ಕೊಪ್ಪಳ: ಕೊಲೆಯಾದ ಗವಿಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಕೇಸ್
ಕೊಪ್ಪಳದ ಗವಿ ಸಿದ್ದಪ್ಪ ನಾಯಕ ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ. ಗವಿ ಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿಯ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿಯ ಪ್ರತಿಭಟನೆ ನಂತರ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಕೊಪ್ಪಳ, ಆಗಸ್ಟ್ 17: ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಗವಿಸಿದ್ದಪ್ಪ (Gavisiddappa) ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ (Pocso) ದಾಖಲಾಗಿದೆ. ಗವಿಸಿದ್ದಪ್ಪ ಹತ್ಯೆಗೆ ಕಾರಣ ಎನ್ನಲಾದ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಹತ್ಯೆಯಾದ ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಬಿಜೆಪಿ ಆಗ್ರಹಿಸಿದ ಮರುದಿನವೇ ಬಾಲಕಿಯ ತಾಯಿ ಪ್ರತ್ಯಕ್ಷವಾಗಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಗವಿಸಿದ್ದಪ್ಪನ ಹತ್ಯೆಯಲ್ಲಿ ನನ್ನ ಮಗಳ ಪಾತ್ರ ಇಲ್ಲವೆಂದು ಧರಣಿ ಕೂತಿದ್ದರು. ಇದೀಗ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ.
ಏನಿದು ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ?
ಆಗಸ್ಟ್ ಮೂರರಂದು ರಾತ್ರಿ ಕೊಪ್ಪಳದ ವಾರ್ಡ್ ನಂಬರ್ ಮೂರರ ಮಸೀದಿ ಮುಂಭಾಗ ಗವಿಸಿದ್ದಪ್ಪ ನಾಯಕ ಎಂಬ 27 ವರ್ಷದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಾದಿಕ್ ಎಂಬಾತ ಈ ಕೃತ್ಯ ಎಸಗಿ ಪೊಲೀಸರಿಗೆ ಶರಣಾಗಿದ್ದ. ನಂತರ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮುಸ್ಲಿಂ ಬಾಲಕಿ ಜೊತೆಗಿನ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು. ನಂತರ ಎಸ್‌ಪಿ ಮತ್ತೊಂದು ಹೇಳಿಕೆ ನೀಡಿ, ಮಾಜಿ ಪ್ರೇಯಸಿಗೆ ಗವಿಸಿದ್ದಪ್ಪ ಟಾರ್ಚರ್ ಕೊಡುತ್ತಿದ್ದುದೇ ಕೊಲೆಗೆ ಕಾರಣ ಎಂದು ಎಸ್‌ಪಿ ಹೇಳಿದ್ದರು. ಎಸ್‌ಪಿ ಪದೇ ಪದೇ ಹೇಳಿಕೆ ಬದಲಾಯಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಕೊಪ್ಪಳ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ವಿಜಯೇಂದ್ರ ಆಗ್ರಹ
ಅಲ್ಲದೆ, ಕೊಲೆಯಾದ ಯುವಕ ವಾಲ್ಮೀಕಿ ಸಮುದಾಯಕ್ಕೆ ಸೇರಿದವನಾಗಿದ್ದುದರಿಂದ, ಸಮಾಜದವರು ಕೂಡ ಸಭೆ ನಡೆಸಿ ನ್ಯಾಯಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದರು. ಆನಂತರ ಬಿಜೆಪಿ ನಾಯಕ ಶ್ರೀರಾಮುಲು ಕೂಡ ಸಂತ್ರಸ್ತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಘಟನೆ ಕುರಿತು ರಾಜಕೀಯ ಚರ್ಚೆಗಳು ಜೋರಾಗಿದ್ದವು.







