
ಕೊಪ್ಪಳ, ಜುಲೈ 17: ಭತ್ತದ ನಾಡು ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ ಅಕ್ಕಿ ಉದ್ಯಮದ ಮೇಲೆ ಬರಗಾಲದ ಬಿಸಿ ತಟ್ಟಿದೆ. ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋದ ಪರಿಣಾಮ, ನೀರಿನ ಅಭಾವದಿಂದ ಭತ್ತದ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರ ನೇರ ಪರಿಣಾಮವಾಗಿ ಸೋನಾ ಮಸೂರಿ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ ದರ ಕೇವಲ 15 ದಿನಗಳಲ್ಲೇ ಏರಿಕೆಯಾಗಿದೆ. ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಹಾನಿಗೊಳಗಾದ ಹಿನ್ನೆಲೆಯಲ್ಲಿ ಗಂಗಾವತಿ ಭಾಗದಲ್ಲಿ ಎರಡನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಭತ್ತದ ಉತ್ಪಾದನೆ ಕುಂಠಿತಗೊಂಡಿತ್ತು. ಈ ವರ್ಷವೂ ಮುಂಗಾರು ದುರ್ಬಲವಾಗಿದ್ದು, ಜಲಾಶಯದಲ್ಲಿ ಕೇವಲ 25 ಟಿಎಂಸಿ ನೀರು ಸಂಗ್ರಹವಿರುವ ಕಾರಣ ಕಾಲುವೆಗಳಿಗೆ ನೀರು ಹರಿಸುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಅನೇಕ ರೈತರು ಭತ್ತ ನಾಟಿಯಿಂದಲೇ ಹಿಂದೆ ಸರಿದಿದ್ದಾರೆ.
ಭತ್ತದ ಲಭ್ಯತೆ ಕಡಿಮೆಯಾಗಿರುವುದರಿಂದ ಅಕ್ಕಿ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕ್ವಿಂಟಾಲ್‌ಗೆ ಸುಮಾರು 200 ರೂ.ನಿಂದ 300 ರೂ.ವರೆಗೆ ಹೆಚ್ಚಳವಾಗಿದೆ. ಈ ಹಿಂದೆ 4,800 ರೂ. ಇದ್ದ ದರ ಈಗ 5,000 ರೂ.ನಿಂದ 5,200 ರೂ.ಗೆ ಏರಿಕೆಯಾಗಿದೆ. ಸೋನಾ ಮಸೂರಿಯ ಜೊತೆಗೆ ಆರ್‌ಎನ್‌ಆರ್ ತಳಿಯ ಅಕ್ಕಿಯ ದರವೂ ಏರಿಕೆ ಕಂಡಿದೆ.
ಭತ್ತದ ಕೊರತೆಯಿಂದ ಗಂಗಾವತಿಯ ಹಲವು ಅಕ್ಕಿ ಮಿಲ್‌ಗಳಿಗೆ ಸಾಕಷ್ಟು ಕಚ್ಚಾ ವಸ್ತು ಸಿಗುತ್ತಿಲ್ಲ. ಪರಿಣಾಮ, ಕೆಲವು ಮಿಲ್‌ಗಳು ನೆರೆಯ ರಾಜ್ಯಗಳಿಂದ ಭತ್ತ ಖರೀದಿಸಿ ಕಾರ್ಯಾಚರಣೆ ಮುಂದುವರಿಸುತ್ತಿವೆ. ಆದರೆ ಇದರಿಂದ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ಎಂದು ಮಿಲ್ ಮಾಲೀಕರು ಹೇಳುತ್ತಿದ್ದಾರೆ.
ಅಕ್ಕಿಯ ಹೋಲ್‌ಸೇಲ್ ದರ ಏರಿಕೆಯ ಪರಿಣಾಮ ಚಿಲ್ಲರೆ ಮಾರುಕಟ್ಟೆಯ ಮೇಲೂ ಬೀಳುತ್ತಿದ್ದು, ಗ್ರಾಹಕರು ಹೆಚ್ಚುವರಿ ಬೆಲೆ ನೀಡಿ ಅಕ್ಕಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆಯಾಗಿ, ನೀರಿನ ಅಭಾವ, ಭತ್ತದ ಉತ್ಪಾದನೆ ಕುಸಿತ ಹಾಗೂ ತುಂಗಭದ್ರಾ ಜಲಾಶಯದ ಸಮಸ್ಯೆಗಳ ಸರಪಳಿಯ ಪರಿಣಾಮ ಭತ್ತದ ನಾಡು ಗಂಗಾವತಿಯ ಅಕ್ಕಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದರ ಹೊರೆ ರೈತರು, ಅಕ್ಕಿ ಮಿಲ್‌ಗಳು ಮತ್ತು ಗ್ರಾಹಕರ ಮೇಲೂ ಬೀಳತೊಡಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Fri, 17 July 26