ಕೊಪ್ಪಳ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದ ಕರಡಿ ಸಂಗಣ್ಣ: ಹೆಚ್ಚಿದ ಕಾಂಗ್ರೆಸ್ ಸೇರ್ಪಡೆ ಗುಮಾನಿ

| Updated By: Ganapathi Sharma

Updated on: Apr 13, 2024 | 2:40 PM

ಕೊಪ್ಪಳದ ರೆಬೆಲ್ ಸಂಸದ ಕರಡಿ ಸಂಗಣ್ಣರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರಾದರೂ ಅವರಿಗೆ ಸೂಕ್ತ ಸ್ಥಾನಮಾನದ ಖಚಿತ ಭರವಸೆ ಇನ್ನೂ ದೊರೆತಿಲ್ಲ. ಪರಿಣಾಮವಾಗಿ ಅವರ ಬೆಂಬಲಿಗರೆಲ್ಲ ಕಾಂಗ್ರೆಸ್ ಸೇರುತ್ತಿದ್ದು, ಸಂಗಣ್ಣ ಸಹ ‘ಕೈ’ ಹಿಡಿಯುತ್ತಾರಾ ಎಂಬ ಅನುಮಾನ ಜೋರಾಗಿದೆ.

ಕೊಪ್ಪಳ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದ ಕರಡಿ ಸಂಗಣ್ಣ: ಹೆಚ್ಚಿದ ಕಾಂಗ್ರೆಸ್ ಸೇರ್ಪಡೆ ಗುಮಾನಿ
ಕರಡಿ ಸಂಗಣ್ಣ
Follow us on

ಕೊಪ್ಪಳ, ಏಪ್ರಿಲ್ 13: ಕೊಪ್ಪಳದಲ್ಲಿ ಬಿಜೆಪಿ (BJP) ಪಾಲಿಗೆ ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ. ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಸಂಗಣ್ಣ, ನಾಯಕರ ಮನವೊಲಿಕೆ ನಂತರ ಪಕ್ಷದಲ್ಲಿಯೇ ಉಳಿದೊಕೊಂಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ಎರಡು ಸಭೆಗಳಲ್ಲಿ ಬಾಗಿಯಾಗಿದ್ದು ಬಿಟ್ಟರೆ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಇನ್ನೊಂದಡೆ ಅವರ ಬೆಂಬಲಿಗರು ಈಗಾಗಲೇ ಕಾಂಗ್ರೆಸ್​​ಗೆ ಸೇರುತ್ತಿದ್ದು, ಕರಡಿ ಸಂಗಣ್ಣ ಕೂಡಾ ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳು ಕೇಳು ಬರುತ್ತಿವೆ.

ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾದ ಕರಡಿ ಸಂಗಣ್ಣ

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದಿದ್ದ ಹಾಲಿ ಸಂಸದ ಕರಡಿ ಸಂಗಣ್ಣಗೆ ಈ ಬಾರಿ ಬಿಜೆಪಿ ನಾಯಕರು ಟಿಕಟ್ ನೀಡಿಲ್ಲ. ಟಿಕೆಟ್ ಸಿಕ್ಕಿಯೇ ಸಿಗುತ್ತದೆ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕರಡಿ ಸಂಗಣ್ಣಕ್ಕೆ ಬಿಜೆಪಿ ನಾಯಕರು ಶಾಕ್ ನೀಡಿದ್ದರು. ಹೀಗಾಗಿ ಕರಡಿ ಸಂಗಣ್ಣ ಪಕ್ಷದ ವಿರುದ್ದ ಮುನಿಸಿಕೊಂಡಿದ್ದರು. ಬೆಂಬಲಿಗರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಕೂಡಾ ನಡೆಸಿದ್ದರು. ಟಿಕೆಟ್ ಬದಲಾವಣೆಗಾಗಿ ಪಟ್ಟು ಹಿಡದಿದ್ದರು. ನಂತರ ಬೆಂಗಳೂರಿಗೆ ಕರಡಿ ಸಂಗಣ್ಣರನ್ನು ಕರೆಸಿಕೊಂಡಿದ್ದ ಬಿಜೆಪಿ ನಾಯಕರು, ಸೂಕ್ತ ಸ್ಥಾನಮಾನದ ಭರವಸೆ ನೀಡಿ ಅಸಮಾಧಾನ ತಣ್ಣಗಾಗಿಸಿದ್ದರು. ಹೀಗಾಗಿ ಕರಡಿ ಸಂಗಣ್ಣ ಕೂಡಾ ಪಕ್ಷದಲ್ಲಿಯೇ ಇರೋದಾಗಿ ಹೇಳಿದ್ದರು. ನಂತರ ಜಿಲ್ಲೆಯ ಎರಡು ಬಿಜೆಪಿ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಕರಡಿ ಸಂಗಣ್ಣ, ಬಿಜೆಪಿ ಪರ ಪ್ರಚಾರ ಮಾಡಿದ್ದರು.

ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರು ಶ್ರಮಿಸಬೇಕು ಅಂತ ಹೇಳಿದ್ದರು. ಆದ್ರೆ ಇದೀಗ ಮತ್ತೆ ಕರಡಿ ಸಂಗಣ್ಣ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಎಲ್ಲಿಯೂ ಪ್ರಚಾರ ಮಾಡದೇ ಇರೋದು, ಅವರು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿವೆ. ಬಿಜೆಪಿ ನಾಯಕರು ಸೂಕ್ತ ಸ್ಥಾನಮಾನದ ಭರವಸೆಯನ್ನು ನೀಡಿದ್ರು. ಅಮಿತ್ ಶಾ ರಾಜ್ಯಕ್ಕೆ ಬಂದಾಗ ಈ ಬಗ್ಗೆ ಚರ್ಚಿಸಿ ಹೇಳೋದಾಗಿ ಹೇಳಿದ್ದರು. ರಾಜ್ಯಸಭಾ ಸಧಸ್ಯ ಇಲ್ಲವೇ ಎಂಎಲ್ಸಿ ಬೇಡಿಕೆ ಇಟ್ಟಿದ್ದರು. ಆದ್ರೆ ಇಲ್ಲಿವರಗೆ ಸ್ಥಾನಮಾನದ ಬಗ್ಗೆ ಹೈಕಮಾಂಡ್ ನಾಯಕರಿಂದ ಯಾವುದೇ ಸಂದೇಶ ಬಂದಿಲ್ಲಾ. ಹೀಗಾಗಿ ಯಾವುದೇ ಸ್ಥಾನಮಾನ ಸಿಗದೇ ಪಕ್ಷದಲ್ಲಿ ಹೇಗೆ ಇರೋದು, ಕಾರ್ಯಕರ್ತರನ್ನು ಹೇಗೆ ಹಿಡಿದಿಟ್ಟುಕೊಳ್ಳುವದು ಅನ್ನೋ ಗೊಂದಲದಲ್ಲಿ ಕರಡಿ ಸಂಗಣ್ಣ ಇದ್ದಾರೆ.

ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಕರಡಿ ಸಂಗಣ್ಣ

ಸೂಕ್ತಸ್ಥಾನಮಾನದ ಖಚಿತ ಭರವಸೆ ಸಿಗದೇ ಇರೋದರಿಂದ ಮತ್ತೆ ಹೈಕಮಾಂಡ್ ನಾಯಕರ ಮೇಲೆ ಕರಡಿ ಸಂಗಣ್ಣ ಸಿಟ್ಟಾಗಿದ್ದಾರೆ. ಜೊತೆಗೆ ಜಿಲ್ಲೆಯ ಬಿಜೆಪಿ ನಾಯಕರು ಕೂಡಾ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಯಾವುದೇ ಸಲಹೆ ಪಡೆಯುತ್ತಿಲ್ಲ. ಹೀಗಾಗಿ ನಾನೇ ಮುಂದೆ ಹೋಗಿ ಹೇಗೆ ಪ್ರಚಾರ ಮಾಡಲಿ ಅಂತ ನೋವನ್ನು ಕರಡಿ ಸಂಗಣ್ಣ ತಮ್ಮ ಬೆಂಬಲಿಗರ ಮುಂದೆ ಹೇಳಿಕೊಂಡಿದ್ದಾರೆ. ಇನ್ನು ಕರಡಿ ಸಂಗಣ್ಣರ ಜೊತೆ ದಶಕಗಳಿಂದ ಗುರುತಿಸಿಕೊಂಡಿದ್ದ ಅನೇಕರು, ಕಾಂಗ್ರೆಸ್ ಸೇರುತ್ತಿದ್ದಾರೆ. ಬೆಂಬಲಿಗರು ಕಾಂಗ್ರೆಸ್​​ಗೆ ಹೋದರೂ ಕೂಡಾ ಅವರನ್ನು ತಡೆಯುವ ಯಾವುದೇ ಕೆಲಸವನ್ನು ಮಾಡದೇ ಇರೋದು, ಕರಡಿ ಸಂಗಣ್ಣ ಕೂಡಾ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರಾ ಅನ್ನೋ ಸಂಶಯಗಳಿಗೆ ಕಾರಣವಾಗುತ್ತಿದೆ. ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ತಾರೆ ಅನ್ನೋ ಗುಮಾನಿ ಕ್ಷೇತ್ರದಲ್ಲಿ ಜೋರಾಗಿದೆ.

ಇನ್ನು ಕರಡಿ ಸಂಗಣ್ಣ ಟಿಕಟ್ ಮಿಸ್ ಆದ ಮೇಲೆ, ಅವರನ್ನು ಕಾಂಗ್ರೆಸ್ ಕರೆತರಲು ಕೈ ನಾಯಕರು ಯತ್ನಿಸಿದ್ದರು. ಆದ್ರೆ ಆಗ ಕರಡಿ ಸಂಗಣ್ಣ ಕಾಂಗ್ರೆಸ್ ಗೆ ಹೋಗಲು ಮನಸು ಮಾಡಿರಲಿಲ್ಲ. ಆದ್ರೆ ಇದೀಗ ಮತ್ತೆ ಬಿಜೆಪಿ ನಾಯಕರ ಅಸಹಕಾರ ತೋರುತ್ತಿದ್ದಾರೆ. ಯಾವುದೇ ಜವಬ್ದಾರಿ ನೀಡಿಲ್ಲ. ಸ್ಥಾನಮಾನವು ಇಲ್ಲಾ ಅಂತ ಕ್ರೋಧಗೊಂಡಿರುವ ಸಂಗಣ್ಣ, ಕಾಂಗ್ರೆಸ್ ಸೇರಲು ಒಲವು ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಕರಡಿ ಸಂಗಣ್ಣರನ್ನು ಕಾಂಗ್ರೆಸ್ ನತ್ತ ಸೆಳೆಯಲು ಪ್ರಯತ್ನ ಆರಂಭಸಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕೊಪ್ಪಳದಲ್ಲಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಅಂತ ಪಣ ತೊಟ್ಟಿರುವ ಕೈ ನಾಯಕರು, ಲಿಂಗಾಯತ ಸಮುದಾಯದ ಕರಡಿ ಸಂಗಣ್ಣರನ್ನು ಪಕ್ಷಕ್ಕೆ ಸೆಳೆಯುವ ಮೂಲಕ, ಲಿಂಗಾಯತ ಮತಗಳು ಕೂಡಾ ಪಕ್ಷಕ್ಕೆ ಬರುವಂತೆ ನೋಡಿಕೊಂಡು, ಅಭ್ಯರ್ಥಿ ಗೆಲ್ಲಿಸಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಕರಡಿ ಸಂಗಣ್ಣರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದು ನಿಜ ಅಂತ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಹೇಳಿದ್ರೆ, ಕರಡಿ ಸಂಗಣ್ಣ ಕಾಂಗ್ರೆಸ್ ಗೆ ಹೋದ್ರೆ ಮೂಲೆಗುಂಪಾಗುತ್ತಾರೆ ಅಂತ ಬಿಜೆಪಿ ಮಾಜಿ ಶಾಸಕ ಬಸವರಾಜ್ ದಡೆಸೂಗುರ ಹೇಳಿದ್ದಾರೆ. ಆದ್ರೆ ಕರಡಿ ಸಂಗಣ್ಣ ಮಾತ್ರ ಯಾವುದೇ ಗುಟ್ಟು ಬಿಟ್ಟು ಕೊಡ್ತಿಲ್ಲ.

ಇದನ್ನೂ ಓದಿ: ಕರಡಿ ಸಂಗಣ್ಣ ಮುನಿಸು ಶಮನ; ಕೊಪ್ಪಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲು ಒಪ್ಪಿಗೆ

ಕರಡಿ ಸಂಗಣ್ಣ, ಸದ್ಯ ಬಿಜೆಪಿಯವರಿಗೆ ಬಿಸಿ ತುಪ್ಪವಾಗುತ್ತಿದ್ದಾರೆ. ಇನ್ನೊಂದಡೆ ಕರಡಿ ಸಂಗಣ್ಣಗೆ ರಾಜಕೀಯ ಭವಿಷ್ಯತ್ತಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಸೇರ್ತಾರಾ ಇಲ್ಲವಾ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ