ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​: ದುಡ್ಡು ಕೊಟ್ರೂ ಸಿಗ್ತಿಲ್ಲ ನುಗ್ಗೇಕಾಯಿ!

ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾದ ಪರಿಣಾಮ ವಿವಿಧ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕೋಲಾರದ ಏಷ್ಯಾದ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆಯಲ್ಲಿಯೇ ಪೂರೈಕೆ ಕೊರತೆ ಎದುರಾಗಿದೆ. 15 ಕೆಜಿ ಟೊಮ್ಯಾಟೋ ಬಾಕ್ಸ್ ಬೆಲೆ ದುಪ್ಪಟ್ಟಾಗಿದ್ರೆ, ಕೆಲ ತರಕಾರಿಗಳು ಮಾರುಕಟ್ಟೆಯಿಂದಲೇ ನಾಪತ್ತೆಯಾಗಿವೆ. ಹಣ ಕೊಡ್ತೀವಿ ಎಂದರೂ ಬೇಕಾದ ತರಕಾರಿ ಮಾತ್ರ ಸಿಗುತ್ತಿಲ್ಲ.

ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​: ದುಡ್ಡು ಕೊಟ್ರೂ ಸಿಗ್ತಿಲ್ಲ ನುಗ್ಗೇಕಾಯಿ!
ತರಕಾರಿ ಬೆಲೆ ಗಗನಕ್ಕೆ
Edited By:

Updated on: Dec 03, 2025 | 7:06 PM

ಕೋಲಾರ, ಡಿಸೆಂಬರ್​​ 03: ಹವಾಮಾನ ವೈಪರೀತ್ಯದ ಕಾರಣ ವಿವಿಧ ತರಕಾರಿಗಳ ಬೆಳೆಯ ಇಳುವರಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದ್ರೆ ಬೇಡಿಕೆ ಮಾತ್ರ ಹೆಚ್ಚಿರುವ ಕಾರಣಕ್ಕೆ ಟೊಮ್ಯಾಟೋ ಸೇರಿ ಹಲವು ತರಕಾರಿಗಳ ಬೆಲೆ ಗಗನಕ್ಕೇರಿದ್ದರೆ, ಇನ್ನು ಕೆಲವು ಮಾರುಕಟ್ಟೆಯಿಂದಲೇ ನಾಪತ್ತೆಯಾಗಿವೆ. ಏಷ್ಯಾದಲ್ಲೇ ಅತಿ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಎಂದು ಕರೆಸುಕೊಳ್ಳುವ ಕೋಲಾರ ಎಪಿಎಂಸಿ ಮಾರ್ಕೆಟ್​​ನಲ್ಲಿಯೇ ಪೂರೈಕೆಯ ಅಭಾವ ಕಂಡುಬಂದಿದೆ.

ಬಾಕ್ಸ್​​ ಟೊಮ್ಯಾಟೋ ಬೆಲೆ 600-800 ರೂ.

ಮಾರ್ಕೆಟ್​​ನಲ್ಲಿ ಟೊಮ್ಯಾಟೋಗೆ ಭಾರಿ ಡಿಮ್ಯಾಂಡ್​​ ಬಂದಿದ್ದು, 15 ಕೆಜಿ ತೂಕದ ಒಂದು ಬಾಕ್ಸ್​ 600-800 ರೂಪಾಯಿಗೆ ಮಾರಾಟವಾಗುತ್ತಿದೆ. ಮೊನ್ನೆ ಮೊನ್ನೆವರೆಗೂ ಬಾಕ್ಸ್​​ ಟೊಮ್ಯಾಟೋ ದರ 150-200 ರೂ. ಇತ್ತು. ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ರಾಜ್ಯಗಳಾದ ಮಾಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯಗಳಲ್ಲೂ ಟೊಮ್ಯಾಟೋಗೆ ಬೇಡಿಕೆ ಹೆಚ್ಚಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಪಕ್ಕದ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯದ ಗಡಿ ಭಾಗಗಳಿಂದ ಟೊಮ್ಯಾಟೋ ಸರಬರಾಜಾಗುತ್ತಿದೆ. ಜೊತೆಗೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಡಿಕೇರಿ, ಮಂಡ್ಯ, ಚಾಮರಾಜನಗರ, ಸೇರಿದಂತೆ ಹೊರ ಜಿಲ್ಲೆಗಳ ಟೊಮ್ಯಾಟೋಗಳೂ ಲಗ್ಗೆ ಇಟ್ಟಿವೆ.

ಇದನ್ನೂ ಓದಿ: ಥರಗುಟ್ಟುವ ಚಳಿ ನಡುವೆ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ; ಯಾವುದರ ದರ ಎಷ್ಟಿದೆ?

ಮಳೆಯಿಂದ ನುಗ್ಗೇಕಾಯಿ ಬೆಳೆಗೆ ಹೊಡೆತ

ಇನ್ನು ನುಗ್ಗೇಕಾಯಿ ಹೆಚ್ಚಾಗಿ ಬೆಳೆಯುವ ಪ್ರದೇಶವಾದ ತಮಿಳುನಾಡಿನಲ್ಲಿಯೂ ವರುಣ ಅಬ್ಬರ ಮತ್ತು ಚಂಡಮಾರುತದ ಕಾರಣ ಬೆಳೆ ನೆಲ ಕಚ್ಚಿದೆ. ನಿರೀಕ್ಷಿತ ಮಟ್ಟದ ಬೆಳೆ ಮಾರುಕಟ್ಟೆಗೆ ಬಾರದ ಕಾರಣ ಇದಕ್ಕೂ ಬೇಡಿಕೆ ಹೆಚ್ಚಿದೆ. ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಸಿಗೋದೆ ಕಷ್ಟ ಎಂಬ ಸ್ಥಿತಿ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us