ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಗವಿಮಠದಿಂದ ಮೆರವಣಿಗೆ ಆರಂಭಗೊಂಡಿದ್ದು, ಕಾರ್ಖಾನೆಯ ಹೊಗೆ ಮತ್ತು ಧೂಳಿನಿಂದ ತಮ್ಮ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಅನ್ನದಾತರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಜನಪ್ರತಿನಿಧಿಗಳನ್ನು ರೈತರು ತರಾಟೆಗೆ ಪಡೆದ ಪ್ರಸಂಗವೂ ನಡೆದಿದೆ.

ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ
ಬೃಹತ್​​ ಪ್ರತಿಭಟನೆ
Image Credit source: Tv9 Kannada
Edited By:

Updated on: Feb 24, 2026 | 1:20 PM

ಕೊಪ್ಪಳ, ಫೆಬ್ರವರಿ 24: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ.

ರೈತರ ಆಕ್ರೋಶ


ಹಾಲಿವರ್ತಿ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯನ್ನು ಪ್ರದರ್ಶಿಸಲು, ಹಾಳಾದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ; ಹೋರಾಟಕ್ಕಿಳಿದ ರೈತರು

ಪ್ರತಿಭಟನಾ ಸ್ಥಳಕ್ಕೆ ತೊಟ್ಟಿಲು ಸಮೇತ ಆಗಮಿಸಿದ ಮಹಿಳೆಯರು ಕಾರ್ಖಾನೆಗಳ ಹೊಗೆಯಿಂದ ಮಕ್ಕಳಾಗುತ್ತಿಲ್ಲವೆಂದು ಖಾಲಿ ತೊಟ್ಟಿಲು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮಹಿಳೆಯರಿಗೆ ಗರ್ಭಪಾತವಾಗಿದೆ, ನಮಗೆ ಸಂತಾನವಿಲ್ಲ. ಮನೆಯಲ್ಲಿ ತೊಟ್ಟಿಲು ತೂಗೋಕೆ ಆಗುತ್ತಿಲ್ಲವೆಂದು ಕಿಡಿ ಕಾರಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಮಾಸ್ಕ್ ಸಮೇತ ರೈತನೋರ್ವ ಪ್ರತಿಭಟನೆಗೆ ಆಗಮಿಸಿರೋದು ಗಮನ ಸೆಳೆದಿದೆ. ಆಕ್ಸಿಜನ್ ಮಾಸ್ಕ್ ಧರಿಸಿ ಹೋರಾಟದಲ್ಲಿ ಭಾಗಿಯಾಗಿರುವ ಹಿರೇಬಗನಾಳದ ರೈತ ಮಂಜುನಾಥ, ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಉಸಿರಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ.

ರೈತರಿಂದ ಸರ್ಕಾರದ ಶವಯಾತ್ರೆ

ಟ್ರ್ಯಾಕ್ಟರ್​ಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ರೈತರು ಭಾಗಿಯಾಗಿದ್ದು, ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ರೈತರಿಂದ ಸರ್ಕಾರದ ಶವಯಾತ್ರೆ ನಡೆಸಲಾಗಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಕೂಡ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ.

ಜನಪ್ರತಿನಿಧಿಗಳಿಗೆ ತರಾಟೆ

ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಮತ್ತು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್​​ರನ್ನು ರೈತರು ತರಾಟೆಗೆ ಪಡೆದ ಪ್ರಸಂಗವೂ ನಡೆದಿದೆ. ಕಾರ್ಖಾನೆ ವಿಸ್ತರಣೆ ಮಾಡುವಾಗ ಸುಮ್ಮನಿದ್ದು ಇಲ್ಲಿಗ್ಯಾಕೆ ಬಂದ್ರಿ ಎಂದು ಕೊಪ್ಪಳದ ಗಡಿಯಾರ ಕಂಬದ ಬಳಿ ಜನಪ್ರತಿನಿಧಿಗಳನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us