ಪ್ರತ್ಯೇಕ ಘಟನೆ: ಬೈಕ್ಗೆ ಟಿಟಿ ವಾಹನ ಡಿಕ್ಕಿಯಾಗಿ ದಂಪತಿ ಸಾವು; ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ದುರ್ಮರಣ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಕ್ರಾಸ್ನಲ್ಲಿ ಬೈಕ್ಗೆ ಟಿಟಿ ವಾಹನ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆಯೊಂದು ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಸೇತುವೆ ಮೇಲಿಂದ ಕಾರು ಬಿದ್ದು ಐವರ ಪೈಕಿ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ನ ಕೃಷ್ಣಾವರಂ ಬಳಿ ನಡೆದಿದೆ.

ಕೋಲಾರ, ಅಕ್ಟೋಬರ್ 06: ಟಿಟಿ ವಾಹನ ಡಿಕ್ಕಿಯಾಗಿ (accident) ಬೈಕ್ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಕ್ರಾಸ್ನಲ್ಲಿ ನಡೆದಿದೆ. ರಾಮಾಂಜಲು(36), ಕಲಾವತಿ(27) ಮೃತ ದುರ್ದೈವಿಗಳು (death). ಮೃತರು ಆಂಧ್ರದ ಅನ್ನಮಯ್ಯ ಜಿಲ್ಲೆಯ ಯರಂವಾರಪಲ್ಲಿ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ವಗ್ರಾಮದಿಂದ ಬೆಂಗಳೂರಿಗೆ ಕೆಲಸಕ್ಕೆ ತೆರಳುವ ವೇಳೆ ದುರಂತ ಸಂಭವಿಸಿದೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸೇತುವೆ ಮೇಲಿಂದ ಕೆಳಗೆ ಕಾರು ಬಿದ್ದು ಓರ್ವ ಸಾವು: ನಾಲ್ವರಿಗೆ ಗಾಯ
ಮತ್ತೊಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ನ ಕೃಷ್ಣಾವರಂ ಬಳಿ ಸೇತುವೆ ಮೇಲಿಂದ ಕಾರು ಕೆಳಗೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ನಾಲ್ವರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಕರ್ಣ(48) ಮೃತ ವ್ಯಕ್ತಿ.
ಇದನ್ನೂ ಓದಿ: ಬೈಕ್ ಮೇಲೆ ಬಿದ್ದ ಬೃಹತ್ ಮರ: ಯುವತಿ ಸ್ಥಳದಲ್ಲೇ ಸಾವು
ನಾಲ್ವರು ಗಾಯಗಳಿಗೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯ ಮಹಿಳೆಗೆ ಗಂಭೀರ ಗಾಯಗೊಂಡಿರುವಂತಹ ಘಟನೆ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ನಡೆದಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದೆ.
ನೆಲಮಂಗಲ ನಗರ ನಿವಾಸಿ ಮೋಹನ್ ಕುಮಾರ್ (45) ಮೃತ ವ್ಯಕ್ತಿ. ಹೆಂಡತಿ ಜೊತೆಗೆ ತುಮಕೂರು ಕಡೆಯಿಂದ ನೆಲಮಂಗಲ ಕಡೆ ಬರುವಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಾರು ಡಿಕ್ಕಿ: ಇಬ್ಬರು ಬೈಕ್ ಸವಾರರ ಸಾವು
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಪೋತ್ನಾಳ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮರಿಯಮ್ಮ(32) ಹಾಗೂ ಆಕೆಯ ಸೋದರ ಶೇಖರ್(24) ಮೃತರು. ಮರಿಯಮ್ಮ ಮಗಳಾದ 1 ವರ್ಷದ ಗೌತಮಿಗೆ ಗಾಯಗಳಾಗಿದ್ದು, ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ತುಮಕೂರು: ಕಾರಿಗೆ ಖಾಸಗಿ ಬಸ್ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮೂವರು ದುರ್ಮರಣ
ಅಕ್ಕ ಮರಿಯಮ್ಮ, ಆಕೆಯ ಮಗಳನ್ನು ಶೇಖರ್, ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಗ್ರಾಮದಿಂದ ಕರೆದೊಯ್ಯುತ್ತಿದ್ದರು. ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಮರಿಯಮ್ಮ ಹಾಗೂ ಆಕೆಯ ಸೋದರ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅ.4ರಂದು ನಡೆದಿರುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




