ಮಾರುಕಟ್ಟೆಯಲ್ಲಿ ಇಳಿಕೆ ಕಂಡ ತರಕಾರಿ ಬೆಲೆ; ರೈತನಿಗೆ ತಪ್ಪದ ಗೋಳು
ಕಳೆದೊಂದು ವಾರಕ್ಕೆ ಹೋಲಿಕೆ ಮಾಡಿದರೆ ಉಷ್ಣಾಂಷ ಹೆಚ್ಚಾಗಿ ತಾಪಮಾನ ಏರಿಕೆಯಿಂದ ರೈತರು ಬೆಳೆ ಬೆಳೆಯಲಾಗದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಆದ್ರೆ, ಮಳೆಯಾದ ಹಿನ್ನೆಲೆ ಒಂದೆ ವಾರದಲ್ಲಿ ಎಲ್ಲವೂ ಬದಲಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿರುವ ಕಾರಣ ತರಕಾರಿಗಳ ಬೆಲೆ ದಿಢೀರ್ ಕುಸಿತ ಕಂಡಿದೆ.
ಕೋಲಾರ, ಜೂ.06: ಕೋಲಾರ(Kolar)ದ ಎಪಿಎಂಸಿಯಲ್ಲಿ ವ್ಯಾಪಾರ ಇಲ್ಲದೆ ಮೂಟೆ ಗಟ್ಟಲೆ ತರಕಾರಿಗಳನ್ನ (Vegetables) ವ್ಯಾಪಾರಸ್ಥರು ಗುಡ್ಡೆ ಹಾಕಿಕೊಂಡಿದ್ದಾರೆ. ಹೌದು, ಕಳೆದ ತಿಂಗಳು ಬೀನ್ಸ್-200 ರೂಪಾಯಿ ಇತ್ತು, ಈಗ 70 ರೂಪಾಯಿಗೆ ಬಂದಿದೆ. ಮೂಲಂಗಿ- 20, ಸೌತೇಕಾಯಿ ಮೂಟೆ-200 ಹೀಗೆ ಒಂದಕ್ಕಿಂತ ಒಂದು ತರಕಾರಿಯ ಬೆಲೆಗಳು ಒಂದೆ ವಾರದಲ್ಲಿ ಕುಸಿತ ಕಂಡಿದೆ. ಬಿರು ಬಿಸಿಲಿನ ತಾಪಮಾನಕ್ಕೆ ರೈತರು ಬೆಳೆ ಬಳೆಯಲಾಗದೆ ಪರದಾಡುವಂತಾಗಿತ್ತು, ಆದ್ರೆ, ಕಳೆದ ಒಂದು ತಿಂಗಳಿನಿಂದ ಉತ್ತಮವಾದ ಮಳೆ ಹಾಗೂ ಹೊರ ರಾಜ್ಯಗಳಿಂದಲೂ ತರಕಾರಿ ಬರಲಾರಂಭಿಸಿದೆ. ಪರಿಣಾಮ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡಿದೆ.
ರೈತರಿಗೆ ಸಿಗುತ್ತಿಲ್ಲ ಉತ್ತಮ ಬೆಲೆ
ಕಳೆದ 6 ತಿಂಗಳಿನಿಂದ ಮಳೆಯಿಲ್ಲದೆ ರೈತರು ತರಕಾರಿಗಳನ್ನ ಬೆಳೆಯೋದೆ ನಿಲ್ಲಿಸಿದ್ದರು. ಆದ್ರೆ, ಇತ್ತೀಚೆಗೆ ಮಳೆಯಾಗುತ್ತಿರುವ ಹಿನ್ನೆಲೆ ಕೋಲಾರದ ರೈತರು ಹೆಚ್ಚಾಗಿ ಹಣ್ಣು ತರಕಾರಿಗಳನ್ನ ಬೆಳೆಯಲು ಆರಂಭಿಸಿದ್ದಾರೆ. ಅದರಂತೆ ಬೇರೆ ಬೇರೆ ಹಣ್ಣು ತರಕಾರಿಗಳನ್ನ ಹೆಚ್ಚಾಗಿ ಬೆಳೆದು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ತರಕಾರಿ ಉತ್ಪಾದನೆ ಹೆಚ್ಚಾಗಿದ್ದು, ಈಗ ಸರಿಯಾದ ಬೆಲೆ ರೈತರಿಗೆ ಸಿಗುತ್ತಿಲ್ಲ.
ಇದನ್ನೂ ಓದಿ:ತರಕಾರಿ ಬೆಲೆ ದಿಢೀರ್ ಏರಿಕೆ, ಜನ ಹೈರಾಣು
ಕಡಿಮೆಯಾಗದ ಕೊತ್ತಂಬರಿ ಸೊಪ್ಪು, ಟೊಮ್ಯಾಟೊ ಡಿಮ್ಯಾಂಡ್
ಇನ್ನು ಕೋಲಾರ ತರಕಾರಿ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು, ಟೊಮ್ಯಾಟೊಗೆ ಎಂದಿನಂತೆ ಉತ್ತಮ ಬೇಡಿಕೆ ಇದೆ. ಉಷ್ಣಾಂಶ ಹೆಚ್ಚಾದ ಹಿನ್ನೆಲೆ ಬಿಸಿಲಿನಿಂದ ಕೊತ್ತಂಬರಿ ಬೆಳೆಯಾಗಿಲ್ಲ. ಹಾಗಾಗಿ ಕೊತ್ತಂಬರಿ ಸೊಪ್ಪಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಸಧ್ಯ ಟೊಮ್ಯಾಟೊ ಸೀಸನ್ ಆಗಿದ್ದು, 15 ಕೆಜಿ ಬಾಕ್ಸ್ ಟೊಮ್ಯಾಟೊ 300 ರಿಂದ 700 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಆದ್ರೆ, ಮಳೆಯಿಂದ ಕೆಲವು ಮಾರಕ ಖಾಯಿಲೆಗಳು ಸಹ ಹಣ್ಣು ತರಕಾರಿಗಳಿಗೆ ಬರಲಾರಂಭಿಸಿದೆ. ಇದು ರೈತರಿಗೆ ಮತ್ತೊಂದು ಸಂಕಷ್ಟವಾಗಿದೆ.
ಈಗಾಗಲೇ ಟೊಮ್ಯಾಟೊಗೆ ಚುಕ್ಕೆ ರೋಗ, ಎಲೆ ಸುರುಳಿ ಸೇರಿದಂತೆ ಹಲವು ರೋಗಗಳು ಬರಲಾರಂಭಿಸಿವೆ. ಹಾಗಾಗಿ ಇಷ್ಟು ದಿನ ಉಷ್ಣಾಂಷದಿಂದ ಬೆಳೆಗಳನ್ನ ಕಾಪಾಡಿಕೊಳ್ಳುವುದು ರೈತರಿಗೆ ಚಾಲೆಂಜ್ ಆಗಿದ್ರೆ, ಈಗ ಮಳೆಯಿಂದ ರಕ್ಷಣೆ ಮಾಡಬೇಕಾಗಿದೆ. ಮೊದಲು ಬೆಲೆ ಇತ್ತು, ಬೆಳೆ ಇರಲಿಲ್ಲ. ಈಗ ಬೆಲೆ ಇಲ್ಲ, ಬೆಳೆ ಇದೆ. ಇದು ಕೋಲಾರ ರೈತರ ಪರಿಸ್ಥಿತಿಯಾಗಿದೆ. ಜೊತೆಗೆ ಕೋಲಾರ ಎಪಿಎಂಸಿಗೆ ಹೊರ ರಾಜ್ಯಗಳಿಂದ ತರಕಾರಿ ಬರುತ್ತಿರುವುದು ಸಹ ದಿಢೀರ್ ತರಕಾರಿ ಬೆಲೆ ಕುಸಿತಕ್ಕೆ ಕಾರಣ ಎನ್ನವುದು ಮಾರುಕಟ್ಟೆ ವರ್ತಕರ ಮಾತು.
ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿದ್ರೆ, ಇತ್ತ ರೈತರು ಮತ್ತೆ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಂದರೂ, ಬರದೆ ಇದ್ದರೂ ಸಹ ಕೋಲಾರದ ರೈತರು ಒಂದಿಲ್ಲೊಂದು ರೀತಿಯಲ್ಲಿ ನಷ್ಟಕ್ಕೆ ಗುರಿಯಾಗುವುದು ಇಲ್ಲಿ ಸರ್ವೇ ಸಾಮಾನ್ಯ ವಿಚಾರ ಎನ್ನುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ