
ಕೊಪ್ಪಳ, (ಏಪ್ರಿಲ್ 30): ಗಂಗಾವತಿ (Gangavathi) ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ (Venkatesh Kurbur Murder Case) ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ. ಯಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಎಪ್ರಿಲ್ 30) ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಆರು ಜನರಿಗೆ ತಲಾ ಮೂರು ಲಕ್ಷ ದಂಡ ವಿಧಿಸಿದ್ದಾರೆ. ರವಿ , ವಿಜಯ್ ಅಲಿಯಾದ್ ಮೈಲಾರಿ, ಧನರಾಜ್, ಭೀಮ್ ಅಲಿಯಾದ್ ಭರತ್, ಸಲೀಮ್ ಮಹಮ್ಮದ್ ರಫೀಕ್, ಗಂಗಾಧರ ಗೌಳಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು.
ಮೊದಲಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಫೂಟೇಜ್ಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಅಪರಾಧಿಗಳು ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.
ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಹಿನ್ನೆಲೆ ಪರಿಗಣಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ವೆಂಕಟೇಶ ಕುರುಬರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಸಂಬಂಧ
ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ವೆಂಕಟೇಶ ಕುರುಬರ ಕೊಲೆ ಕೇಸ್ ನ ಗಂಗಾವತಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಈ ಕೇಸ್ ಸಾಕಷ್ಟು ಚ್ಯಾಲೆಂಜಿಂಗ್ ಆಗಿತ್ತು ಪೊಲೀಸರು ಈ ಕೇಸ್ ಗೆ ನ್ಯಾಯ ಕೊಟ್ಟಿದ್ದಾರೆ. ಇಬ್ಬರು ಜೊತೆಯಲ್ಲೆ ಇದ್ದವರು, ಆದ್ರೆ ನಂತರ ವೈಷಮ್ಯ ಬಂದ ಬೇರೆಯಾಗಿದ್ದರು ಎಂದು ಮಾಹಿತಿ ನೀಡಿದರು.
ಎ1 ಆರೋಪಿ ರವಿ ಮೇಲೆ 17 ಪ್ರಕರಣಗಳು ದಾಖಲಾಗಿದ್ವು, ಗಂಗಾಧರ ಮೇಲೆ 4 ಪ್ರಕರಣಗಳು ಸೇರಿ ಎಲ್ಲರ ಮೇಲೂ ಪ್ರಕರಣಗಳಿವೆ. ಆರೋಪಿ ರವಿ ಮೇಲೆ ಸಾಕಷ್ಟು ಕೇಸ್ ಗಳು ದಾಖಲಾಗಿದ್ವು ಅವರು ನಡೆದುಕೊಂಡ ರೀತಿಯನ್ನ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಅವರ ನಡುವಳಿಕೆ ಇದರಲ್ಲಿ ಗೊತ್ತಾಗತ್ತೆ ಎಂದು ಆದೇಶದಲ್ಲಿ ನ್ಯಾಯಾಲಯ ಉಲ್ಲೇಖ ಮಾಡಿದೆ ಎಂದು ಹೇಳಿದರು.
ಗಂಗಾವತಿ ನಗರದ ಹೊರ ವಲಯದಲ್ಲಿರುವ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ 2025ರ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು.
ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು. ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಕೊಲೆ ಕೇಸ್ ಗೆ ಸಂಭಂದಿಸಿದಂತೆ ಗಂಗಾವತಿ ನಗರ ಪೊಲೀಸರು, 12 ಜನರನ್ನು ಬಂಧಿಸಿದ್ದು, ಸುಮಾರು 927 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹಳೆಯ ದ್ವೇಷ ಮತ್ತು ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾಗಿದ್ದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.
Published On - 3:30 pm, Thu, 30 April 26