಿದ್ದಾರೆ.
ಒಟ್ಟಾರೆ ವಿಶ್ವಕ್ಕೆ ಚಿನ್ನವನ್ನು ಕೊಟ್ಟು ವಿಶ್ವದಲ್ಲಿ ಹೆಸರು ಮಾಡಿದ ಕೆಜಿಎಫ್ ನಗರಕ್ಕೆ ಈಗ ಅದೇ ಚಿನ್ನದ ಗಣಿಯಿಂದಲೇ ಕಂಟಕ ಶುರುವಾಗಿದೆ, ಯಾವಾಗ ಏನಾಗುತ್ತದೋ ಅನ್ನೋ ಭಯ ಶುರುವಾಗಿದೆ. ಹಾಗಾಗಿ ಕೂಡಲೇ ಕೆಜಿಎಫ್ ಗಣಿ ಪ್ರದೇಶದ ಗಣಿಯಾಳದಲ್ಲಿ ನಡೆಯುವ ತೀವ್ರತೆಯನ್ನು ಅಳೆಯುವ ಮಾಪನವನ್ನು ಮತ್ತೆ ಜೋಡಿಸಿದಲ್ಲಿ ಮುಂದಾಗುವ ಅನಾಹುತ ನಡೆಯಲು ಮುಂಜಾಗ್ರತ ಕ್ರಮವನ್ನಾದರೂ ಕೈಗೊಳ್ಳಲು ಸಹಕಾರಿ ಅನ್ನೋದು ಎಲ್ಲರ ಅಭಿಪ್ರಾಯ.
– ರಾಜೇಂದ್ರ ಸಿಂಹ