
ಕೊಪ್ಪಳ, ಮಾರ್ಚ್ 15: ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ನಗರದ ಫ್ಯಾನ್ಸಿ ಸ್ಟೋರ್ ಒಂದರಲ್ಲಿ ನಶೆ ನೀಡುವ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಗಂಗಾವತಿ ನಗರದ ದುರ್ಗಾದೇವಿ ಗುಡಿ ಸಮೀಪದಲ್ಲಿರುವ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ನಲ್ಲಿ ನೋವು ನಿವಾರಕ ಮಾತ್ರೆ ಎಂದು ಹೇಳಿ ನಶೆ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಅಂಗಡಿಯ ಮಾಲೀಕ ಕಿಶನ್ ಕುಮಾರ್ ಕೇವಲ ಎರಡು ಮಾತ್ರೆಗಳಿಗೆ ಸುಮಾರು 300 ರೂಪಾಯಿ ವಸೂಲಿ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಈ ಮಾತ್ರೆಗಳನ್ನು ಖರೀದಿಸಿ ಸೇವಿಸುತ್ತಿದ್ದ ಕೆಲ ಯುವಕರು ಬಳಿಕ ಹೆಚ್ಚು ‘ಕಿಕ್’ ಪಡೆಯಲು ಅವನ್ನು ಪುಡಿ ಮಾಡಿ ಇಂಜೆಕ್ಷನ್ ಮೂಲಕ ನೇರವಾಗಿ ನರಗಳಿಗೆ ಹಾಕಿಕೊಳ್ಳಲು ಆರಂಭಿಸಿದ್ದರೆಂಬ ಸಂಗತಿ ಬಹಿರಂಗವಾಗಿದೆ. ಇಂತಹ ಇಂಜೆಕ್ಷನ್ ಬಳಕೆಯಿಂದ ಒಬ್ಬ ಯುವಕನ ಆರೋಗ್ಯ ಹದಗೆಟ್ಟಿದ್ದು, ಆತನೇ ಪೊಲೀಸರಿಗೆ ದೂರು ನೀಡಿದ್ದಾನೆ.
ಲಕ್ಷ್ಮಿ ಕ್ಯಾಂಪ್ ನಿವಾಸಿ ಸಂಗನಗೌಡ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಗಂಗಾವತಿ ನಗರದ ಕೃಷ್ಣಾ ಫ್ಯಾನ್ಸಿ ಸ್ಟೋರ್ ಮೇಲೆ ದಾಳಿ ಮಾಡಿದ್ದಾರೆ. ಯುವಕರಿಗೆ ನಶೆ ಮಾತ್ರೆ ಪೂರೈಸುತ್ತಿದ್ದ ಆರೋಪದ ಮೇಲೆ ಅಂಗಡಿ ಮಾಲೀಕ ಕಿಶನ್ ಕುಮಾರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಹಿಂದೆ ಸ್ಥಳೀಯ ಮೆಡಿಕಲ್ ಸ್ಟೋರ್ ಮಾಲೀಕರ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು
ನಶೆ ಮಾತ್ರೆಗಳ ಜಾಲದಲ್ಲಿ ಸಿಲುಕಿ ಗಂಗಾವತಿ ನಗರದ ಅನೇಕ ಯುವಕರು ತಮ್ಮ ಬದುಕನ್ನು ಹಾಳು ಮಾಡಿಕೊಂಡಿರುವ ಆತಂಕ ವ್ಯಕ್ತವಾಗುತ್ತಿದೆ. ನಶೆ ಮಾಫಿಯಾದ ಅಸಲಿ ಕಿಂಗ್‌ಪಿನ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.