ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್; ಆತಂಕದಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು

ಕಳೆದ ಐವತ್ತು ವರ್ಷಗಳಿಂದ ರಾಜ್ಯದಲ್ಲಿ ಶಾಲಾಪೂರ್ವ ಶಿಕ್ಷಣದ ಜವಾಬ್ದಾರಿ ಇದ್ದದ್ದು ಅಂಗನವಾಡಿಗಳಿಗೆ. ಆದ್ರೆ, ರಾಜ್ಯ ಸರ್ಕಾರ ನಿಧಾನವಾಗಿ ಅಂಗನವಾಡಿ(Anganwadi)ಗಳನ್ನು ಬಂದ್ ಮಾಡುವ ಚಿಂತನೆಯಲಿದೆಯಾ ಎನ್ನುವ ಅನುಮಾನ ಇದೀಗ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡಲು ಆರಂಭಿಸಿದೆ. ಹೀಗಾಗಿ ಇಂದು(ಜೂ.14) ಕೊಪ್ಪಳ ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್; ಆತಂಕದಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು
ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್; ಆತಂಕದಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 14, 2024 | 3:40 PM

ಕೊಪ್ಪಳ, ಜೂ.14: ಕಳೆದ ಐವತ್ತು ವರ್ಷಗಳಿಂದ ರಾಜ್ಯದಲ್ಲಿ ಶಾಲಾಪೂರ್ವ ಶಿಕ್ಷಣದ ಜವಾಬ್ದಾರಿ ಇದ್ದದ್ದು ಅಂಗನವಾಡಿಗಳಿಗೆ. ಆದ್ರೆ, ರಾಜ್ಯ ಸರ್ಕಾರ ನಿಧಾನವಾಗಿ ಅಂಗನವಾಡಿ(Anganwadi)ಗಳನ್ನು ಬಂದ್ ಮಾಡುವ ಚಿಂತನೆಯಲಿದೆಯಾ ಎನ್ನುವ ಅನುಮಾನ ಇದೀಗ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡಲು ಆರಂಭಿಸಿದೆ. ಇದಕ್ಕೆ ಕಾರಣ, ಸರ್ಕಾರಿ ಶಾಲೆಯಲ್ಲಿ ಸರ್ಕಾರ ಎಲ್​ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಮುಂದಾಗಿರುವುದು. ಹೌದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಯಕರ್ತೆಯರು ಇದೀಗ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ನಿರ್ಧಾರ

ಇಷ್ಟು ದಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ ನಡೆಯುತ್ತಿದ್ದದ್ದು ಅಂಗನವಾಡಿಗಳಲ್ಲಿ. ರಾಜ್ಯದಲ್ಲಿ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಆರಂಭವಾಗಿದ್ದರೂ ಕೂಡ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗಿರಲಿಲ್ಲ. ಹೆಚ್ಚಿನ ಬಡ ಮತ್ತು ಮಧ್ಯಮ ವರ್ಗದವರು ಖಾಸಗಿ ಶಾಲೆಯಲ್ಲಿರುವ ಎಲ್​ಕೆಜಿ,ಯುಕೆಜಿಗೆ ಮಕ್ಕಳನ್ನು ಸೇರಿಸುವ ಬದಲು, ಅಂಗನವಾಡಿಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ಒಂದನೇ ತರಗತಿಗೆ ಮಕ್ಕಳು ದಾಖಲಾಗುವ ಮೊದಲು ಅಂದರೆ ಮೂರರಿಂದ ಆರು ವರ್ಷದ ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲಾಗುತ್ತಿತ್ತು. ಹೀಗಾಗಿ ರಾಜ್ಯಾದ್ಯಂತ ಎಲ್ಲಡೆ ಅಂಗನವಾಡಿಗಳನ್ನು ಆರಂಭಿಸಿದ್ದು, ಅವುಗಳನ್ನು ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನೇಮಕ ಮಾಡಲಾಗಿದೆ. ಆದರೆ ಸರ್ಕಾರ ನಿಧಾನವಾಗಿ ಅಂಗನವಾಡಿಗಳಿಗೆ ಗುಡ್ ಬೈ ಹೇಳಲು ಮುಂದಾಗಿದೆಯಾ ಎನ್ನುವ ಅನುಮಾನಗಳು ಆರಂಭವಾಗಿವೆ.

ಇದನ್ನೂ ಓದಿ:ಅಂಗನವಾಡಿ ಶಿಕ್ಷಕಿಯನ್ನು ಬೈಕ್​​ನಲ್ಲಿ ಕಾಡಿಗೆ ಕರೆದೊಯ್ದ ದುರುಳರು: ಹೀನಾಯ, ಭಯಂಕರ ಕೃತ್ಯವೆಸಗಿದರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಮುಂದಾದ ಸರ್ಕಾರ

ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಸಾವಿರದಾ ಎಂಟು ಸರ್ಕಾರಿ ಶಾಲೆಯಲ್ಲಿ ಈ ವರ್ಷದಿಂದ ಎಲ್​ಕೆಜಿ, ಯುಕೆಜಿ ಆರಂಭ ಮಾಡಲು ಸರ್ಕಾರ ಪರವಾನಗಿ ನೀಡಿದೆ. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಇಲಾಖೆಯವರು ಮಾಡಿರುವ ಮನವಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧೀನ ಕಾರ್ಯದರ್ಶಿ ಪರವಾನಗಿ ನೀಡಿ ಆದೇಶ ಹೊರಡಿಸಿದ್ದಾರೆ. ನಿಗದಿ ಪಡಿಸಿರುವ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್​ಕೆಜಿ, ಯುಕೆಜಿ ಆರಂಭಿಸಬೇಕು. ಎಸ್​ಡಿಎಂಸಿ ಮತ್ತು ಶಾಲೆಯ ಮುಖ್ಯೋಪಾದ್ಯಾಯರು, ಈ ಮಕ್ಕಳಿಗೆ ಬೋಧಿಸಲು, ಓರ್ವ ಅರ್ಹ ಶಿಕ್ಷಕ, ಇಲ್ಲವೇ ಶಿಕ್ಷಕಿ, ಓರ್ವ ಆಯಾರನ್ನು ನೇಮಕ ಮಾಡಿಕೊಳ್ಳಬೇಕು. ಅವರಿಗೆ ಡಯಟ್​ನಿಂದ ತರಬೇತಿ ನೀಡಬೇಕು ಎನ್ನುವುದು ಸೇರಿದಂತೆ ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಿದೆ. ಇದೇ ಶೈಕ್ಷಣಿಕ ವರ್ಷದಿಂದಲೇ ಕಟ್ಟುನಿಟ್ಟಾಗಿ ಎಲ್​ಕೆಜಿ, ಯುಕೆಜಿ ಆರಂಭಿಸುವಂತೆ ತಿಳಿಸಲಾಗಿದೆ.

ಸರ್ಕಾರದ ನಿರ್ಧಾರದ ವಿರುದ್ದ ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು

ಸರ್ಕಾರದ ಈ ನಿರ್ಧಾರ ಇಡೀ ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಅಂಗನವಾಡಿಗೆ ಬರುವ ಮಕ್ಕಳೆ, ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿಗೆ ಸೇರಿದರೆ ಅಂಗನವಾಡಿಗೆ ಯಾರು ಬರೋದಿಲ್ಲ. ಮಕ್ಕಳು ಇಲ್ಲದೇ ಹೋದರೆ ಅಂಗನವಾಡಿಗಳು ಬಂದ್ ಆಗಬಹುದು ಎನ್ನುವ ಆತಂಕ, ಕಾರ್ಯಕರ್ತೆಯರದ್ದು. ಹೀಗಾಗಿ ಇಂದು(ಜೂ.14) ಕೊಪ್ಪಳ ನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಸರ್ಕಾರ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಮಂಗಳೂರು: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು

ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸರಿಸುಮಾರು 1960 ಅಂಗನವಾಡಿಗಳಿದ್ದು, 61 ಸಾವಿರ ಮಕ್ಕಳು ಅಂಗನವಾಡಿಗಳಲ್ಲಿ ಓದುತ್ತಿದ್ದಾರೆ. 1960 ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಇದೀಗ ಹದಿನೈದು ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ಇದೀಗ ಸರ್ಕಾರಿ ಶಾಲೆಯಲ್ಲಿಯೇ ಎಲ್​ಕೆಜಿ, ಯುಕೆಜಿ ಆರಂಭಿಸಿದರೆ, ಅಂಗನವಾಡಿಗೆ ಮಕ್ಕಳು ಬರೋದಿಲ್ಲ. ನಿಧಾನವಾಗಿ ಅಂಗನವಾಡಿಗಳನ್ನು ಬಂದ್ ಮಾಡುತ್ತಾರೆ. ಮುಂದೆ ನಾವು ಬೀದಿಗೆ ಬೀಳುತ್ತೇವೆ ಎನ್ನುವ ಆತಂಕ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಡಲು ಆರಂಭಿಸಿದೆ.

ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸುವುದನ್ನು ಸರ್ಕಾರ ಬಿಡಬೇಕು. ಬದಲಾಗಿ ಅಂಗನವಾಡಿಗಳಿಗೆ ಎಲ್​ಕೆಜಿ, ಯುಕೆಜಿ ನಡೆಸಲು ಅವಕಾಶ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಸರ್ಕಾರ ತನ್ನ ಆದೇಶ ಹಿಂಪಡೆಯದೇ ಇದ್ದರೆ, ಉಗ್ರ ಹೋರಾಟ ನಡೆಸೋ ಎಚ್ಚರಿಕೆ ಕೂಡ ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆ ಜಿ, ಯುಕೆಜಿ ಆರಂಭಿಸಿದ್ರೆ, ಮುಂದೆ ಒಂದನೇ ತರಗತಿಯಿಂದ ಕೂಡ ಮಕ್ಕಳು ಅಲ್ಲಿಯೇ ಮುಂದುವರಿಯುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗೋದಿಲ್ಲ. ಇನ್ನು ಪೂರ್ವಪ್ರಾಥಮಿಕ ಶಿಕ್ಷಣ ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿದ್ದು, ಅದನ್ನು ಶಿಕ್ಷಣ ಇಲಾಕೆಗೆ ಸೇರಿಸುವುದರಿಂದ ಒಂದೇ ಇಲಾಖೆಯಡಿ, ಮಕ್ಕಳ ಸಮಗ್ರ ಶಿಕ್ಷಣಕ್ಕೆ ಅನಕೂಲವಾಗುತ್ತದೆ ಎನ್ನುವುದು ಸರ್ಕಾರದ ಚಿಂತನೆ. ಆದ್ರೆ, ಇದೇ ಇದೀಗ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಭಯಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಆಗಿರುವ ಗೊಂದಲವನ್ನು ಸರ್ಕಾರ ಬಗೆಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Fri, 14 June 24