ಏರುತ್ತಲೇ ಇದೆ ಟೊಮ್ಯಾಟೊ ದರ; ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಲ್ಲಿ ಟೊಮ್ಯೊಟೊ ದರ ಎಷ್ಟು ಗೊತ್ತಾ?

ಟೊಮ್ಯಾಟೊ ಬೆಲೆ ಕಳೆದ‌ ಹದಿನೈದು ದಿನಗಳಿಂದ ನಿರಂತರವಾಗಿ ಏರಿಕೆ‌‌ ಕಾಣುತ್ತಿದೆ. ಕೋಲಾರದ ಟೊಮ್ಯಾಟೊಗೆ ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ.

ಏರುತ್ತಲೇ ಇದೆ ಟೊಮ್ಯಾಟೊ ದರ; ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಲ್ಲಿ ಟೊಮ್ಯೊಟೊ ದರ ಎಷ್ಟು ಗೊತ್ತಾ?
ಎಪಿಎಂಸಿ ಮಾರುಕಟ್ಟೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಆಯೇಷಾ ಬಾನು

Updated on: Jul 08, 2023 | 2:58 PM

ಕೋಲಾರ: ಟೊಮ್ಯಾಟೊ ಬೆಲೆ(Tomato Price) ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ(APMC Market) ಇಂದು ಕೂಡಾ ಟೊಮ್ಯಾಟೊ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಹದಿನೈದು ಕೆಜಿಯ ಒಂದು ಬಾಕ್ಸ್ ಟೊಮ್ಯಾಟೊ 1500 ರೂಪಾಯಿಗೆ ಹರಾಜಾಗಿದೆ. ನಿನ್ನೆ 1300-1400 ರೂಪಾಯಿಗೆ ಹರಾಜಾಗಿದ್ದ ಟೊಮ್ಯಾಟೊ, ಈಗ 100 ರೂ ಹೆಚ್ಚಾಗಿದೆ.

ಟೊಮ್ಯಾಟೊ ಬೆಲೆ ಕಳೆದ‌ ಹದಿನೈದು ದಿನಗಳಿಂದ ನಿರಂತರವಾಗಿ ಏರಿಕೆ‌‌ ಕಾಣುತ್ತಿದೆ. ಕೋಲಾರದ ಟೊಮ್ಯಾಟೊಗೆ ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ. ಎಪಿಎಂಸಿಯಲ್ಲೇ ಕೆಜಿ ಟೊಮ್ಯಾಟೊ ಬೆಲೆ 100ರ ಗಡಿ ದಾಟಿದೆ. ಚಿಲ್ಲರೆ‌ ಮಾರುಕಟ್ಟೆಯಲ್ಲಿ 130 ರೂಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಶಿಕ್ಷಣ ಸಚಿವರ ತವರು ಜಿಲ್ಲೆಯೇ ಅವ್ಯವಸ್ಥೆಯ ಆಗರ: ಶಾಲಾ ಕೊಠಡಿಯಲ್ಲಿ ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ

ಕೋಲಾರ ಎಪಿಎಂಸಿ ಮಾರುಕಟ್ಟಯಿಂದ ಟೊಮ್ಯಾಟೊವನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳಿಗೂ ರಪ್ತು ಮಾಡಲಾಗುತ್ತದೆ.  ಕೋಲಾರ ಜಿಲ್ಲೆಯೊಂದರಲ್ಲೇ ಸರಾಸರಿ 20ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮ್ಯಾಟೊ ಬೆಳೆ ಬೆಳೆಯುತ್ತಾರೆ. ಟೊಮ್ಯಾಟೊ ಸೀಸನ್ ಹಿನ್ನೆಲೆ ಪ್ರತಿ ವರ್ಷ ಜೂನ್​, ಜುಲೈ, ಆಗಸ್ಟ್​ ತಿಂಗಳಲ್ಲಿ ಕೋಲಾರ ಮಾರುಕಟ್ಟೆ ಟೊಮ್ಯಾಟೊ ಹಣ್ಣಿನಿಂದ ತುಂಬಿ ತುಳುಕುತ್ತಿತ್ತು, ಆದರೆ ಈ ವರ್ಷ ಟೊಮ್ಯಾಟೋ ಬೆಳೆ ನಿರೀಕ್ಷಿತ  ಮಟ್ಟದಲ್ಲಿ ಬಂದಿಲ್ಲ. ಪ್ರಮುಖವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾತಾವರಣದಲ್ಲಿನ ಏರುಪೇರು ಹಾಗೂ ಟೊಮ್ಯಾಟೋಗೆ ವೈರಸ್​, ಬೆಂಗಿ ರೋಗ, ಎಲೆಸುರುಳಿ ರೋಗ ಕಾಡುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಳೆ ಕುಸಿತ​ ಕಂಡಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಟೊಮ್ಯಾಟೋವನ್ನು ಮಹಾರಾಷ್ಟ್ರ, ನಾಸಿಕ್​, ತಮಿಳುನಾಡು, ಗುಜರಾತ್​, ಪಚ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತಾಗುತ್ತದೆ. ಅಷ್ಟೇ ಅಲ್ಲಾ ಬಾಂಗ್ಲಾದೇಶ, ಪಾಕಿಸ್ತಾನ, ಅಂಡಮಾನ್​ ನಿಕೋಬಾರ್, ಹಾಗೂ ದುಬೈಗೂ ಸಹ ಕೋಲಾರದ ಟೊಮ್ಯಾಟೋ ರಪ್ತಾಗುತ್ತದೆ. ಸದ್ಯ ರೋಗ ಪೀಡಿತ ಬೆಳೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಾರದ ಹಿನ್ನೆಲೆಯಲ್ಲಿ ಟೊಮ್ಯಾಟೋಗೆ ಹೆಚ್ಚಿನ ಬೆಲೆ ಬಂದಿದೆ.

ಇದನ್ನೂ ಓದಿ: Tomato Theft: ರಾತ್ರೋರಾತ್ರಿ ಕೆಂಪು ಸುಂದರಿಯರ ಚೋರಿ! ರೈತನಿಗೆ ಖುಷಿಯ ಜೊತೆಗೆ ಸಂಕಷ್ಟ! ಹಾಸನದಲ್ಲಿ ಮತ್ತೆ ಏನಾಯ್ತು ಟೊಮ್ಯಾಟೋಗೆ?

ಜೂನ್​, ಜುಲೈ, ಆಗಸ್ಟ್​, ತಿಂಗಳಲ್ಲಿ ಉತ್ತರ ಭಾರದಲ್ಲಿ ಹೆಚ್ಚಿನ ಮಳೆಯಾಗುತ್ತದೆ, ಜೊತೆಗೆ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಅಲ್ಲಿ ಬೆಳೆ ಬೆಳೆಯುವ ಪರಿಸ್ಥಿತಿ ಇರೋದಿಲ್ಲ ಹಾಗಾಗಿ ಈ ಸೀಸನ್​ನಲ್ಲಿ ಯಾವಾಗಲೂ ಟೊಮ್ಯಾಟೋಗೆ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಹೆಚ್ಚಿನ ಬೇಡಿಕೆ ಇರುತ್ತದೆ. ಟೊಮ್ಯಾಟೋಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕಳೆದೊಂದು ತಿಂಗಳಿಂದ ಟೊಮ್ಯಾಟೋ ಬೆಲೆ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ. 15 ಕೆಜಿ ಬಾಕ್ಸ್​ ಟೊಮ್ಯಾಟೋಗೆ ಕೋಲಾರದ ಮಾರುಕಟ್ಟೆಯಲ್ಲಿ 1500 ರೂಪಾಯಿ ವರೆಗೆ ಏರಿಕೆ ಕಂಡಿದೆ.

ಇನ್ನು ಒಂದು ತಿಂಗಳು ಇದೇ ರೀತಿ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ, ಉತ್ತರ ಭಾರತದಲ್ಲಿ ಒಂದು ವೇಳೆ ಹೆಚ್ಚಿನ ಮಳೆಯಾಗಿ ಪ್ರಕೃತಿ ವಿಕೋಪಗಳಾದರೆ ಇದರ ಬೆಲೆ ಇನ್ನುಷ್ಟ ಹೆಚ್ಚಾಗುತ್ತದೆ.  ಸದ್ಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮ್ಯಾಟೋ ಬೆಳೆಯನ್ನು ಬಾದಿಸುತ್ತಿರುವ ಬಿಂಗಿ ರೋಗ, ವೈರಸ್​ ರೋಗದ ಕುರಿತು ತೋಟಗಾರಿಕಾ ಇಲಾಖೆ ವಿಜ್ನಾನಿಗಳು ಹಾಗೂ ಅಧಿಕಾರಿಗಳು ಪರಿಹಾರ ಕಂಡುಹಿಡಿಯ ಬೇಕು ಇಲ್ಲವಾದಲ್ಲಿ ಬೆಲೆ ಮತ್ತಷ್ಟು ಏರಿಕೆ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೋಲಾರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ