ಚುನಾವಣೆ ಹೊತ್ತಲ್ಲೇ ಕೇಸರಿ ಪಡೆಗೆ ಬಿಗ್ ಶಾಕ್: ಬಿಜೆಪಿಗೆ ಗುಡ್​ ಬೈ ಹೇಳಿದ ಸಂಸದ ಕರಡಿ ಸಂಗಣ್ಣ

ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಸಂಸದ ಕರಣ ಸಂಗಣ್ಣ ಬಿಜೆಪಿಗೆ ಗುಡ್​ಬೈ ಹೇಳಿದ್ದಾರೆ. ಈ ಮೂಲಕ ಚುನಾವಣೆ ಹೊತ್ತಲ್ಲೇ ಕರಡಿ ಸಂಗಣ್ಣ ಪಕ್ಷ ತೊರೆಯುವುದರೊಂದಿಗೆ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಚುನಾವಣೆ ಹೊತ್ತಲ್ಲೇ ಕೇಸರಿ ಪಡೆಗೆ ಬಿಗ್ ಶಾಕ್: ಬಿಜೆಪಿಗೆ ಗುಡ್​ ಬೈ ಹೇಳಿದ ಸಂಸದ ಕರಡಿ ಸಂಗಣ್ಣ
ಕರಡಿ ಸಂಗಣ್ಣ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 16, 2024 | 8:36 PM

ಕೊಪ್ಪಳ, (ಏಪ್ರಿಲ್ 16): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa), ರಾಜ್ಯಾಧ್ಯಕ್ಷ ವಿಜಯೇಂದ್ರ ನಡೆಸಿದ್ದ ಸಂಧಾನ ವಿಫಲವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್​ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಹಾಲಿ ಸಂಸದ ಕರಡಿ ಸಂಗಣ್ಣ(Koppal MP Karadi sanganna) ಬಿಜೆಪಿಗೆ (BJP) ಗುಡ್​ಬೈ ಹೇಳಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಲ್ಲಿಸಿದ್ದಾರೆ. ಸಂಸದ ಸ್ಥಾ‌ನಕ್ಕೂ ರಾಜೀನಾಮೆ ನೀಡಿದ್ದು, ಇ-ಮೇಲ್‌ ಮೂಲಕ ಸ್ಪೀಕರ್ ಓಂ ಬಿರ್ಲಾಗೆ ರಾಜೀನಾಮೆ ರವಾನಿಸಿದ್ದಾರೆ. ಇದೀಗ ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿರುವ ಕರಡಿ ಸಂಗಣ್ಣ ಅವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾದಂತಾಗಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆಗಿದ್ದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಕೊಡದೇ ಹೊಸ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಆರಂಭದಿಂದಲೂ ಅಸಮಾಧಾನ ಹೊರ ಹಾಕಿದ್ದ ಕರಡಿ ಸಂಗಣ್ಣ ಅವರು, ನಮ್ಮ ಲೋಕಸಭಾ ಟಿಕೆಟ್‌ ಅನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದ್ರೆ, ಇದ್ಯಾವುದಕ್ಕೂ ಬಿಜೆಪಿ ಹೈಕಮಾಂಡ್ ಆಗಲೀ ಅಥವಾ ರಾಜ್ಯ ಬಿಜೆಪಿ ನಾಯಕರಾಗಲೂ ಸೊಪ್ಪು ಹಾಕಲಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ಸ್ಥಾನಮಾನದ ಭರವಸೆ ನೀಡುವುದಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದ್ರೆ, ಕರಡಿ ಸಂಗಣ್ಣ ಭರವಸೆಗಳನ್ನು ನಿರಾಕರಿಸಿ ಬಿಜೆಪಿಗೆ ಗುಡ್​ ಬೈ ಹೇಳಿದ್ದಾರೆ.

ನಾಳೆ ಕಾಂಗ್ರೆಸ್ ಸೇರ್ಪಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿಯೇ ಕರಡಿ ಸಂಗಣ್ಣ ಬಿಜೆಪಿಗೆ ರಾಜೀನಾಮೆ ನಿಡಿದ್ದಾರೆ  ಎಂದು ತಿಳಿದುಬಂದಿದೆ. ಜೊತೆಗೆ, ಶಾಸಕ ಲಕ್ಷ್ಮಣ ಸವದಿ ಅವರು ನಿನ್ನೆ(ಏಪ್ರಿಲ್ 15) ಕರಡಿ ಸಂಗಣ್ಣ ಅವರನ್ನು ಭೇಟಿ ಮಾಡಿ ಅಂತಿಮವಾಗಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ಕರಡಿ ಸಂಗಣ್ಣ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಬಿಜೆಪಿ ತೊರೆದಿರುವ ಕರಡಿ ಸಂಗಣ್ಣ ನಾಳೆ (ಏಪ್ರಿಲ್ 16)  ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ   ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:59 pm, Tue, 16 April 24