ಕೋಲಾರ ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿ ಭೂ ಮಂಜೂರಿಗೆ ದಾಖಲೆ ಸೃಷ್ಟಿ! ಕುಣಿಗಲ್ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ಕಳ್ಳತನ!

ಜಿಲ್ಲೆಯೊಂದರ ಪ್ರಥಮ ಅಧಿಕಾರಿಯದ್ದೇ ಸಹಿ ನಕಲು ಮಾಡಿ ದಾಖಲೆ ತಿರುಚಿ, ಭೂಮಿ ಮಂಜೂರು ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಇನ್ನು ಖುದ್ದು ಉಪನೋಂದಣಾಧಿಕಾರಿ ಕಚೇರಿಯಲ್ಲಿಯೇ ಕಳ್ಳತನವೂ ಆಗುತ್ತದೆ! ಇದಪ್ಪಾ ವರಸೆ ಅಂದಿರಾ? ಈ ಎರಡು ಸುದ್ದಿಗಳನ್ನು ಓದಿ.

ಕೋಲಾರ ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿ ಭೂ ಮಂಜೂರಿಗೆ ದಾಖಲೆ ಸೃಷ್ಟಿ! ಕುಣಿಗಲ್ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ಕಳ್ಳತನ!
ಕೋಲಾರ ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿ ಭೂ ಮಂಜೂರಿಗೆ ದಾಖಲೆ ಸೃಷ್ಟಿ! ಕುಣಿಗಲ್ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ಕಳ್ಳತನ!
Follow us
TV9 Web
| Updated By: Digi Tech Desk

Updated on:Jun 23, 2022 | 3:47 PM

ಕೋಲಾರ: ಸಹಿ ನಕಲು, ಭೂ ದಾಖಲೆ ನಕಲು ಇನ್ನೂ ಏನೇನೋ ನಕಲು ಆಗುತ್ತಿರುತ್ತವೆ. ಇನ್ನು ಖುದ್ದು ಉಪನೋಂದಣಾಧಿಕಾರಿ ಕಚೇರಿಯಲ್ಲಿಯೇ ಕಳ್ಳತನವೂ ಆಗುತ್ತದೆ! ಇದಪ್ಪಾ ವರಸೆ ಅಂದಿರಾ? ಈ ಎರಡು ಸುದ್ದಿಗಳನ್ನು ಓದಿ. ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಮಾಡಿ 3.27 ಎಕರೆ ಭೂಮಿ ಮಂಜೂರಿಗೆ ನಕಲಿ ದಾಖಲೆ ಸೃಷ್ಟಿಸಿ, ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಲಾರ ತಾಲೂಕಿನ ಆಲಹಳ್ಳಿಯಲ್ಲಿರುವ ಭೂಮಿಗೆ ಸಂಬಂಧಪಟ್ಟ ದಾಖಲೆ ಇದಾಗಿದೆ. ಕೋಲಾರ ಡಿಸಿ ವೆಂಕಟ್ ರಾಜಾ ಸಹಿ ನಕಲು ಮಾಡಿ ಈ ಕುಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ:

ಕೋಲಾರ ಡಿಸಿ ವೆಂಕಟ್ ರಾಜಾ ಅವರ ಸಹಿಯುಳ್ಳ 3.27 ಎಕರೆ ಭೂಮಿ ಮಂಜೂರಾತಿಯನ್ನು ತಿರಸ್ಕರಿಸಿರುವ ಆದೇಶದ ಪ್ರತಿಯನ್ನ ನಕಲು ಮಾಡಿ ಕುಕೃತ್ಯವೆಸಗಲಾಗಿದೆ. ಆದೇಶ ಪ್ರತಿ ಪುರಸ್ಕರಿಸಲಾಗಿದೆ ಎಂದು ನಕಲು ವರದಿ ಸೃಷ್ಟಿಸಲಾಗಿದೆ! ತಹಶೀಲ್ದಾರ್​ಗೆ ಈ ‘ನಕಲಿ ವರದಿ’ ಸಲ್ಲಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 3 ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಜಾಗ ಎಂದು ತಿದ್ದುಪಡಿ ಮಾಡಿ, ಸನ್​ ಲಾಡ್ಜ್ ಪ್ರಾಪರ್ಟಿ ಎಂಬ ಕಂಪನಿ ಹೆಸರಿಗೆ ನಕಲಿಯಾಗಿ ಮಂಜೂರು ಮಾಡಲಾಗಿದೆ. ಖಾಸಗಿ ಕಂಪನಿಗೆ ಭೂಮಿ ಮಂಜೂರು ಮಾಡುವುದಕ್ಕೆ ನಡೆದಿರುವ ಪ್ರಯತ್ನದಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ತಹಶೀಲ್ದಾರ್ ದೂರು ನೀಡಿದ್ದಾರೆ.

ಕುಣಿಗಲ್ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಳ್ಳತನ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ಸಬ್​ರಿಜಿಸ್ಟ್ರಾರ್ (ಉಪನೋಂದಣಾಧಿಕಾರಿ) ಕಚೇರಿಯಲ್ಲಿ ಕಳ್ಳತನ ನಡೆದಿದೆ. ಕಿಟಕಿಯ ಕಬ್ಬಿಣದ ಕಂಬಿ ಮುರಿದು ಕಚೇರಿಯೊಳಕ್ಕೆ ನುಗ್ಗಿದ ಕಳ್ಳರು ಕಚೇರಿಯಲ್ಲಿ ಹಣ ಸಿಗದೇ ವಾಪಸ್ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಖದೀಮರು ಬೀರುವಿನಲ್ಲಿದ್ದ ಸಿ.ಡಿ. ಬಾಕ್ಸ್ ಕದ್ದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Thu, 23 June 22