ಕಿಡಿಗೇಡಿಗಳ ಹೊಟ್ಟೆ ಕಿಚ್ಚು: ವಿಲ ವಿಲ ಒದ್ದಾಡಿ ಪ್ರಾಣಬಿಟ್ಟ ಸಾವಿರಾರು ಮೀನುಗಳು, ರೈತ ಕಂಗಾಲು
ಕಳೆದ ಕೆಲವು ತಿಂಗಳ ಹಿಂದಷ್ಟೇ ಗ್ರಾಮದ ಮುನಿ ಕೃಷ್ಣಪ್ಪ 15 ಸಾವಿರ ರೂಪಾಯಿಗೆ ಆಲಂಬಾಡಿ ಗ್ರಾಮ ಪಂಚಾಯತಿಯಲ್ಲಿ ನಡೆದ ಕೆರೆಯ ಟೆಂಡರ್ ನಲ್ಲಿ ಭಾಗವಹಿಸಿ ಕೆರೆಯ ಟೆಂಡರ್ ಪಡೆದ ನಂತರ ಆಂಧ್ರದಿಂದ ಸುಮಾರು 25 ಸಾವಿರದಷ್ಟು ಮೀನಿನ ಮರಿಯನ್ನು ತಂದು ಬಿಟ್ಟಿದ್ದರು.
ಕೋಲಾರ: ಜಿಲ್ಲೆಯಲ್ಲಿ ರೈತನೊಬ್ಬ ತನ್ನ ವರ್ಷದ ಕೂಳಿಗಾಗಿ ಬಂಡವಾಳ ಹಾಕಿ ಕೆರೆಯೊಂದನ್ನು ಟೆಂಡರ್ ಪಡೆದು ಅದರಲ್ಲಿ ಮೀನು ಸಾಕಾಣಿಕೆ(Fish Farming) ಮಾಡುತ್ತಿದ್ದ, ಎರಡು ಮೂರು ತಿಂಗಳಿಂದ ಮೀನಿಗೆ ಆಹಾರ ಹಾಕಿಕೊಂಡು ಚೆನ್ನಾಗಿಯೇ ಸಾಕಿದ್ದ, ಇನ್ನೇನು ಎರಡು ಮೂರು ತಿಂಗಳಲ್ಲಿ ಫಸಲು ಕೈಗೆ ಬರಬೇಕೆನ್ನುವಷ್ಟರಲ್ಲಿ ಕಿಡಿಗೇಡಿಗಳ ಹೊಟ್ಟೆಕಿಚ್ಚಿನ ಪರಿಣಾಮ ಸಾವಿರಾರು ಮೀನುಗಳು ಕೆರೆಯಲ್ಲೇ ವಿಲ ವಿಲ ಒದ್ದಾಡಿ ಸಾವನ್ನಪ್ಪಿವೆ. ರೈತನ ಸ್ಥಿತಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಕೆರೆ ಟೆಂಡರ್ ಪಡೆದು ಮೀನು ಬಿಟ್ಟಿದ್ದ ರೈತನಿಗೆ ಆಘಾತ
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಜುಂಜನಹಳ್ಳಿಯ ಗ್ರಾಮದ ರೈತ ಮುನಿಕೃಷ್ಣ ಎಂಬುವರು ತಮ್ಮೂರಿನ ಕೆರೆಯನ್ನು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಟೆಂಡರ್ನಲ್ಲಿ ಭಾಗವಹಿಸಿ ತಮ್ಮೂರಿನ ವೆಂಕಟರಾಜನ ಕೆರೆಯನ್ನು ಟೆಂಡರ್ ಪಡೆದಿದ್ದ. ಕೆರೆ ಟೆಂಡರ್ ಪಡೆದು ಮೂರು ತಿಂಗಳು ಕಳೆದಿತ್ತು, ಆಂಧ್ರದಿಂದ ಮೀನುಗಳನ್ನು ತಂದು ಕೆರೆಯಲ್ಲಿ ಬಿಟ್ಟು ಸಾಕಾಣೆ ಮಾಡುತ್ತಿದ್ದ. ಆದರೆ ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ವಿಕೃತಿ ಮರೆದಿದ್ದಾರೆ. ಕೆರೆಗೆ ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಸುಮಾರು 25 ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿವೆ.
ಕಳೆದ ಕೆಲವು ತಿಂಗಳ ಹಿಂದಷ್ಟೇ ಗ್ರಾಮದ ಮುನಿ ಕೃಷ್ಣಪ್ಪ 15 ಸಾವಿರ ರೂಪಾಯಿಗೆ ಆಲಂಬಾಡಿ ಗ್ರಾಮ ಪಂಚಾಯತಿಯಲ್ಲಿ ನಡೆದ ಕೆರೆಯ ಟೆಂಡರ್ ನಲ್ಲಿ ಭಾಗವಹಿಸಿ ಕೆರೆಯ ಟೆಂಡರ್ ಪಡೆದ ನಂತರ ಆಂಧ್ರದಿಂದ ಸುಮಾರು 25 ಸಾವಿರದಷ್ಟು ಮೀನಿನ ಮರಿಯನ್ನು ತಂದು ಬಿಟ್ಟಿದ್ದರು, ಎರಡು ಮೂರು ತಿಂಗಳಿಂದ ಮೀನನ್ನು ಸಾಕಿದ್ದರು, ಈಗಾಗಲೇ ಒಂದೊಂದು ಮೀನು 200 ರಿಂದ 300 ಗ್ರಾಂ ನಷ್ಟು ದಪ್ಪವಾಗಿದ್ದವು. ಆದರೆ ಈ ನಡುವೆ ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಪರಿಣಾಮ ಕೆರೆಯಲ್ಲಿದ್ದ ಮೀನುಗಳು ಸತ್ತು ಬಿದ್ದು ಕೆರೆಯ ದಡದಲ್ಲಿ ಬಂದು ತೇಲುತ್ತಿವೆ. ಇದರಿಂದ ಕೆರೆಯ ಟೆಂಡರ್ ಪಡೆದಿದ್ದ ಮುನಿಕೃಷ್ಣಪ್ಪ ಹಾಗೂ ಅವರ ಕುಟುಂಬ ಆಘಾತಕ್ಕೊಳಗಾಗಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಮೀನು ಸಾಕಾಣಿಕೆಗೆ ಸಕತ್ ಡಿಮ್ಯಾಂಡ್ ಹಾಗೂ ಪೈಪೋಟಿ
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ ಜೊತೆಗೆ ಬೆಂಗಳೂರಿನ ಕೆ.ಸಿ.ವ್ಯಾಲಿ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಈ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯಲ್ಲೂ ಮೀನು ಸಾಕಾಣಿಕೆ ಜೋರಾಗಿಯೇ ನಡೆಯುತ್ತಿದೆ ಹಾಗಾಗಿ ಮೀನು ಕೃಷಿ ಮಾಡೋದಕ್ಕೂ ಕೆರೆಗಳ ಟೆಂಡರ್ ಪ್ರಕ್ರಿಯೆ ನಡೆಯುವಾಗ ಹೆಚ್ಚಿನ ಪೈಪೋಟಿ ಇರುತ್ತದೆ. ಹಾಗಾಗಿ ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ನಡೆದ ಟೆಂಡರ್ ನಮಗೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ಯಾರಾದ್ರು ವೈಶಮ್ಯವಿಟ್ಟುಕೊಂಡು ಹೊಟ್ಟೆಕಿಚ್ಚಿಗೆ ಬಿದ್ದು ಕೆರೆಗೆ ವಿಷ ಹಾಕಿರುವ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.
ಕೆರೆಯ ನೀರೆಲ್ಲಾ ವಿಷವಾಗಿದ್ದು ಜನ ಜಾನುವಾರುಗಳಲ್ಲಿ ಆತಂಕ
ವೈಯಕ್ತಿಕ ದ್ವೇಷವಿದ್ದರೆ ಅವರ ಮೇಲೆ ತೋರಿಸಲಿ ಅದನ್ನು ಬಿಟ್ಟು ಹೀಗೆ ಪ್ರಕೃತಿ ಮೇಲೆ ತೋರಿಸಿದರೆ ಹೇಗೆ ಅಮಾಯಕ ಮೂಕ ಪ್ರಾಣಿಗಳ ಮೇಲೆ ತೋರಿಸಿದ್ದು ತಪ್ಪು, ಜೊತೆಗೆ ಗ್ರಾಮದ ಜಾನುವಾರುಗಳು ಪ್ರಾಣಿ ಪಕ್ಷಿಗಳು ಕೆರೆಯ ನೀರು ಕುಡಿಯುತ್ತವೆ ಹೀಗಿರುವಾಗ ಕೆರೆಯ ನೀರೆಲ್ಲಾ ವಿಷವಾಗಿರುವ ಆತಂಕ ವ್ಯಕ್ತವಾಗಿದೆ. ಅದಕ್ಕಾಗಿಯೇ ಜನರು ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ.
ಸಾಲ ಸೋಲ ಮಾಡಿ ಟೆಂಡರ್ ಪಡೆದಿದ್ದ ರೈತನಿಗೆ ಆತಂಕ
ಸಾಲ ಸೋಲ ಮಾಡಿ ಟೆಂಡರ್ ಪಡೆದು ಹಣ ಹೊಂದಿಸಿಕೊಂಡು ಕೆರೆಯಲ್ಲಿ ಮೀನು ಬಿಟ್ಟು ಸಾಕಾಣೆ ಮಾಡುತ್ತಿದ್ದ ರೈತ ಆತಂಕಕ್ಕಿಡಾಗಿದ್ದಾರೆ. ಆದರೆ ಕೆರೆಯಲ್ಲಿ ಬಿಟ್ಟಿದ್ದ ಮೀನುಗಳೆಲ್ಲಾ ಸದ್ಯ ಕಿಡಿಗೇಡಿಗಳ ಹೊಟ್ಟೆಕಿಚ್ಚಿಗೆ ಬಲಿಯಾಗಿದ್ದು ಮುನಿಕೃಷ್ಣಪ್ಪ ಹಾಗೂ ಅವರ ಕುಟುಂಬಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಸಾಲ ಮಾಡಿ ಹಾಕಿದ್ದ ಬಂಡವಾಳ ಕೈತಪ್ಪಿ ಹೋಗಿದೆ ಯಾರಾದ್ರು ಸಹಾಯ ಮಾಡಿ ಎನ್ನುತ್ತಿದ್ದಾರೆ. ಜೊತೆಗೆ ಬೂದಿಕೋಟೆ ಪೊಲೀಸ್ ಠಾಣೆಗೆ ದೂರು ಕೂಡಾ ನೀಡಿದ್ದಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ