ಕೊಪ್ಪಳ: ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಅನುಮಾನಾಸ್ಪದ ಸಾವು, ಆಗಿದ್ದೇನು?
ಕೊಪ್ಪಳದ ಕನಕಗಿರಿ ತಾಲ್ಲೂಕಿನ ವರಣಖೇಡ ಗ್ರಾಮದಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಸಾವಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಗ ಹಾಗೂ ಸೊಸೆ ವಿರುದ್ಧ ಆಸ್ತಿಗಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕೊಪ್ಪಳ, ಜನವರಿ 27: ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ಅನುಮಾನಸ್ಪದವಾಗಿ ಜಮೀನಿನಲ್ಲಿ ತಂದೆ (Father) ಸಾವನ್ನಪ್ಪಿರುವಂತಹ (death) ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ವೆಂಕೋಬಾ ಹಂಚಿನಾಳ (50) ಮೃತ ತಂದೆ. ಆಸ್ತಿಗಾಗಿ ತಂದೆಗೆ ಮಗ ವಿಷ ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ವೆಂಕೋಬಾ ಸಾವಿಗೆ ಆತನ ಮಗ ಮತ್ತು ಸೊಸೆ ಕಾರಣ ಎಂದು ಕನಕಗಿರಿ ಪೊಲೀಸ್ ಠಾಣೆಗೆ ವೆಂಕೋಬಾ ತಾಯಿ ಸೂರಮ್ಮ ದೂರು ನೀಡಿದ್ದಾರೆ.
ನಡೆದದ್ದೇನು?
ವೆಂಕೋಬಾ ಹಂಚಿನಾಳ ಅನುಮಾನಸ್ಪದ ಸಾವು ಇದೀಗ ಹಲವು ಅನುಮಾನ ಹುಟ್ಟುಹಾಕಿದೆ. ವಿಷ ಸೇವಿಸಿ ವೆಂಕೋಬಾ ಮೃತ ಪಟ್ಟಿದ್ದಾರೆ, ಆದರೆ ಇದೊಂದು ಕೊಲೆ ಎನ್ನುವುದು ಮೃತ ವೆಂಕೋಬಾ ತಾಯಿಯ ಆರೋಪ. ಮೃತ ವೆಂಕೋಬಾ ಕಳೆದ ಎರಡು ದಿನಗಳ ಹಿಂದೆ ಕಿರುಕುಳ ಹಿನ್ನೆಲೆ ಮೌಖಿಕವಾಗಿ ಮಗ ವಿರೇಶ, ಸೊಸೆ ಕವಿತಾ ಹಾಗೂ ವೆಂಕೋಬಾ ಹೆಂಡತಿ ವಿರುದ್ದ ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡು ದಿನಗಳ ಹಿಂದೆ ದೂರು ನೀಡಿದ ವೆಂಕೋಬಾ, ನಿನ್ನೆ ಸಂಜೆ ಅನುಮಾನಸ್ಪದಾಗಿ ಸಾವನ್ನಪ್ಪಿದ್ದಾರೆ. ಮಗ ಸೇರಿ ಇತರರು ಕೊಲೆ ಮಾಡಿದ್ದಾರೆಂದು ಮೃತನ ತಾಯಿ ಸೂರಮ್ಮ ದೂರು ನೀಡಿದ್ದಾರೆ.
ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್ ಜೊತೆ ಯುವತಿ ಎಸ್ಕೇಪ್: ಪತಿ, ಸೋದರ ಮಾವ ಸೂಸೈಡ್
ಇನ್ನು ವೆಂಕೋಬಾ ಹೇಗೆ ಮೃತಪಟ್ಟರು ಎನ್ನುವುದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಮಗನ ವಿರುದ್ದ ದೂರು ಕೊಟ್ಟಾಗ ಪೊಲೀಸ್ ಠಾಣೆಯಲ್ಲಿ ಮಗ ಹಾಗೂ ಹೆಂಡತಿ ವಿರುದ್ದ ಗಲಾಟೆಯಾಗಿತ್ತು. ಸೊಸೆ ಚಪ್ಪಲಿಯಿಂದ ಹೊಡೆದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಆಸ್ತಿ ವಿಚಾರಕ್ಕೆ ಮಗ ವಿರೇಶ ಹಾಗೂ ತಂದೆ ವೆಂಕೋಬಾ ನಡುವೆ ಗಲಾಟೆಯಾಗಿತ್ತಂತೆ. 10 ಎಕರೆ ಜಮೀನಿಗಾಗಿ ಗಲಾಟೆಗಳಾಗಿದ್ದು, ಕೆಲವು ಭಾರಿ ಗಲಾಟೆ ವಿಕೋಪಕ್ಕೆ ಹೋಗಿತ್ತಂತೆ. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ವೆಂಕೋಬಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಂದೆ ಸಾವಿಗೆ ನಾನು ಕಾರಣವಲ್ಲ: ಮಗ ವಿರೇಶ
ಇದಾದ ಮರುದಿನ ವೆಂಕೋಬಾ ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆದರೆ ನಮ್ಮ ತಂದೆ ಸಾವಿಗೆ ನಾನು ಕಾರಣ ಅಲ್ಲ ಎಂದು ವಿರೇಶ ಹೇಳಿದ್ದು, ಆಸ್ತಿಗಾಗಿ ನಮ್ಮ ತಂದೆಯ ಸಹೋದರಿಯರೇ ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳದಿಂದ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮದುವೆಯಾದ ಎರಡೇ ವರ್ಷಕ್ಕೆ ಉಸಿರು ನಿಲ್ಲಿಸಿದ ಕೀರ್ತಿ ಶ್ರೀ, ಆಗಿದ್ದೇನು?
ಒಟ್ಟಾರೆ ಮಗನ ವಿರುದ್ಧವೇ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಆಸ್ತಿಗಾಗಿ ನಡೆದ ಕೊಲೆನಾ, ಅವಮಾನಕ್ಕೆ ಮಾಡಿಕೊಂಡ ಆತ್ಮಹತ್ಯೆನಾ ಅನ್ನೋದು ಪೊಲೀಸರ ತನಿಖೆಯ ನಂತರವೇ ಬಯಲಾಗಬೇಕಿದೆ. ಮೃತನ ತಾಯಿ ಹಾಗೂ ಮಗ ಇಬ್ಬರು ದೂರು-ಪ್ರತಿದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷಾ ವರದಿ ನಂತರವೇ ಸತ್ಯಾಸತ್ಯತೆ ಬಯಲಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.